ಮಕ್ಕಳಿಗೆ ಉತ್ತಮ ಸಂಸ್ಕಾರ, ಮೌನವೀಯ ಮೌಲ್ಯ ಕಲಿಸಿ: ಜೆ.ವೈ.ಮಂಜುನಾಥ್

KannadaprabhaNewsNetwork | Published : Jan 9, 2025 12:45 AM

ಸಾರಾಂಶ

ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಕಲಿಸುವ ಪಾಠ ಪ್ರವಚನಗಳನ್ನು ಶ್ರದ್ಧೆಯಿಂದ ಆಲಿಸಿ ಕಲಿಯುವ ಮಕ್ಕಳು ಶೈಕ್ಷಣಿಕ ಪ್ರತಿಭೆ ಹೆಚ್ಚಿಸಿಕೊಳ್ಳಬಹುದು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ವಿದ್ಯಾರ್ಥಿಗಳು ತೊಡಗಿಸಿಕೊಂಡರೆ ಶಿಸ್ತು, ಸಂಯಮ, ಉತ್ತಮ ಸಂಸ್ಕೃತಿ ಸಂಸ್ಕಾರ ಮೈಗೂಡಿಸಿಕೊಳ್ಳಬಹುದು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಸರ್ಕಾರಿ ಶಾಲೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ, ಮಾನವೀಯ ಮೌಲ್ಯ ಹಾಗೂ ಹಿರಿಯರನ್ನು ಗೌರವಿಸುವ ಗುಣಗಳನ್ನು ಕಲಿಸುವುದು ಶಿಕ್ಷಕರ ಜವಾಬ್ದಾರಿ ಎಂದು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜೆ.ವೈ.ಮಂಜುನಾಥ್ ತಿಳಿಸಿದರು.

ತಾಲೂಕಿನ ಅಳೀಸಂದ್ರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳು ರಚಿಸಿದ್ದ ಒಳದನಿ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿ, ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸುವುದಷ್ಟೇ ಪೋಷಕರ ಜವಾಬ್ದಾರಿಯಾಗಜೇ ಅವರ ಶೈಕ್ಷಣಿಕ ಪ್ರಗತಿ ಕುರಿತು ಆಗಾಗ್ಗೆ ಶಾಲೆಗೆ ಭೇಟಿಕೊಟ್ಟು ಪರಿಶೀಲಿಸಬೇಕು ಎಂದರು.

ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಕಲಿಸುವ ಪಾಠ ಪ್ರವಚನಗಳನ್ನು ಶ್ರದ್ಧೆಯಿಂದ ಆಲಿಸಿ ಕಲಿಯುವ ಮಕ್ಕಳು ಶೈಕ್ಷಣಿಕ ಪ್ರತಿಭೆ ಹೆಚ್ಚಿಸಿಕೊಳ್ಳಬಹುದು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ವಿದ್ಯಾರ್ಥಿಗಳು ತೊಡಗಿಸಿಕೊಂಡರೆ ಶಿಸ್ತು, ಸಂಯಮ, ಉತ್ತಮ ಸಂಸ್ಕೃತಿ ಸಂಸ್ಕಾರ ಮೈಗೂಡಿಸಿಕೊಳ್ಳಬಹುದು ಎಂದರು.

ಬೆಂಗಳೂರಿನ ಮಿತ್ರಾ ಫೌಂಡೇಷನ್‌ನ ಡಾ.ಮಂಜುಳ ಮಾತನಾಡಿ, ಗ್ರಾಮದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಪ್ರತಿ ವರ್ಷ ಹೆಚ್ಚಾಗುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸರ್ಕಾರಿ ಶಾಲೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಕ್ಕಳ ಪೋಷಕರು ಪೂರ್ಣ ಪ್ರಮಾಣದ ಸಹಕಾರ ನೀಡಬೇಕು. ಹಳ್ಳಿಗಾಡಿನ ಮಕ್ಕಳು ತಮ್ಮ ಮುಂದಿನ ಭವಿಷ್ಯದ ದೃಷ್ಟಿಯಿಂದ ಸರ್ಕಾರಿ ಶಾಲೆಯಲ್ಲಿಯೇ ವ್ಯಾಸಂಗ ಮಾಡಬೇಕು. ಇದಕ್ಕೆ ನೆರವು ನೀಡುವುದಾಗಿ ಭರವಸೆ ನೀಡಿದರು.

ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಮಂಜುನಾಥ್, ಪ್ರೌಢಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರವಿಕುಮಾರ್, ಮುಖ್ಯ ಶಿಕ್ಷಕ ಸೋಮಶೇಖರ್, ಶಿಕ್ಷಣ ಸಂಯೋಜಕ ಜವರೇಗೌಡ ಸೇರಿದಂತೆ ಹಲವರು ಮಾತನಾಡಿದರು. ಬಳಿಕ ಎರಡೂ ಶಾಲೆಗಳ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಕದಬಹಳ್ಳಿ ಕ್ಲಸ್ಟರ್‌ನ ಸಮೂಹ ಸಂಪನ್ಮೂಲವ್ಯಕ್ತಿ ಪುರುಷೋತ್ತಮ್, ವಕೀಲ ಎ.ಎನ್.ಗಿರಿಜೇಶ್, ಗ್ರಾಪಂ ಸದಸ್ಯೆ ಮಣಿಯಮ್ಮ, ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಶ್ಯಾಮಲಾ, ನಾಗತಿಹಳ್ಳಿ ಶಾಲೆ ಮುಖ್ಯಶಿಕ್ಷಕ ರಘು, ಜೆ.ಜಿ.ಎಂ.ಅಕಾಡೆಮಿ ಅಧ್ಯಕ್ಷ ದಿಲೀಪ್, ರವಿಕುಮಾರ್ ಸೇರಿದಂತೆ ಎರಡೂ ಶಾಲೆಗಳ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಶಿಕ್ಷಕರು ಹಾಗೂ ನೂರಾರು ಮಂದಿ ಪೋಷಕರು ಗ್ರಾಮಸ್ಥರು ಇದ್ದರು.

Share this article