ಅಲೆಮಾರಿಗಳಿಗೆ ಶೇ.1ರಷ್ಟು ಮೀಸಲಾತಿ ನೀಡಲು ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork |  
Published : Sep 02, 2025, 12:00 AM IST
ಹೂವಿನಹಡಗಲಿಯಲ್ಲಿ ಅಲೆಮಾರಿ ಸಮುದಾಯಗಳು ಶೇ.1 ರಷ್ಟು ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ ಮಾಡಿದರು. | Kannada Prabha

ಸಾರಾಂಶ

ಇಲ್ಲಿನ ಪರಿಶಿಷ್ಟ ಜಾತಿ, ಅತಿ ಸೂಕ್ಷ್ಮ ಅಲೆಮಾರಿ ಸಮುದಾಯಗಳ ಒಳ ಮೀಸಲಾತಿ ವಂಚಿತ ಹೋರಾಟ ಸಮಿತಿ, ತಾಲೂಕು ಘಟಕದಿಂದ ನ್ಯಾ.ನಾಗಮೋಹನ್‌ ದಾಸ್‌ ಶಿಫಾರಸ್ಸಿನಂತೆ, ಶೇ.1ರಷ್ಟು ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.

59 ಸೂಕ್ಷ್ಮ, ಅಲೆಮಾರಿ ಪರಿಶಿಷ್ಟ ಜಾತಿಗಳ ಸಮೂಹಕ್ಕೆ ಸರ್ಕಾರದ ನಿರ್ಧಾರದಿಂದ ಆಘಾತಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ಇಲ್ಲಿನ ಪರಿಶಿಷ್ಟ ಜಾತಿ, ಅತಿ ಸೂಕ್ಷ್ಮ ಅಲೆಮಾರಿ ಸಮುದಾಯಗಳ ಒಳ ಮೀಸಲಾತಿ ವಂಚಿತ ಹೋರಾಟ ಸಮಿತಿ, ತಾಲೂಕು ಘಟಕದಿಂದ ನ್ಯಾ.ನಾಗಮೋಹನ್‌ ದಾಸ್‌ ಶಿಫಾರಸ್ಸಿನಂತೆ, ಶೇ.1ರಷ್ಟು ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.

ಬುಡ್ಗ ಜಂಗಮ ಸಮಾಜದ ತಾಲೂಕು ಅಧ್ಯಕ್ಷ ಶಿವಕುಮಾರ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಒಳ ಮೀಸಲಾತಿ ಕುರಿತು ನ್ಯಾ. ನಾಗಮೋಹನ್‌ ದಾಸ್‌ ಶಿಫಾರಸ್ಸಿನಂತೆ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಕುರಿತು ತೆಗೆದುಕೊಂಡಿರುವ ತೀರ್ಮಾನವು, ಪ್ರವರ್ಗ-ಎ ರಲ್ಲಿಯ ಅನುಬಂಧಿತ 59 ಸೂಕ್ಷ್ಮ ಮತ್ತು ಅಲೆಮಾರಿ ಪರಿಶಿಷ್ಟ ಜಾತಿಗಳ ಸಮೂಹಕ್ಕೆ ಆಘಾತ ಉಂಟು ಮಾಡಿದೆ. ಈ ಕೂಡಲೇ ಅಲೆಮಾರಿಗಳಿಗೆ ಶೇ. 1ರಷ್ಟು ಮೀಸಲಾತಿ ನೀಡಿ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.

