ಚನ್ನಪಟ್ಟಣ: ಶೇಕಡಾ ೪೦ಕ್ಕಿಂತ ಕಡಿಮೆ ಅಂಕ ಪಡೆದಿರುವ ವಿದ್ಯಾರ್ಥಿಗಳ ಮಾಹಿತಿಯನ್ನು ಶಾಲಾವಾರು ಸಂಗ್ರಹಿಸಿ ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಲು ಕೈಗೊಳ್ಳಬೇಕಾದ ಪರಿಣಾಮಕಾರಿ ಕ್ರಮಗಳನ್ನು ತಹಸೀಲ್ದಾರ್ ಗಿರೀಶ್ ವಿವರಿಸಿದರು.
ಪ್ರತಿ ಶಾಲೆಯಲ್ಲಿ ಅನುತ್ತೀರ್ಣಗೊಳ್ಳುವ ಸಾಧ್ಯತೆ ಇರುವ ವಿದ್ಯಾರ್ಥಿಗಳ ಪಟ್ಟಿ ತಯಾರಿಸಿ, ಅವರನ್ನು ಶಿಕ್ಷಕರೇ ಶೈಕ್ಷಣಿಕ ದತ್ತು ತೆಗೆದುಕೊಂಡು ವಿಶೇಷ ಬೋಧನೆಯಿಂದ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ ಕಲಿಕಾ ಪ್ರಗತಿ ಸಾಧಿಸಲು ಪ್ರಾಮಾಣಿಕ ಶ್ರಮವಹಿಸಬೇಕು ಎಂದು ಕರೆ ನೀಡಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ವಿದ್ಯಾರ್ಥಿ ಜೀವನದ ಪ್ರಮುಖ ತಿರುವು. ಮುಂದಿನ ದಿನಗಳಲ್ಲಿ ಅತಿಥಿ ಶಿಕ್ಷಕರ ಸಭೆ ನಡೆಸಿ ಉತ್ತಮ ಫಲಿತಾಂಶಕ್ಕೆ ಕೈಜೋಡಿಸುವಂತೆ ಮಾರ್ಗದರ್ಶನ ನೀಡಲಾಗುವುದು. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಒಂದೇ ಕಡೆ ಸೇರಿಸಿ ಅವರನ್ನು ಪ್ರೇರೇಪಿಸುವ ಕಾರ್ಯಕ್ರಮ, ನುರಿತ ಸಂಪನ್ಮೂಲ ಶಿಕ್ಷಕರಿಂದ ವಿಶೇಷ ಕಾರ್ಯಾಗಾರ, ಅಲ್ಪಸಂಖ್ಯಾತ ಮುಸ್ಲಿಂ ವಿದ್ಯಾರ್ಥಿಗಳಿಗಾಗಿ ವಿಶೇಷ ಅಭ್ಯಾಸ ತರಗತಿಗಳು, ಹಾಗೆಯೇ ಕನಿಷ್ಠ ಅಂಕಪಡೆದು ಉತ್ತೀರ್ಣರಾಗುವಂತೆ ತರಬೇತಿಗೊಳಿಸುವ ಯೋಜನೆಗಳನ್ನು ಜಾರಿಗೊಳಿಸಲಾಗುವುದೆಂದರು.ಸಭೆಯಲ್ಲಿ ತಾಲೂಕಿನ ೬೫ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು, ತಾಪಂ ಇಒ ಸಂದೀಪ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಿದ್ದರಾಜು, ಎಸ್ಸೆಸ್ಸೆಲ್ಸಿ ಪರೀಕ್ಷಾ ನೋಡಲ್ ಯೋಗೇಶ್ ಉಪಸ್ಥಿತರಿದ್ದರು.
ಚನ್ನಪಟ್ಟಣ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಗಿರೀಶ್ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರ ಸಭೆ ನಡೆಯಿತು.