ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸುವುದು ಅಧಿಕಾರಿಗಳ ಕರ್ತವ್ಯ. ಅಧಿಕಾರಿಗಳು ಆಲಸ್ಯದಿಂದ ಆಚೆ ಬಂದು ಕ್ರಿಯಾಶೀಲರಾಗಬೇಕು. ತಾಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳು ಜನಸ್ನೇಹಿಯಾಗಿ ಕೆಲಸ ಮಾಡಬೇಕು ಎಂದು ಶಾಸಕ ಸಿ.ಪಿ.ಯೋಗೇಶ್ವರ್ ತಾಕೀತು ಮಾಡಿದರು.ತಾಲೂಕಿನ ನೀಲಸಂದ್ರ, ತಗಚಗೆರೆ, ವಂದಾರಗುಪ್ಪೆ, ರಾಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿದ್ದ ಇ-ಸ್ವತ್ತು ಆಂದೋಲನಾ ಹಾಗೂ ಸಾರ್ವನಿಕರ ಕುಂದುಕೊರತೆ ಹಾಗೂ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಳೆದ ಅರು ವರ್ಷಗಳಿಂದ ತಾಲೂಕಿನಲ್ಲಿ ಆಡಳಿತ ವ್ಯವಸ್ಥೆ ಕುಸಿದಿದೆ. ಹಿಂದಿನ ಶಾಸಕರು ತಾಲೂಕಿನ ಬಗ್ಗೆ ಅಸಡ್ಡೆ ವಹಿಸಿದ್ದರಿಂದ ತಾಲೂಕು ಇಂದು ಇಷ್ಟು ಸಮಸ್ಯೆಗಳು ಎದುರಿಸುತ್ತಿದೆ. ಅಧಿಕಾರಿಗಳು ನಿದ್ದೆಯಿಂದ ಎದ್ದು ಇನ್ನು ಮುಂದೆ ಕೆಲಸ ಮಾಡಬೇಕು. ಗ್ರಾಮಗಳಿಗೆ ತೆರಳಿ ಜನರ ಸಮಸ್ಯೆ ಪರಿಹರಿಸುವ ನಿಟ್ಟನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಸೂಚನೆ ನೀಡಿದರು. ಗ್ರಾಪಂ ಪಂಚಾಯಿತಿ ವ್ಯಾಪ್ತಿಯಲ್ಲಿ ಜನರ ಸಮಸ್ಯೆಗಳನ್ನು ಕೇಳಲು ನಾವು ಇಲ್ಲಿ ಬಂದಿದ್ದೇವೆ. ಕೆಲ ಗ್ರಾಮ ಪಂಚಾಯಿತಿ ಕುರಿತು ಜನರಲ್ಲಿ ಒಂದಷ್ಟು ಒಳ್ಳೆ ಅಭಿಪ್ರಾಯವಿದ್ದರೆ, ಟೀಕೆ ಟಿಪ್ಪಣಿ ಕೂಡ ಬರುವುದು ಸಹಜ. ಏನೇ ಸಮಸ್ಯೆ ಇದ್ದರೂ ಜನಸಾಮಾನ್ಯರ ಕುಂದುಕೊರತೆಗಳಿಗೆ ಸ್ಪಂದಿಸುವುದು ಅಧಿಕಾರಿಗಳ ಕರ್ತವ್ಯ ಎಂದರು.ಕೆಲವು ಕಡೆ ಸಿಬ್ಬಂದಿ ಕೊರತೆ ಕುರಿತು ಕೆಲವರು ಗಮನ ಸೆಳೆದಿದ್ದಾರೆ. ಅದನ್ನು ಪರಿಹರಿಸಲಾಗುವುದು. ಒಂದೆರಡು ಕಡೆ ಕೆರೆಕಟ್ಟೆಗಳನ್ನು ತುಂಬಿಸುವಂತೆ, ಸುಸಜ್ಜಿತ ಅಂಬೇಡ್ಕರ್ ಭವನಕ್ಕೆ ಬೇಡಿಕೆ ಇಟ್ಟಿದ್ದಾರೆ. ಕೆಲವು ಕಡೆ ರಸ್ತೆ ಡಾಂಬರೀಕರಣ ಆಗಬೇಕು. ಚರಂಡಿ, ಶಾಲೆಯ ಅಭಿವೃದ್ಧಿ ಕುರಿತು ಬೇಡಿಕೆ ಇಟ್ಟಿದ್ದಾರೆ ಎಲ್ಲವನ್ನು ಹಂತಹಂತವಾಗಿ ಪರಿಹರಿಸಲಾಗುವುದು ಎಂದರು. ಇ-ಸ್ವತ್ತು ಆಂದೋಲನ ಕೇವಲ ಹೆಸರಿಗಷ್ಟೇ ಸೀಮಿತವಾಗಬಾರದು, ಪ್ರಾಮಾಣಿಕವಾಗಿ ಕೆಲಸ ಮಾಡಿ ಜನರಿಗೆ ಅನುಕೂಲ ಕಲ್ಪಿಸಬೇಕು. ಕೆಲವರು