ಒಳಮೀಸಲಾತಿಯನ್ನು ಜಾರಿ ಮಾಡುವ ಒತ್ತಡದಲ್ಲಿ ಸರ್ಕಾರವು 101 ಪರಿಶಿಷ್ಟ ಜಾತಿಗಳಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸುವಲ್ಲಿ ಮೀಸಲು ಪ್ರಮಾಣವನ್ನು ಎಚ್ಚರಿಕೆಯಿಂದ ನಿಗದಿಪಡಿಸಬೇಕಿತ್ತು. ಅದರಲ್ಲೂ ಅಲೆಮಾರಿಗಳಂತಹ ತಬ್ಬಿಲಿ ಮತ್ತು ಧ್ವನಿ ಇಲ್ಲದ ಸಮುದಾಯಗಳ ವಿಷಯದಲ್ಲಿ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳದೇ ಘೋರ ಅನ್ಯಾಯ ಮಾಡಿದೆ. ಈ ಸರ್ಕಾರದ ಕ್ಯಾಬಿನೆಟ್‌ನಲ್ಲಿ ಕೈಗೊಂಡ ನಿರ್ಣಯ ಅಲೆಮಾರಿ ಸಮುದಾಯಗಳಿಗೆ ಮರಣ ಶಾಸನವಾಗಿದೆ ಎಂದು ಆಕ್ರೋಶ ಹೊರ ಹಾಕಿದರು.

ಅರೆ ಅಲೆಮಾರಿ ಸಮುದಾಯದ ಪರಶುರಾಮ ಅಂಗೂರು ಮಾತನಾಡಿ, ಅಲೆಮಾರಿಗಳನ್ನು ಬಂಜಾರ, ಬೋವಿ, ಕೊರಮ, ಕೊರಚ, ಸಮುದಾಯಗಳ ಜೊತೆಗೆ ಸೇರಿಸಿ ಶೇ.5ರಷ್ಟು ಮೀಸಲಾತಿ ನಿಗದಿ ಮಾಡಿರುವುದರಿಂದ ಅಲೆಮಾರಿಗಳು ಶಾಶ್ವತ ಮೀಸಲಾತಿಯಿಂದ ವಂಚಿತವಾಗಲಿವೆ. ಸಾವಿರಾರು ವರ್ಷಗಳಿಂದ ಅಸ್ಪೃಶ್ಯರಲ್ಲಿ ಅಸ್ಪೃಶ್ಯರಾಗಿಯೇ ಬದುಕಿ ಬಂದ ಈ ಅನಾಥ ಸಮುದಾಯಗಳಿಗೆ ಸ್ವಾತಂತ್ರ್ಯ ನಂತರ ಸಂವಿಧಾನ ಬದ್ಧ ಸೌಲಭ್ಯಗಳಿಂದ ಈವರೆಗೂ ವಂಚಿತವಾಗಿವೆ. ಸೂಕ್ತ ಪ್ರಾತಿನಿಧ್ಯದಿಂದ ದೂರ ಉಳಿದಿರುವ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸುವುದೇ ಮೀಸಲಾತಿ ಪರಮ ತತ್ವವಾಗಿದೆ ಎಂದರು.

ದಲಿತ ಮುಖಂಡ ಪುತ್ರೇಶ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ನೀಡಿರುವ ಮೀಸಲಾತಿ ಭರವಸೆಯನ್ನು ಈಡೇರಿಸುವಲ್ಲಿ ಸಿದ್ದರಾಮಯ್ಯ ಸರ್ಕಾರ ಎಡವಿದೆ. ಪರಿಶಿಷ್ಟ ಜಾತಿಯಲ್ಲಿನ ಬಲಾಢ್ಯ ಸಮುದಾಯಗಳ ಮೀಸಲಾತಿಯಲ್ಲಿ ಹೆಚ್ಚಿನ ಪಾಲನ್ನು ಪಡೆಯುತ್ತಾ ಬಂದಿದೆ. ನ್ಯಾ. ನಾಗಮೋಹನ್‌ ದಾಸ್‌ ಏಕ ಸದಸ್ಯ ಪೀಠ ಸದಸ್ಯ ಆಯೋಗದ ವರದಿಯಲ್ಲಿ ಸರ್ಕಾರ ಸಮೀಕ್ಷೆಯ ದತ್ತಾಂಶಗಳ ಹಿನ್ನೆಲೆ 59 ಸೂಕ್ಷ್ಮ ಮತ್ತು ಅಲೆಮಾರಿ ಪರಿಶಿಷ್ಟ ಜಾತಿಗಳ ಸಮೂಹಕ್ಕೆ ಪ್ರವರ್ಗ ಎ ರಲ್ಲಿ ವರ್ಗೀಕರಿಸಿರುವುದು ನ್ಯಾಯ ಸಮ್ಮತವಾಗಿದೆ. ಈ ಜಾತಿಗಳನ್ನು ಸರ್ಕಾರ ಅಸಮಾನ ಪ್ರವರ್ಗ-ಸಿ ರಲ್ಲಿ ಸೇರಿಸಿ ಶೇ.5 ರಷ್ಟು ಒಳ ಮೀಸಲಾತಿ ನೀಡಲು ಮುಂದಾಗಿರುವುದು ಸರಿಯಲ್ಲ ಎಂದರು.

