ಪ್ರವೀಣ್ ಘೋರ್ಪಡೆ
ಪಟ್ಟಣದ ಬಸ್ ನಿಲ್ದಾಣದ ಮುಂಭಾಗದಲ್ಲಿ ನಿರ್ಮಿಸಲಾಗಿರುವ ಮಹಾರಾಣಾ ಪ್ರತಾಪಸಿಂಹ ವೃತ್ತದಲ್ಲಿ ೧೨.೫೦ ಅಡಿ ಎತ್ತರದ ಭವ್ಯ ಕಂಚಿನ ಮೂರ್ತಿ ಇದಾಗಿದೆ. ೧೮X೧೦ ಅಡಿ ವಿಸ್ತೀರ್ಣದ ವೃತ್ತದಲ್ಲಿ ಪಶ್ಚಿಮಾಭಿಮುಖವಾಗಿ ಮೂರ್ತಿಯನ್ನು ಸ್ಥಾಪಿಸಲಾಗುತ್ತಿದೆ.ಏಳು ದಾನಿಗಳಿಂದ ₹೩೫ ಲಕ್ಷ ದೇಣಿಗೆ:
ಮಹಾರಾಣಾ ಪ್ರತಾಪಸಿಂಹರ ಮೂರ್ತಿ ಪ್ರತಿಷ್ಠಾಪನೆ ಹಾಗೂ ವೃತ್ತ ನಿರ್ಮಾಣದ ಕಾರ್ಯಕ್ಕೆ ಸಮಾಜದ ಏಳು ಪ್ರಮುಖ ದಾನಿಗಳು ತಲಾ ₹5 ಲಕ್ಷಗಳಂತೆ ಒಟ್ಟು ₹೩೫ ಲಕ್ಷಗಳ ದೇಣಿಗೆ ನೀಡಿದ್ದಾರೆ. ದೇಣಿಗೆ ನೀಡಿದವರಲ್ಲಿ ವಿಜಯಸಿಂಗ್ ದಿಲೀಪಸಿಂಗ್ ಹಜೇರಿ, ಬಾಲಾಜಿಸಿಂಗ್ ಮಾದುಸಿಂಗ್ ಹಜೇರಿ, ಸಂಜೀವಕುಮಾರ ಲಕ್ಷ್ಮಣಸಿಂಗ್ ಹಜೇರಿ, ದಿ. ಬಿಂದಾಬಾಯಿ ಅಂಬರಸಿಂಗ್ ಹಜೇರಿ ಅವರ ಸ್ಮರಣಾರ್ಥ, ದಿ. ಶಾಂತಾಬಾಯಿ ವಿಠ್ಠಲಸಿಂಗ್ ಮೂಲಿಮನಿ ಅವರ ಸ್ಮರಣಾರ್ಥ, ದಿ.ವಿಠ್ಠಲಸಿಂಗ್ ಅಮರಸಿಂಗ್ ಹಜೇರಿ ಸ್ಮರಣಾರ್ಥ ಹಾಗೂ ದಿ ಮಾಧುಸಿಂಗ್ ಸತ್ಯನಾರಾಯಣಸಿಂಗ್ ವಿಜಾಪೂರ ಅವರ ಸ್ಮರಣಾರ್ಥ ದೇಣಿಗೆ ನೀಡಲಾಗಿದೆ.ಕೇಸರಿಮಯವಾದ ಪಟ್ಟಣ:ಮಹಾರಾಣಾ ಪ್ರತಾಪಸಿಂಹರ ಮೂರ್ತಿ ಅನಾವರಣದ ಸಂಭ್ರಮಕ್ಕಾಗಿ ತಾಳಿಕೋಟೆ ಪಟ್ಟಣವನ್ನು ಮಧುವಣಗಿತ್ತಿಯಂತೆ ಸಿಂಗರಿಸಲಾಗಿದೆ. ನಗರದ ಪ್ರಮುಖ ರಸ್ತೆಗಳು, ವೃತ್ತಗಳು ಹಾಗೂ ಕಟ್ಟಡಗಳ ಸುತ್ತಮುತ್ತ ಕೇಸರಿ ಧ್ವಜಗಳು ರಾರಾಜಿಸುತ್ತಿವೆ. ಸ್ವಾಗತ ಕಮಾನುಗಳು, ಬ್ಯಾನರ್ಗಳು ಹಾಗೂ ವಿವಿಧ ಅಲಂಕಾರಗಳು ನಗರದ ಹಬ್ಬದ ವಾತಾವರಣವನ್ನು ಮತ್ತಷ್ಟು ಹೆಚ್ಚಿಸಿವೆ.ಮೂರ್ತಿ ಅನಾವರಣ ಸಮಾರಂಭದ ಅಂಗವಾಗಿ ಬೆಳಗ್ಗೆ 8 ಗಂಟೆಗೆ ರಾಜಪೂತ ಸಮಾಜದ ಭವನದಿಂದ ಮಹಾರಾಣಾ ಪ್ರತಾಪಸಿಂಹರ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆ ಆರಂಭವಾಗಲಿದೆ. ಮೆರವಣಿಗೆಯಲ್ಲಿ ಮುಂಬೈ ಮೂಲದ ಅಘೋರಿಗಳ ತಂಡದಿಂದ ವಿಶೇಷ ನೃತ್ಯ ಪ್ರದರ್ಶನ ನಡೆಯಲಿದ್ದು, ನಾಸಿಕ್ ಡೋಲ್ ಸೇರಿದಂತೆ ವಿವಿಧ ವಾದ್ಯಮೇಳಗಳು ಮೆರವಣಿಗೆಗೆ ವಿಶೇಷ ಮೆರುಗು ನೀಡಲಿವೆ. ಮಹಾರಾಣಾ ಪ್ರತಾಪಸಿಂಹರ ಭವ್ಯ ಕಂಚಿನ ಮೂರ್ತಿ ಅನಾವರಣವು ತಾಳಿಕೋಟೆ ನಗರದ ಇತಿಹಾಸದಲ್ಲಿ ಸ್ಮರಣೀಯ ಕ್ಷಣವಾಗಲಿದೆ. ಶೌರ್ಯ, ಸ್ವಾಭಿಮಾನ, ತ್ಯಾಗ ಮತ್ತು ದೇಶಪ್ರೇಮದ ಪ್ರತೀಕವಾಗಿರುವ ಮಹಾರಾಣಾ ಪ್ರತಾಪಸಿಂಹರ ಮೂರ್ತಿಯನ್ನು ಕಣ್ತುಂಬಿಕೊಳ್ಳಲು ಸುತ್ತಮುತ್ತಲಿನ ಗ್ರಾಮಗಳು ಹಾಗೂ ವಿವಿಧ ಭಾಗಗಳಿಂದ ಸುಮಾರು ೭ ಸಾವಿರಕ್ಕೂ ಅಧಿಕ ಜನರು ಆಗಮಿಸುವ ನಿರೀಕ್ಷೆಯಿದೆ. ಸಮಾರಂಭಕ್ಕೆ ತಾಳಿಕೋಟೆ ನಗರ ಸರ್ವ ರೀತಿಯಲ್ಲೂ ಸಜ್ಜಾಗಿದೆ.