ಜಿಲ್ಲಾಮಟ್ಟದ ಕನ್ನಡ ಜಾನಪದ ಸಮ್ಮೇಳನಕ್ಕೆ ಸಕಲ ಸಿದ್ದತೆ: ಓಣಿತೋಟ ರತ್ನಾಕರ್

KannadaprabhaNewsNetwork |  
Published : Jan 13, 2025, 12:47 AM IST
ನರಸಿಂಹರಾಜಪುರದ ಪತ್ರಿಕಾ ಭವನದಲ್ಲಿ ಜಿಲ್ಲಾ ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷ ಓಣಿತೋಟ  ರತ್ನಾಕರ್ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ನರಸಿಂಹರಾಜಪುರ, ಜಿಲ್ಲಾ ಕನ್ನಡ ಜಾನಪದ ಪರಿಷತ್ತಿನ ಆಶ್ರಯದಲ್ಲಿ ಜ. 19 ರಂದು ಶೃಂಗೇರಿ ತಾಲೂಕಿನ ಮೆಣಸೆಯಲ್ಲಿ ನಡೆಯುವ ಜಿಲ್ಲಾ ಮಟ್ಟದ ಪ್ರಥಮ ಕನ್ನಡ ಜಾನಪದ ಸಮ್ಮೇಳನಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷ ಓಣಿತೋಟ ರತ್ನಾಕರ್ ತಿಳಿಸಿದರು.

- ಶೃಂಗೇರಿ ತಾಲೂಕು ಮೆಣಸೆಯಲ್ಲಿ ಸಮ್ಮೇಳನ । ಸರ್ವಾಧ್ಯಕ್ಷರಾಗಿ ಸುರೇಂದ್ರ ಯಡದಾಳ್ ಆಯ್ಕೆ। 2 ಸಾವಿರ ಜನ ಬಾಗಿ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಜಿಲ್ಲಾ ಕನ್ನಡ ಜಾನಪದ ಪರಿಷತ್ತಿನ ಆಶ್ರಯದಲ್ಲಿ ಜ. 19 ರಂದು ಶೃಂಗೇರಿ ತಾಲೂಕಿನ ಮೆಣಸೆಯಲ್ಲಿ ನಡೆಯುವ ಜಿಲ್ಲಾ ಮಟ್ಟದ ಪ್ರಥಮ ಕನ್ನಡ ಜಾನಪದ ಸಮ್ಮೇಳನಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷ ಓಣಿತೋಟ ರತ್ನಾಕರ್ ತಿಳಿಸಿದರು.

ಭಾನುವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 72 ವರ್ಷದ ಹಿರಿಯ ಅಂಟಿಕೆ- ಪಿಂಟಿಕೆ ಕಲಾವಿದರಾದ ಸುರೇಂದ್ರ ಯಡದಾಳ್ ಸಮ್ಮೇಳಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಜಿಲ್ಲಾ ಕನ್ನಡ ಪ್ರಥಮ ಜಾನಪದ ಪರಿಷತ್ತಿನ ಸಮ್ಮೇಳನಕ್ಕಾಗಿ ಈಗಾಗಲೇ ಸ್ವಾಗತ ಸಮಿತಿ ರಚಿಸಲಾಗಿದೆ. ಸ್ವಾಗತ ಸಮಿತಿ ಅಧ್ಯಕ್ಷರಾಗಿ ಎ.ಎಸ್.ನಯನ ಹಾಗೂ ಗೌರವಾಧ್ಯಕ್ಷರಾಗಿ ಶಾಸಕ ಟಿ.ಡಿ.ರಾಜೇಗೌಡ ಆಯ್ಕೆಯಾಗಿದ್ದಾರೆ. ಜಿಲ್ಲಾ ಕನ್ನಡ ಜಾನಪದ ಸಮ್ಮೇಳನದಲ್ಲಿ ಜಾನಪದ ಕಲಾವಿದರು ಹಾಗೂ ಆಸಕ್ತರು ಸೇರಿ 2 ಸಾವಿರ ಜನ ಸೇರುತ್ತಾರೆ ಎಂದು ಅಂದಾಜು ಮಾಡಲಾಗಿದೆ. ಬೆಳಿಗ್ಗೆ 9ಕ್ಕೆ ಶೃಂಗೇರಿ ಶಾರದ ಮಠದಿಂದ ಸಮ್ಮೇಳನ ನಡೆಯುವ ಮೆಣಸೆವರೆಗೆ ಸಮ್ಮೇಳಾಧ್ಯಕ್ಷರ ಮೆರವಣಿಗೆ ನಡೆಯಲಿದೆ.

