ಕೃಷಿ ಬೀಜೋತ್ಪಾದನಾ ಕೇಂದ್ರದಲ್ಲಿ ಸಕಲ ಸಿದ್ಧತೆ

KannadaprabhaNewsNetwork |  
Published : May 30, 2026, 02:30 AM IST
ಮುಂಗಾರು ಹಂಗಾಮಿಗೆ ಸಜ್ಜಾಗಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಉಳುಮೆ ಕಾರ್ಯದ ದೃಶ್ಯ. | Kannada Prabha

ಸಾರಾಂಶ

ಬೀಜೋತ್ಪಾದನೆಗಾಗಿ ಟ್ರ್ಯಾಕ್ಟರ್‌ಗೆ ಅಳವಡಿಸಲಾದ ಎಂ.ಬಿ. ಫೋರ್ ನೇಗಿಲು ಬಳಸಿ ಭೂಮಿಯನ್ನು ಉಳುಮೆ ಮಾಡುವ ಕಾರ್ಯ ಕೈಗೊಳ್ಳಲಾಗಿದೆ.

ಕಂಪ್ಲಿ: ಇಲ್ಲಿನ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಕೃಷಿ ಬೀಜೋತ್ಪಾದನಾ ಕೇಂದ್ರದಲ್ಲಿ ಮುಂಗಾರು ಹಂಗಾಮಿಗೆ ಸಕಲ ಸಿದ್ಧತೆಗಳು ಭರದಿಂದ ಸಾಗುತ್ತಿವೆ.

ಬೀಜೋತ್ಪಾದನೆಗಾಗಿ ಟ್ರ್ಯಾಕ್ಟರ್‌ಗೆ ಅಳವಡಿಸಲಾದ ಎಂ.ಬಿ. ಫೋರ್ ನೇಗಿಲು ಬಳಸಿ ಭೂಮಿಯನ್ನು ಉಳುಮೆ ಮಾಡುವ ಕಾರ್ಯ ಕೈಗೊಳ್ಳಲಾಗಿದೆ. ಉತ್ತಮ ಗುಣಮಟ್ಟದ ಬೀಜ ಉತ್ಪಾದನೆಗೆ ಅನುಕೂಲವಾಗುವಂತೆ ವೈಜ್ಞಾನಿಕ ಕ್ರಮದಲ್ಲಿ ಭೂಮಿ ಸಿದ್ಧಗೊಳಿಸಲಾಗುತ್ತಿದೆ.

ಕೇಂದ್ರದ ವ್ಯಾಪ್ತಿಯ ಭೂಮಿಯಲ್ಲಿ ವಿವಿಧ ಬೆಳೆಗಳ ಬೀಜೋತ್ಪಾದನೆಗೆ ಯೋಜನೆ ರೂಪಿಸಲಾಗಿದೆ. 6 ಹೆಕ್ಟೇರ್ ಪ್ರದೇಶದಲ್ಲಿ ಎಂಟಿಯು-1010 ತಳಿಯ ಭತ್ತ ಬೆಳೆಯಲು ತೀರ್ಮಾನಿಸಲಾಗಿದೆ. ಜತೆಗೆ 8 ಹೆಕ್ಟೇರ್‌ ಪ್ರದೇಶದಲ್ಲಿ ಟಿಎಸ್-3ಆರ್ ತಳಿಯ ತೊಗರಿ, 20 ಹೆಕ್ಟೇರ್‌ನಲ್ಲಿ ಜೆಜಿ-11 ತಳಿಯ ಕಡಲೆ ಬೆಳೆಯಲಾಗುತ್ತಿದೆ. 18 ಹೆಕ್ಟೇರ್‌ ಪ್ರದೇಶದಲ್ಲಿ ದೇಶೀಯ ತಳಿಯ ನವಣೆ, ಅರ್ಕ, ಸಜ್ಜೆ, ಉದಲು, ರಾಗಿ, ಬರಗು ಸೇರಿದಂತೆ ವಿವಿಧ ಸಿರಿಧಾನ್ಯಗಳ ಬೆಳೆಗೆ ಆದ್ಯತೆ ನೀಡಲಾಗಿದೆ.

