ಕನ್ನಡಪ್ರಭ ವಾರ್ತೆ ಮದ್ದೂರು
ಓವರ್ ಟೆಕ್ ವಿಚಾರವಾಗಿ 5 ಮಂದಿ ಪುಂಡರ ಗುಂಪು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಬೆಂಗಳೂರು ಮೂಲದ ಕುಟುಂಬದ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೇ ನಡೆಸಿ ಕಾರನ್ನು ಜಖಂಗೊಳಿಸಿದ ಘಟನೆ ಪಟ್ಟಣದ ಬೆಂಗಳೂರು- ಮೈಸೂರು ಹೆದ್ದಾರಿಯ ಮದ್ದೂರಮ್ಮ ದೇವಾಲಯದ ಬಳಿ ಭಾನುವಾರ ರಾತ್ರಿ ಜರುಗಿದೆ.ಬೆಂಗಳೂರಿನ ಅತ್ತಿಗುಪ್ಪೆ ಬಿಸಿಸಿ ಲೇಔಟ್‌ನ 2ನೇ ಕ್ರಾಸ್ 3ನೇ ಮೇನ್ ರಸ್ತೆಯ ನಿವಾಸಿ ಎಂ.ಸಾಗರ್ ಕುಮಾರ್ ಅವರ ಮೇಲೆ ಪುಂಡರ ಗುಂಪು ಕಾರಿನ ವೀಲ್ ಜಾಕ್, ರಾಡಿನಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ. ಅಲ್ಲದೇ, ತಂದೆಯ ರಕ್ಷಣೆಗೆ ಧಾವಿಸಿದ 8 ವರ್ಷದ ಮಗುವಿನ ಕೈಯನ್ನು ಪುಂಡರು ಕ್ರೂರವಾಗಿ ತಿರುಚಿ ಗಾಯಗೊಳಿಸಿದ್ದಾರೆ. ಇದೇ ವೇಳೆ ಸಾಗರ್ ಮೇಲೆ ನಡೆದ ಹಲ್ಲೆಯನ್ನು ತಡೆಯಲು ಬಂದ ಪತ್ನಿ ಧನ್ಯಶ್ರೀ, ಅತ್ತೆ ಲತಾ, ಅಜ್ಜಿ ಉಮಾವತಿ ಅವರಿಗೂ ಪುಂಡರು ಬೆದರಿಕೆ ಹಾಕಿ ಹಲ್ಲೆ ನಡೆಸಿದ್ದಾರೆ.
ಘಟನೆ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಬೆಂಗಳೂರಿನ ಸಂತೋಷ್, ಅರುಣ್ ಕುಮಾರ್, ಅಭಿಷೇಕ್, ವೆಂಕಟೇಶ್ ಹಾಗೂ ಪ್ರತಾಪ್ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳ ಪೈಕಿ ಮೂವರನ್ನು ವಶಕ್ಕೆ ಪಡೆಯಲಾಗಿದೆ.ಗಾಯಾಳು ಸಾಗರ್ ತಮ್ಮ ತಂಗಿ ರಕ್ಷಾ ಅವರ ನಾಮಕರಣಕ್ಕೆ ಬೆಂಗಳೂರಿನಿಂದ ಕುಟುಂಬದವರೊಂದಿಗೆ ಮೈಸೂರಿಗೆ ತೆರಳಿ ರಾತ್ರಿ ವಾಪಸ್ ಆಗುತ್ತಿದ್ದರು. ಪಾಂಡವಪುರದ ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ಹೈವೇ ಟೋಲ್ ಬಳಿ ಸಾಗರ್ ಚಾಲನೆ ಮಾಡುತ್ತಿದ್ದ ಕಾರು ಆರೋಪಿಗಳ ಕಾರಿಗೆ ಡಿಕ್ಕಿಯಾಗಿದೆ. ಈ ವೇಳೆ ಇಬ್ಬರ ನಡುವೆ ಜಗಳವಾಗಿದೆ. ನಂತರ ಸಾಗರ್ ಕಾರನ್ನು ಹಿಂಬಾಲಿಸಿಕೊಂಡು ಬಂದ ಆರೋಪಿಗಳು ಮದ್ದೂರು ಪಟ್ಟಣದ ಮದ್ದೂರಮ್ಮ ದೇವಾಲಯದ ಎಕ್ಸ್‌ಪ್ರೆಸ್ ಹೈವೇ ಮೇಲೆ ಭಾನುವಾರ ರಾತ್ರಿ 10 ಗಂಟೆ ಸಮಯದಲ್ಲಿ ಸಾಗರ್ ಕಾರನ್ನು ಅಡ್ಡ ಗಟ್ಟಿದ ದುಷ್ಕರ್ಮಿಗಳು ಸಾಗರ್ ಮತ್ತು ಕುಟುಂಬದವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ.
ಈ ಪೈಕಿ ಓರ್ವ ಆರೋಪಿ ಸಾಗರ್ ತಲೆಗೆ ವಿಲ್ ರಾಡ್‌ನಿಂದ ಹೊಡೆದು ಗಾಯಗೊಳಿಸಿದಲ್ಲದೇ, ಅದೇ ರಾಡ್‌ನಿಂದ ಕಾರನ್ನು ಜಖಂಗೊಳಿಸಿದ್ದಾರೆ. ಪೊಲೀಸರು ಬರುವಷ್ಟರಲ್ಲಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಬಳಿಕ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರನ್ನು ವಶಕ್ಕೆ ಪಡೆದಿದ್ದಾರೆ.