ಶಾಸಕ ಟಿ.ಡಿ.ರಾಜೇಗೌಡ ಉದ್ಘಾಟಿಸಲಿದ್ದು ರಾಜ್ಯ ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷ ಡಾ. ಜಾನಪದ ಎಸ್.ಬಾಲಾಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಜಾನಪದ ಗೋಷ್ಠಿ ನಡೆಯಲಿದ್ದು ರಂಗೋಲಿಯಲ್ಲಿ ಪರಿಸರ ಪ್ರಜ್ಞೆ, ಮಲೆನಾಡಿನ ಜಾನಪದ ಕಲೆಗಳು ಹಾಗೂ ಮಹಿಳಾ ಜಾನಪದ ಎಂಬ ವಿಷಯದ ಬಗ್ಗೆ ಉಪನ್ಯಾಸ , ಮದ್ಯಾಹ್ನ 2 ಕ್ಕೆ ಜಾನಪದ ಕಲೆ ಪ್ರದರ್ಶನ, ತರೀಕೆರೆ ತಾಲೂಕಿನ ಕಲಾವಿದರಿಂದ ವೀರಗಾಸೆ, ಅಜ್ಜಂಪುರ ತಾಲೂಕಿನಿಂದ ಡೊಳ್ಳು ಕುಣಿತ ಚಿಕ್ಕಮಗಳೂರು ತಾಲೂಕಿನಿಂದ ಸೋಬಾನೆ, ನ.ರಾ.ಪುರ ತಾಲೂಕಿನ ಕಲಾವಿದರಿಂದ ಭಜನೆ, ಜಾನಪದ ನೃತ್ಯ, ಕೊಪ್ಪ ತಾಲೂಕಿನ ಬರ್ಕನ ಘಟ್ಟದ 30 ಕಲಾವಿದರಿಂದ ಕೋಲಾಟ ಪ್ರದರ್ಶನ ನಡೆಯಲಿದೆ ಎಂದು ವಿವರಿಸಿದರು.

ಇದೇ ಸಂದರ್ಭದಲ್ಲಿ ಕಡೂರು ವೀರಗಾಸೆ ಕಲಾವಿದ ನವೀನ್‌ ಕುಮಾರ್ ಹಾಗೂ ಕೊಪ್ಪದ ಜಾನಪದ ಕಲಾವಿದ ಬಲಗಾರು ಗಣೇಶ್ ಅವರಿಗೆ ಜಾನಪದ ಪ್ರಪಂಚ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ಸಂಜೆ 7 ಗಂಟೆಯಿಂದ ನಾರ್ವೆಯ ಚಂಡಿಕೇಶ್ವರಿ ಅಂಟಿಕೆ ಪಿಂಟಿಕೆ ಕಲಾವಿದರು ಹಾಗೂ ಯಡದಾಳು ಗೆಳೆಯರ ಬಳಗ ದಿಂದ ಅಂಟಿಕೆ ಪಿಂಟಿಕೆ ಪ್ರದರ್ಶನ ಹಾಗೂ ಶೃಂಗೇರಿ ಅಕ್ಷರ ಮ್ಯೂಸಿಕಲ್ ಕಲಾವಿದರಿಂದ ಸ್ಯಾಕ್ಸೊಫೋನ್ ವಾದನ ನಡೆಯಲಿದೆ. ಸಮ್ಮೇಳನಕ್ಕೆ ಶೃಂಗೇರಿ ಶಾರದ ಪೀಠದಿಂದ ಬೋಜನದ ವ್ಯವಸ್ಥೆ, ಆದಿಚುಂಚನಗಿರಿ ಮಠದಿಂದ ಪಾರಿ ತೋಷಕ ನೀಡುತ್ತಿದ್ದಾರೆ. ಎಲ್ಲಾ ಆಸಕ್ತರು ಜಿಲ್ಲಾ ಮಟ್ಟದ ಕನ್ನಡ ಜಾನಪದ ಸಮ್ಮೇಳನಕ್ಕೆ ಆಗಮಿಸಬೇಕು ಎಂದು ಮನವಿ ಮಾಡಿದರು.

ಸುದ್ದಿ ಗೋಷ್ಠಿಯಲ್ಲಿ ಸ್ವಾಗತ ಸಮಿತಿ ಸದಸ್ಯರಾದ ಕೆ.ಎಂ.ಸುಂದರೇಶ್‌, ಎಸ್.ಡಿ.ರಾಜೇಂದ್ರ, ತಾಲೂಕು ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷ ವೆಂಕಟೇಶ್, ಕಾರ್ಯದರ್ಶಿ ಅಭಿಲಾಶ್, ಮಹಿಳಾ ಘಟಕದ ತಾಲೂಕು ಜಯಂತಿ ಇದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