ಸಿರಿಧಾನ್ಯಗಳ ಬೆಳೆ ಉತ್ತೇಜನಕ್ಕೆ ಸರ್ಕಾರ ಒತ್ತು ನೀಡುತ್ತಿರುವ ಹಿನ್ನೆಲೆ ರೈತರಿಗೆ ಗುಣಮಟ್ಟದ ಬೀಜ ಲಭ್ಯವಾಗುವಂತೆ ಬೀಜೋತ್ಪಾದನಾ ಕಾರ್ಯ ಕೈಗೊಳ್ಳಲಾಗುತ್ತಿದೆ. ಹವಾಮಾನ ವೈಪರೀತ್ಯ ಹಾಗೂ ನೀರಿನ ಕೊರತೆಯ ಪರಿಸ್ಥಿತಿಯಲ್ಲಿಯೂ ಉತ್ತಮ ಇಳುವರಿ ನೀಡಬಲ್ಲ ಬೆಳೆಗಳನ್ನು ಆಯ್ಕೆ ಮಾಡಲಾಗಿದೆ. ಇದರಿಂದ ರೈತರಿಗೆ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಲಾಭ ದೊರೆಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವ್ಯಾಪ್ತಿಯ ಭೂಮಿಯನ್ನು ಸಮಗ್ರವಾಗಿ ಸರ್ವೇ ಮಾಡಿಸಿ, ಕೃಷಿ, ತೋಟಗಾರಿಕೆ ಹಾಗೂ ಅರಣ್ಯ ಚಟುವಟಿಕೆ ಸಮನ್ವಯಗೊಳಿಸುವ ಉದ್ದೇಶವೂ ಹೊಂದಲಾಗಿದೆ. ಈ ನಿಟ್ಟಿನಲ್ಲಿ ವಿಶೇಷ ಕ್ರಿಯಾಯೋಜನೆ ರೂಪಿಸಿ ಕೃಷಿ ಆಯುಕ್ತರಿಗೆ ಸಲ್ಲಿಸಲಾಗಿದೆ. ಆಯುಕ್ತರಿಂದ ಸೂಕ್ತ ಮಾರ್ಗದರ್ಶನ, ಅನುಮೋದನೆ ದೊರಕಿದ ಆನಂತರ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.

ಭೂಮಿಯ ಸ್ವರೂಪ, ಮಣ್ಣಿನ ಗುಣಮಟ್ಟ, ಹವಾಮಾನಕ್ಕೆ ಅನುಗುಣವಾಗಿ ಅಗತ್ಯ ಬದಲಾವಣೆಗಳನ್ನು ಮಾಡುವ ಅವಕಾಶವಿದೆ. ಬೇಕಾದಲ್ಲಿ ಬೀಜೋತ್ಪಾದನೆಗೆ ಆಯ್ಕೆ ಮಾಡಿರುವ ತಳಿಗಳು ಹಾಗೂ ಬೆಳೆಗಳಲ್ಲಿ ಪರಿಷ್ಕರಣೆ ಮಾಡಲಾಗುವುದು ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಎಂ. ದಯಾನಂದ್ ತಿಳಿಸಿದ್ದಾರೆ.

ಕೃಷಿ ತರಬೇತಿ ಕೇಂದ್ರದಲ್ಲಿ ನಡೆಯುತ್ತಿರುವ ಕಾರ್ಯ ಚಟುವಟಿಕೆಯಿಂದ ಜಿಲ್ಲೆಯ ರೈತರಿಗೆ ಗುಣಮಟ್ಟದ ಬೀಜ ಲಭ್ಯವಾಗುವ ನಿರೀಕ್ಷೆಯಿದೆ. ಸಿರಿಧಾನ್ಯ, ಬರ ತಾಳುವ ಬೆಳೆಗಳ ವ್ಯಾಪ್ತಿ ಹೆಚ್ಚಿಸಲು ಸಹಕಾರಿಯಾಗಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುರಸಭೆ ನಿರ್ಲಕ್ಷ್ಯ ಧೋರಣೆ ಆರೋಪ: ಮಾಜಿ ಸದಸ್ಯ ಪ್ರತಿಭಟನೆ
ಕೊಡಗು ಜಿಲ್ಲೆಗೆ ಸಚಿವ ಸ್ಥಾನ ನಿರೀಕ್ಷೆ!