ಹುಬ್ಬಳ್ಳಿ: ಬಸನಗೌಡ ಪಾಟೀಲ ಯತ್ನಾಳ ನೂರಾರು ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೆ, ಅವರ ಬಾಯಿ ಒಂದೇ ಸಮಸ್ಯೆ ಇರುವುದು ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ವಿಶ್ಲೇಷಿಸಿದರು.
ಯತ್ನಾಳ ಮರಳಿ ಬಿಜೆಪಿ ಸೇರುವ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿದ ಅವರು, ಅದು ನಮ್ಮ ಕೈಯಲ್ಲಿ ಇಲ್ಲ. ಅದನ್ನು ಹೈಕಮಾಂಡ್ ನಿರ್ಧಾರ ಮಾಡಬೇಕು ಎಂದರು.
ನನಗೆ ಯಾರೂ ವೈರಿ ಇಲ್ಲ. ಯಾರೊಂದಿಗೆ ವೈರತ್ವ ಇಟ್ಟುಕೊಳ್ಳಬಾರದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.ಮುರುಗೇಶ್ ನಿರಾಣಿ ಬಿಜೆಪಿ ಅಧ್ಯಕ್ಷರಾಗುತ್ತಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಬಿ.ವೈ. ವಿಜಯೇಂದ್ರ ಸದ್ಯ ರಾಜ್ಯಾಧ್ಯಕ್ಷ ಇದ್ದಾರೆ. ಮುಂದಿನ ಒಂದೂವರೆ ವರ್ಷ ಅವರೇ ಇರುತ್ತಾರೆ. ಅವರು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಅವರೇ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ ಎಂದರು.
ಕೂಡಲಸಂಗಮದ ಜಯಮೃತ್ಯುಂಜಯ ಶ್ರೀಗಳ ನಡವಳಿಕೆ ಕುರಿತಂತೆ ಕೇಳಿದ ಪ್ರಶ್ನೆಗೆ ಸಮಾಜದ ನೂರು ಪ್ರಮುಖರನ್ನು ಕರೆದು ಸಭೆ ಮಾಡುತ್ತೇವೆ. ಈ ಸಭೆಯಲ್ಲಿ ಯಾವುದೇ ಸ್ವಾಮೀಜಿ ಇರುವುದಿಲ್ಲ. ಸಭೆಗೆ ಯಾವುದೇ ಪೀಠದ ಸ್ವಾಮೀಜಿಗಳನ್ನು ಕರೆಯಲ್ಲ. ಬರೀ ಟ್ರಸ್ಟ್ ಹಾಗೂ ಸಮಾಜದ ಹಿರಿಯರು ಮಾತ್ರ ಸಭೆಯಲ್ಲಿರುತ್ತಾರೆ. ರಾಜ್ಯದಲ್ಲಿ 80 ಲಕ್ಷ ವೀರಶೈವ ಪಂಚಮಸಾಲಿ ಜನಸಂಖ್ಯೆ ಇದೆ. ಸಮಾಜಕ್ಕಾಗಿ ಓರ್ವ ಸ್ವಾಮೀಜಿ ಬೇಕು ಎಂಬ ಕಾರಣಕ್ಕೆ 2008ಕ್ಕೆ ಪೀಠ ಹುಟ್ಟು ಹಾಕಲಾಗಿತ್ತು. ಜಯಮೃತ್ಯುಂಜಯ ಸ್ವಾಮೀಜಿಯನ್ನು ಪೀಠಾಧ್ಯಕ್ಷರನ್ನಾಗಿ ಮಾಡಲಾಗಿತ್ತು. ಒಂದೇ ಪೀಠ ಆಗಬೇಕಿತ್ತು. ಆದರೆ ಮೂರು ಆಗಿವೆ. ಇದೀಗ ಐದು ಪೀಠ ಮಾಡಬೇಕು ಎನ್ನುವ ಉದ್ದೇಶವೂ ಇದೆ. ಬರುವ ಒಂದು ವಾರದಲ್ಲಿ ಎಲ್ಲವೂ ನಿರ್ಧಾರವಾಗುತ್ತದೆ ಎಂದರು. ತಪ್ಪುಗಳಾಗುವುದು ಸಹಜ. ಅವುಗಳನ್ನು ತಿದ್ದಿಕೊಂಡು ಹೋಗಬೇಕಷ್ಟೇ ಎಂದರು.