ಕದಂಬೋತ್ಸವ ಆಚರಣೆಗೆ ಸಕಲ ಸಿದ್ಧತೆ

KannadaprabhaNewsNetwork | Published : Apr 12, 2025 12:50 AM

ಸಾರಾಂಶ

ಕದಂಬೋತ್ಸವದಲ್ಲಿ ದ್ವಿತೀಯ ಬಾರಿಗೆ ಕುಸ್ತಿ ಸ್ಪರ್ಧೆ ಏರ್ಪಡಿಸಿದ್ದು ಕುಸ್ತಿ ಪಂದ್ಯದ ಅಖಾಡ ಸಜ್ಜುಗೊಳಿಸಲಾಗಿದೆ.

ಶಿರಸಿ: ಕನ್ನಡದ ಮೊದಲ ರಾಜಮನೆತನ ಆಳ್ವಿಕೆ ನಡೆಸಿದ ಕದಂಬರ ನೆಲವಾದ ತಾಲೂಕಿನ ಬನವಾಸಿಯಲ್ಲಿ ಏ.೧೨, ೧೩ರಂದು ನಡೆಯಲಿರುವ ಕದಂಬೋತ್ಸವದ ಮಯೂರ ವರ್ಮ ವೇದಿಕೆಗೆ ಶಾಸಕ ಶಿವರಾಮ ಹೆಬ್ಬಾರ್ ಶುಕ್ರವಾರ ಭೇಟಿ ನೀಡಿ ಪೂರ್ವ ಸಿದ್ಧತೆಯ ಪರಿಶೀಲನೆ ನಡೆಸಿದರು.

ಇನ್ನು ಕದಂಬೋತ್ಸವ ಮೈದಾನದಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿವೆ. ಮಯೂರ ವರ್ಮ ವೇದಿಕೆ ಹಾಗೂ ವೇದಿಕೆಯ ಮುಂಭಾಗದಲ್ಲಿ ಮಳೆ ಬಂದರೂ ಸಮಸ್ಯೆಯಾಗದಂತೆ ಬೃಹತ್ ಪ್ರಮಾಣದ ಜರ್ಮನ್ ಪೆಂಡಲ್ ಹಾಕಲಾಗುತ್ತಿದೆ. ಕದಂಬೋತ್ಸವದಲ್ಲಿ ದ್ವಿತೀಯ ಬಾರಿಗೆ ಕುಸ್ತಿ ಸ್ಪರ್ಧೆ ಏರ್ಪಡಿಸಿದ್ದು ಕುಸ್ತಿ ಪಂದ್ಯದ ಅಖಾಡ ಸಜ್ಜುಗೊಳಿಸಲಾಗಿದೆ. ಎಲ್ಲ ಪೂರ್ವಸಿದ್ಧತೆಯನ್ನು ಶಾಸಕರು ವೀಕ್ಷಿಸಿದರು.

ನಂತರ ಮಾಧ್ಯಮಗಳೊಂದಿಗೆ ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಸಕಲ ಸಿದ್ಧತೆ ನಡೆಸಲಾಗುತ್ತಿದೆ. ವಿಳಂಬವಾದರೂ ಅದ್ಧೂರಿ ಕದಂಬೋತ್ಸವ ಆಚರಿಸಲಿದ್ದೇವೆ. ಮಳೆಯಿಂದ ತೊಂದರೆಯಾಗದಂತೆ ಜರ್ಮನ್ ಪೆಂಡಾಲ್, ಉತ್ತಮ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಡಳಿತ ಮತ್ತು ತಾಲೂಕಾಡಳಿತ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ. ರಾಷ್ಟ್ರ, ರಾಜ್ಯ ಮಟ್ಟದ ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮಗಳ ಸವಿಯನ್ನು ಎಲ್ಲರೂ ಸವಿಯಬೇಕು. ಜಿಲ್ಲೆಯ ಕಲಾವಿದರಿಗೂ ಅವಕಾಶ ನೀಡಲಾಗಿದೆ. ಕದಂಬಜ್ಯೋತಿ ಉದ್ಘಾಟನೆ ಪ್ರಯುಕ್ತ ಹಮ್ಮಿಕೊಂಡ ಸಾಂಸ್ಕೃತಿಕ, ಕ್ರೀಡಾ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಿದೆ. ಕದಂಬೋತ್ಸವದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂಬ ಉದ್ದೇಶದಿಂದ ಮುಂಡಗೋಡ, ಯಲ್ಲಾಪುರ, ಶಿರಸಿ ತಾಲೂಕಿನ ಎಲ್ಲ ಗ್ರಾಮಾಂತರ ಭಾಗಗಳಿಗೆ ಉಚಿತ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಒಟ್ಟಿನಲ್ಲಿ ಎರಡು ದಿನ ನಾಡಿನ ಜಾತ್ರೆಯಾಗಿ ಕದಂಬೋತ್ಸವ ವಿಜೃಂಭಣೆ ಮತ್ತು ಅದ್ಧೂರಿಯಾಗಿ ಆಚರಿಸಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಸಹಾಯಕ ಆಯುಕ್ತೆ ಕಾವ್ಯರಾಣಿ, ಬನವಾಸಿ ಗ್ರಾಪಂ ಅಧ್ಯಕ್ಷೆ ಬಿಬಿ ಆಯಿಷಾ, ಕಾಂಗ್ರೆಸ್ ಮುಖಂಡರಾದ ಶಿವಾಜಿ ಕಾಳೇರಮನೆ, ಶ್ರೀಲತಾ ಕಾಳೇರಮನೆ ಮತ್ತಿತರರು ಇದ್ದರು.

