ಗೋಕರ್ಣ: ನಮ್ಮ ಹಿರಿಯರು ಬಳಸುತ್ತಿದ್ದ ಪದಗಳನ್ನು ಮತ್ತೆ ಬಳಕೆಗೆ ತರುವ ಮೂಲಕ ನಾವು ನಾವಾಗೋಣ; ಆಂಗ್ಲರ ಅಂಧಾನುಕರಣೆ ತೊರೆದು ನಮ್ಮತನ ಉಳಿಸಿಕೊಳ್ಳೋಣ ಎಂದು ರಾಘವೇಶ್ವರ ಭಾರತೀ ಶ್ರೀ ಕರೆ ನೀಡಿದರು.
ಕನ್ನಡ ಭಾಷೆಯಲ್ಲಿ ಕಲಬೆರಕೆಯಾಗಿರುವ ಆಂಗ್ಲ ಮತ್ತು ಇತರ ಭಾಷೆಗಳ ಪದಗಳನ್ನು ಬಿಡುವುದು ಮೊದ ಮೊದಲು ಕಷ್ಟವೆನಿಸಬಹುದು. ಆದರೆ ನಮ್ಮ ಭಾಷೆ- ಸಂಸ್ಕೃತಿ ಉಳಿಸಿಕೊಳ್ಳುವ ಹೊಣೆ ನಮ್ಮ ಮೇಲಿದೆ. ಈ ಕಷ್ಟಗಳಿಗೆ ಅನಿವಾರ್ಯವಾಗಿ ನಾವು ಅದಕ್ಕೆ ಒಗ್ಗಿಕೊಳ್ಳಲೇಬೇಕು ಎಂದು ಸೂಚಿಸಿದರು.
ಸ್ವಭಾಷಾ ಚಾತುರ್ಮಾಸ್ಯದಲ್ಲಿ ಸವಿಗನ್ನಡ ಗೋಷ್ಠಿ ಮತ್ತು ಹವಿಗನ್ನಡ ಗೋಷ್ಠಿ ಮುಗಿದಲ್ಲಿಗೆ ನಮ್ಮ ಕೆಲಸ ಮುಗಿಯುವುದಿಲ್ಲ. ಇದೀಗ ಸಮಾಜದ ಪ್ರತಿಯೊಬ್ಬರು ಮತ್ತೆ ನಮ್ಮತನಕ್ಕೆ ಮರಳುವಂತೆ ಮಾಡುವ ದೊಡ್ಡ ಹೊಣೆ ನಮ್ಮ ಮೇಲಿದೆ ಎಂದು ಅಭಿಪ್ರಾಯಪಟ್ಟರು.ದಿನಕ್ಕೊಂದು ಆಂಗ್ಲಪದ ಕೈಬಿಡುವ ಅಭಿಯಾನದಲ್ಲಿ ಪರ್ಸ್ ಪದ ಬಿಡುವಂತೆ ಸಲಹೆ ಮಾಡಿದರು. ಇದಕ್ಕೆ ಸಂಚಿ ಎಂಬ ಪದದಿಂದ ಕರೆಯಲಾಗುತ್ತಿದೆ. ಕೈಚೀಲ, ಥೈಲಿ, ಕೋಶ, ಸ್ಯೂತ ಪದಗಳನ್ನು ಬಳಸಬಹುದು ಎಂದರು.
ನದಿಗಳು ಕೂಡಿ ಸಮುದ್ರವಾಗುವಂತೆ ಚಾತುರ್ಮಾಸ್ಯವೆಂಬ ಸಮುದ್ರಕ್ಕೆ ಆರು ವಲಯಗಳಿಂದ ನದಿಗಳು ಬಂದು ಸೇರಿವೆ. ಎಲ್ಲ ಶಿಷ್ಯರ ಬಾಳು ಹಸನಾಗಲಿ ಎಂದು ಅನುಗ್ರಹಿಸಿದರು. ಜೀವನ ಪೂರ್ಣವಾಗಬೇಕಾದರೆ ಅನುಗ್ರಹ ಬೇಕು. ಪಂಕ ತಿರುಗಲು ವಿದ್ಯುತ್ ಹೇಗೆ ಅಗತ್ಯವೋ ಜೀವನ ಮುನ್ನಡೆಯಲು ಅನುಗ್ರಹ ಬೇಕು ಎಂದು ಹೇಳಿದರು.
ಅತ್ಯುತ್ಸಾಹ ಮತ್ತು ನಿರುತ್ಸಾಹ ಎರಡೂ ಒಳ್ಳೆಯದಲ್ಲ; ಬದಲಾಗಿ ಸದೋತ್ಸಾಹ ಇರಬೇಕು ಎಂದು ಅಭಿಪ್ರಾಯಪಟ್ಟರು. ಕಾರ್ಯಕರ್ತರಲ್ಲೂ ಸೇವಾವಧಿಯುದ್ದಕ್ಕೂ ಉತ್ಸಾಹ ಉಳಿಸಿಕೊಳ್ಳಿ. ಸೈನಿಕ ದೇಶದ ಬಗ್ಗೆ ಎಷ್ಟು ನಿಷ್ಠೆ ಹೊಂದಿದ್ದಾನೋ ಅಷ್ಟೇ ನಿಷ್ಠೆಯಿಂದ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.
ವಿವಿವಿ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಪರಿಸರ ಸ್ನೇಹಿ ಅವಜಲ ಘಟಕವನ್ನು ಈ ಸಂದರ್ಭದಲ್ಲಿ ಲೋಕಾರ್ಪಣೆಗೊಳಿಸಲಾಯಿತು. ರಾಸಾಯನಿಕ ರಹಿತ, ಕೇವಲ ತುಳಸಿ, ಸ್ಫಟಿಕ ಮತ್ತು ಹಾಸುಗಲ್ಲು ಬಳಸಿ ಘಟಕ ನಿರ್ಮಿಸಿದ ಬಾಲಚಂದ್ರ ಹೆಗಡೆ ಮತ್ತು ಗಜಾನನ ಹೆಗಡೆಯವರನ್ನು ಸನ್ಮಾನಿಸಿ ಆಶೀರ್ವದಿಸಿದ ಶ್ರೀಗಳು, ಪ್ರಕೃತಿಯಲ್ಲಿ ಸಿಗುವುದೆಲ್ಲವೂ ಶುದ್ಧ. ನಾವು ಅದನ್ನು ಮಲಿನಗೊಳಿಸುತ್ತೇವೆ. ಉಪಯೋಗಿಸಿ ಅಶುದ್ಧವಾದ್ದನ್ನು ಶುದ್ಧ ಮಾಡುವುದು ಪ್ರವಾಹದ ವಿರುದ್ಧ ಈಜಿದಂತೆ. ಕೊಳಚೆ ನೀರನ್ನು ಬಾವಿ ನೀರಿನಷ್ಟೇ ಶುದ್ಧಗೊಳಿಸುವ ಈ ಅವಜಲ ಘಟಕ ಎಲ್ಲೆಡೆಗೆ ಮಾದರಿ. ಇಂಥ ಪರಿಸರ ಸ್ನೇಹಿ ಮಾದರಿ ಸಮಾಜದಲ್ಲಿ ಹೆಚ್ಚು ಹೆಚ್ಚಾಗಿ ಅಳವಡಿಸಿಕೊಳ್ಳಬೇಕು ಎಂದು ಸೂಚಿಸಿದರು.