ಈ ಸಂದರ್ಭ ಮೈಲಾರೆಪ್ಪ, ಎಚ್‌.ಜೆ. ದಾಮಣ್ಣ, ಎಸ್‌.ಗಿಡ್ಡಪ್ಪ, ಸಿ.ಹನುಮಂತಪ್ಪ, ಎ.ಮಂಜುನಾಥ, ಪೃಥ್ವಿರಾಜು ಸೇರಿದಂತೆ ನೂರಾರು ಅಲೆಮಾರಿ ಸಮುದಾಯದವರು ತಹಸೀಲ್ದಾರ್‌ ಜಿ.ಸಂತೋಷಕುಮಾರ ಇವರಿಗೆ ಮನವಿ ಸಲ್ಲಿಸಿದರು.ನಾನಾ ವೇಷ ಧರಿಸಿ ಭಾಗಿ:

ಅಲೆಮಾರಿ ಸಮುದಾಯದ ಕಲಾವಿದರು ಶ್ರೀರಾಮ, ಲಕ್ಷ್ಣಣ, ಸೀತಾ, ಹನುಮಂತ ಸೇರಿದಂತೆ ವಿವಿಧ ಛದ್ಮ ವೇಷಗಳನ್ನು ಧರಿಸಿ ಪ್ರತಿಭಟನಾ ಮೆರವಣಿಗೆಯಲ್ಲಿ ನಾನಾ ಪ್ರಸಂಗಗಳ ಪ್ರದರ್ಶನ ಮಾಡುತ್ತಾ ಮೀಸಲಾತಿ ಸೌಲಭ್ಯಕ್ಕೆ ಒತ್ತಾಯಿಸಿದರು. ಪ್ರತಿಭಟನಾ ಮೆರವಣಿಗೆಯು ಪಟ್ಟಣದ ಪ್ರವಾಸಿ ಮಂದಿರದಿಂದ ಲಾಲ್‌ ಬಹದ್ಧೂರ್‌ ಶಾಸ್ತ್ರಿ ವೃತ್ತ, ಡಾ. ಬಿ.ಆರ್‌. ಅಂಬೇಡ್ಕರ್‌ ವೃತ್ತ ಸೇರಿದಂತೆ ತಾಲೂಕು ಕಚೇರಿವರೆಗೂ ನಡೆಯಿತು.

PREV

Recommended Stories

ಬೆಂಗಳೂರು : ದೀಪಾವಳಿ ವೇಳೆ ವಾಯುಮಾಲಿನ್ಯ ಹೆಚ್ಚಾಗಲಿಲ್ಲ, ಭಾರೀ ಇಳಿಕೆ!
ಹೊಸೂರಿಗೆ ಮೆಟ್ರೋ ವಿಸ್ತರಣೆ ಅಸಾಧ್ಯ : ರಾಜ್ಯ ಸರ್ಕಾರಕ್ಕೆ ಬಿಎಂಆರ್‌ಸಿಎಲ್‌ ವರದಿ