ತಾತಾ, ಮುತ್ತಾತನ ಕಾಲದಿಂದ ಖಾತೆ ಮಾಡಿಕೊಂಡಿರುವುದಿಲ್ಲ. ಇದಲ್ಲದೇ ಸಾಕಷ್ಟು ಕಾರಣಗಳಿಂದ ಸಮಸ್ಯೆಯಾಗಿದೆ. ಸರ್ಕಾರದಿಂದಲೂ ಸಹ ಕೆಲ ಲೋಪದೋಷವಾಗಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಸಮಸ್ಯೆಯಾಗಿದೆ. ಇದಕ್ಕೆಲ್ಲ ಪರಿಹಾರ ಸಿಗಲಿದೆ ಎಂಬ ವಿಶ್ವಾಸವಿದೆ ಎಂದರು. ಇ_ಖಾತೆ ವಿಚಾರದಲ್ಲಿ ಸಾಕಷ್ಟು ಕಠಿಣ ನಿಬಂಧನೆಗಳಿವೆ. ಕಂಪ್ಯೂಟರ್ ಯುಗವಾಗಿದ್ದು, ಎಲ್ಲ ಆನ್‌ಲೈನ್ ಮೂಲಕವೇ ಎಲ್ಲ ಆಗಬೇಕಿದೆ. ಇದರಿಂದ ಒಂದಷ್ಟು ಸಮಸ್ಯೆಯಾಗಿದೆ. ಕೆಲವು ಕಡೆ ಸ್ಮಶಾನದ ಸಮಸ್ಯೆ ಇದೆ, ಅದನ್ನು ಪರಿಹರಿಸಲಾಗುವುದು ಎಂದರು. ಗ್ರಾಮೀಣ ಪ್ರದೇಶದಲ್ಲಿ ಹತ್ತಾರು ಸಮಸ್ಯೆಗಳು ಎದ್ದುಕಾಣುತ್ತಿವೆ. ನಾವು ಮೊದಲ ಹಂತದಲ್ಲಿ ಎಲ್ಲ ೩೨ ಗ್ರಾಪಂಗಳಿಗೂ ಭೇಟಿ ನೀಡುವ ಕೆಲಸ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಯುಗಾದಿ ನಂತರ ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಸಮಸ್ಯೆಗಳನ್ನು ಪರಿಹರಿಸಲು ಆದ್ಯತೆ ನೀಡಲಾಗುವುದು ಎಂದರು. ಕಳೆದ ಮೂರು ದಿನದಿಂದ ಜನರ ಸಮಸ್ಯೆ ಅರಿಯುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಭೆಗಳನ್ನು ನಡೆಸಲಾಗುತ್ತಿದೆ. ಆದರೆ, ಇದರಲ್ಲಿ ಕೆಲವು ಇಲಾಖೆ ಅಧಿಕಾರಿಗಳ ಗೈರು ಹಾಜರಿ ಎದ್ದು ಕಾಣುತ್ತಿದೆ. ನಾವು ಇಲ್ಲಿ ಸುಮ್ಮನೆ ಆಟ ಆಡಲು ಬಂದಿಲ್ಲ. ಕೆಲಸ ಮಾಡಲು ಬಂದಿದ್ದೇವೆ ಎಂಬದನ್ನು ಅಧಿಕಾರಿಗಳು ಅರಿತುಕೊಳ್ಳಬೇಕು. ಸಭೆಗೆ ತಪ್ಪದೇ ಬರುವುದನ್ನು ಅಧಿಕಾರಿಗಳು ರೂಢಿಸಿಕೊಳ್ಳಬೇಕು ಎಂದು ಕಿಡಿಕಾರಿದರು. ಈ ಸಂದರ್ಭದಲ್ಲಿ ತಾಪಂ ಇಒ ಸಂದೀಪ್. ಎಇಇ ಶಂಕರಪ್ಪ, ಗ್ಯಾರೆಂಟಿ ಯೋಜನೆ ತಾಲೂಕು ಅಧ್ಯಕ್ಷ ರಂಗನಾಥ್, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಪೊಟೋ೯ಸಿಪಿಟಿ೧: ತಾಲೂಕಿನ ನೀಲಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿದ್ದ ಇ-ಸ್ವತ್ತು ಆಂದೋಲನಾ ಹಾಗೂ ಸಾರ್ವನಿಕರ ಕುಂದುಕೊರತೆ ಹಾಗೂ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಶಾಸಕ ಸಿ.ಪಿ.ಯೋಗೇಶ್ವರ್ ಅವರನ್ನು ಸನ್ಮಾನಿಸಲಾಯಿತು.