ಇಂದಿನ ಕಾರ್ಯಕ್ರಮ:

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಬನವಾಸಿ ಅಭಿವೃದ್ಧಿ ಪ್ರಾಧಿಕಾರದ ಆಶ್ರಯದಲ್ಲಿ ಏ.೧೨ರಂದು ಬನವಾಸಿ ಮಯೂರವರ್ಮ ವೇದಿಕೆಯಲ್ಲಿ ಸಂಜೆ ೫ ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕದಂಬೋತ್ಸವವನ್ನು ಉದ್ಘಾಟಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಸಭಾಪತಿ ಬಸವರಾಜ ಹೊರಟ್ಟಿ, ಜಿಲ್ಲಾ ಸಚಿವ ಮಂಕಾಳ ವೈದ್ಯ, ಸಚಿವರಾದ ರಾಮಲಿಂಗಾರೆಡ್ಡಿ, ಎಚ್.ಕೆ. ಪಾಟೀಲ, ಶಿವರಾಜ ತಂಗಡಗಿ, ಕೃಷ್ಣ ಭೈರೇಗೌಡ, ವಿರೋಧ ಪಕ್ಷದ ನಾಯಕ ಆರ್.ಅಶೋಕ, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ, ಎಂಸಿಎ ಅಧ್ಯಕ್ಷ ಸತೀಶ ಸೈಲ್ ಗೌರವ ಉಪಸ್ಥಿತರಿರಲಿದ್ದಾರೆ. ಶಾಸಕ ಶಿವರಾಮ ಹೆಬ್ಬಾರ ಅಧ್ಯಕ್ಷತೆ ವಹಿಸಲಿದ್ದು, ಗೌರವ ಅತಿಥಿಗಳಾಗಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ಭೀಮಣ್ಣ ನಾಯ್ಕ, ದಿನಕರ ಶೆಟ್ಟಿ, ವಿಪ ಸದಸ್ಯರಾದ ಎಸ್.ವಿ. ಸಂಕನೂರ, ಶಾಂತಾರಾಮ ಸಿದ್ದಿ, ಗಣಪತಿ ಉಳ್ವೇಕರ, ಬನವಾಸಿ ಗ್ರಾಪಂ ಅಧ್ಯಕ್ಷೆ ಬಿಬಿ ಆಯಿಷಾ, ಗುಡ್ನಾಪುರ ಗ್ರಾಪಂ ಅಧ್ಯಕ್ಷೆ ನಿರ್ಮಲಾ ನಾಯ್ಕ ಉಪಸ್ಥಿತರಿರಲಿದ್ದಾರೆ.

ಪಂಪ ಪ್ರಶಸ್ತಿ:

೨೦೨೪-೨೫ ನೇ ಸಾಲಿನ "ಪಂಪ ಪ್ರಶಸ್ತಿಯನ್ನು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ ರೈ ಅವರಿಗೆ ಪ್ರದಾನ ಮಾಡಲಾಗುವುದು.

ಕಲಾ ಮೆರವಣಿಗೆಗೆ ಚಾಲನೆ:

ಬನವಾಸಿಯ ಮಧುಕೇಶ್ವರ ದೇವಾಲಯದಿಂದ ಕದಂಬೋತ್ಸವ ಮೈದಾನದವರೆಗೆ "ಕದಂಬ ಸಾಂಸ್ಕೃತಿಕ ಕಲಾ ಮೆರವಣಿಗೆ "ಗೆ ಏ.೧ ರಂದು ಮಧ್ಯಾಹ್ನ ೨ ಗಂಟೆಗೆ ಶಾಸಕ ಶಿವರಾಮ ಹೆಬ್ಬಾರ ಚಾಲನೆ ನೀಡಲಿದ್ದು, ಆಕರ್ಷಕ ರೂಪಕಗಳು, ಮಕ್ಕಳ ತಂಡಗಳು, ವಾದ್ಯ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ.

Share this article