ಶಿರಸಿ: ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡದೇ ಕ್ಷೇತ್ರದ ಸರ್ವಾಂಗೀಣ ಪ್ರಗತಿ ನನ್ನ ಮುಖ್ಯ ಗುರಿಯಾಗಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಸಮಾಜದ ಕಟ್ಟ ಕಡೆಯ ವ್ಯಕ್ತಿ ತಮ್ಮ ಕೆಲಸಕ್ಕಾಗಿ ಗ್ರಾಪಂಗೆ ಆಗಮಿಸುತ್ತಾರೆ. ಅವರಿಗೆ ಉತ್ತಮ ಸೇವೆ ದೊರೆಯಬೇಕು. ಆ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನಿಸುತ್ತಿದೆ. ಉಂಚಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ₹೫೫ ಕೋಟಿ ನನ್ನ ಅವಧಿಯಲ್ಲಿ ನೀಡಿದ್ದೇನೆ. ಇನ್ನು ಅನೇಕ ಅಭಿವೃದ್ಧಿ ಕಾರ್ಯ ಬಾಕಿ ಉಳಿದಿವೆ. ಅದಕ್ಕೂ ಕಾಯಕಲ್ಪ ನೀಡಲು ಬದ್ಧನಾಗಿದ್ದೇನೆ. ಯಾವುದೇ ಕಾರಣಕ್ಕೂ ಬಡವರಿಗೆ ತೊಂದರೆಯಾಗಬಾರದು ಎಂದರು.
ರಾಜ್ಯ ಸರ್ಕಾರ ಅವಧಿಯಲ್ಲಿ ಪಂಚ ಗ್ಯಾರಂಟಿಗೆ ₹೫೬ ಸಾವಿರ ಕೋಟಿ ನೀಡುತ್ತಿದೆ. ನಾವು ಕೃತಘ್ನ ಆದರೆ ನಮ್ಮಂತವರು ಕ್ಷಮಿಸಬಹುದು. ಆದರೆ ಭಗವಂತ ಕ್ಷಮಿಸುವುದಿಲ್ಲ. ಕುಟುಂಬದ ಗೌರವ ಹೆಚ್ಚಿಗೆ ಮಾಡುವ ಮಹಿಳೆಯರಿಗೆ ರಾಜ್ಯ ಸರ್ಕಾರ ಅತಿ ಹೆಚ್ಚು ಪ್ರಾಮುಖ್ಯತೆ ನೀಡಿದೆ. ಸಾರ್ವಜನಿಕ ಕೆಲಸದ ಜೊತೆ ವೈಯಕ್ತಿಕ ಬೇಡಿಕೆ ಈಡೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ಸರ್ಕಾರ ಮಾಡುತ್ತಿದೆ ಎಂದ ಅವರು, ಉಂಚಳ್ಳಿ ಗ್ರಾಪಂ ಕಚೇರಿಯ ಅತ್ಯುತ್ತಮ ಕಟ್ಟಡ ನಿರ್ಮಾಣಗೊಂಡಿದೆ. ಇದಕ್ಕೆ ಹಿಂದಿನ ಹಾಗೂ ಹಾಲಿ ಗ್ರಾಪಂ ಸದಸ್ಯರ ಪರಿಶ್ರಮ ಹಾಗೂ ಅಧಿಕಾರಿಗಳ ಸಹಕಾರ ಮುಖ್ಯ ಕಾರಣ ಎಂದರು.ಉಂಚಳ್ಳಿ ಗ್ರಾಪಂ ಅಧ್ಯಕ್ಷೆ ಮಂಜಮ್ಮ ಭೋವಿ ಅಧ್ಯಕ್ಷತೆ ವಹಿಸಿದ್ದರು.
ಇಂಡಿಯಾ ಬುಕ್ ಆಫ್ ಅವಾರ್ಡ್ ಪಡೆದ ಪೂಜಾ ನಾಯ್ಕ ಸೋಮನಹಳ್ಳಿ, ಗ್ರಾಪಂ ಕಟ್ಟಡ ಅತ್ಯುತ್ತಮವಾಗಿ ನಿರ್ಮಿಸಿದ ಗುತ್ತಿಗೆದಾರ ಚಂದ್ರಕಾಂತ ಗೌಡ, ಗ್ರಾಪಂ ಹಾಲಿ ಸದಸ್ಯರು, ಮಾಜಿ ಸದಸ್ಯರು, ಮಾಜಿ ಅಧ್ಯಕ್ಷರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಉಂಚಳ್ಳಿ ಪಿಡಿಒ ಆಶಾ ಗೌಡ ಸ್ವಾಗತಿಸಿದರು. ಕಲ್ಲಿ ಮೊರಾರ್ಜಿ ದೇಸಾಯಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಪಿಡಿಒ ಕುಮಾರ ವಾಸನ್ ನಿರೂಪಿಸಿದರು. ತಾರಾ ಸಂಗಡಿಗರು ಪ್ರಾರ್ಥಿಸಿದರು.