ಹರಿಹರ ತಾಲೂಕಿನ ಎಲ್ಲ ಬೇಡಿಕೆ ಈಡೇರಿಸುವೆ: ಸಿದ್ದರಾಮಯ್ಯ

KannadaprabhaNewsNetwork | Published : May 6, 2024 12:34 AM

ಸಾರಾಂಶ

ಬೈರನಪಾದ ಏತನೀರಾವರಿ ಯೋಜನೆ ಸೇರಿದಂತೆ ಹರಿಹರ ತಾಲೂಕಿನ ಬಹುದಿನದ ಬೇಡಿಕೆಗಳನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಈಡೇರಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಹರಿಹರ

ಬೈರನಪಾದ ಏತನೀರಾವರಿ ಯೋಜನೆ ಸೇರಿದಂತೆ ಹರಿಹರ ತಾಲೂಕಿನ ಬಹುದಿನದ ಬೇಡಿಕೆಗಳನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಈಡೇರಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ನಗರದ ಗಾಂಧಿ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ೫೨೦೦ ಹೆಕ್ಟೇರ್ ಕೃಷಿ ಭೂಮಿಗೆ ನೀರೊದಗಿಸುವ ಬೈರನಪಾದ, ನಗರಕ್ಕೆ ಕುಡಿವ ನೀರಿಗೆ ನದಿಗೆ ಚೆಕ್ ಡ್ಯಾಂ ನಿರ್ಮಿಸುವುದು, ಕೊಂಡಜ್ಜಿ ಮತ್ತು ಅಗಸನಕಟ್ಟೆ ಕೆರೆ ಅಭಿವೃದ್ಧಿ ಸೇರಿದಂತೆ ತಾಲೂಕಿನ ಮಹತ್ತರ ಯೋಜನೆಗಳಿಗೆ ಅನುದಾನ ನೀಡುವುದಾಗಿ ತಿಳಿಸಿದರು.

ಹಿಂದಿನ ಸಲ ತಾವು ಸಿಎಂ ಆದಾಗ ಘೋಷಿಸಿದ್ದ ೧೬೫ ಯೋಜನೆಗಳಲ್ಲಿ ೧೫೮ನ್ನು ಜಾರಿಗೊಳಿಸಲಾಗಿತ್ತು. ಈ ಸಲ ೫ ಗ್ಯಾರಂಟಿಗಳನ್ನು ಜಾರಿಗೊಳಿಸುವ ಮೂಲಕ ನುಡಿದಂತೆ ನಡೆವ ನಮ್ಮ ಸರ್ಕಾರ ಹರಿಹರ ಕ್ಷೇತ್ರದ ಯೋಜನೆಗಳನ್ನು ತಪ್ಪದೆ ಜಾರಿಗೊಳಿಸಲಿದೆ. ಆದರೆ, ಬಿಜೆಪಿ ಸರ್ಕಾರ ನೀಡಿದ್ದ ಯಾವ ಭರವಸೆಯನ್ನೂ ಈಡೇರಿಸಿಲ್ಲ. ೧೦ ವರ್ಷಗಳಲ್ಲಿ ಮೋದಿ ಸಾಧನೆ ಶೂನ್ಯ ಎಂದರು.

ಮೋದಿ ಸುಳ್ಳುಗಳಿಗೆ ಮಿತಿಯೇ ಇಲ್ಲ, ಕಾಂಗ್ರೆಸ್ ಪಕ್ಷ ದಲಿತರು, ಹಿಂದುಳಿದವರ ಮೀಸಲಾತಿ ಕಿತ್ತು ಮುಸ್ಲೀಮರಿಗೆ ನೀಡಿದೆ ಎಂದು ಆರೋಪಿಸುತ್ತಿದ್ದಾರೆ. ೧೯೯೪ರ ಚಿನ್ನಪ್ಪರೆಡ್ಡಿ ವರದಿಯ ಶಿಫಾರಸಿನಂತೆ ಮುಸ್ಮಿಮರಿಗೆ ಕಳೆದ ೩೦ ವರ್ಷಗಳಿಂದ ರಾಜ್ಯದಲ್ಲಿ ಶೆ.೪ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಸಬ್ ಕಾ ಸಾಥ್ ಎಂದು ಬಾಯಲ್ಲಿ ಹೇಳುವ ಮೋದಿಯ ಮನಸ್ಸಿನ ತುಂಬ ವಿಷವೇ ತುಂಬಿದೆ ಎಂದರು.

ಮೀಸಲಾತಿ ಪರ ತೀರ್ಪು:

ಬಿಜೆಪಿ ಮತ್ತು ಅದರ ಮಾತೃ ಸಂಘಟನೆ ಆರ್‌ಎಸ್‌ಎಸ್ ಮುಂಚಿನಿಂದಲೂ ಮೀಸಲಾತಿ ವಿರೋಧಿಗಳು, ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ಮಂಡಲ್ ವರದಿ ವಿರೋಧಿಸಿ ಕಮಂಡಲ್ ಚಳವಳಿ ನಡೆಸಿದ್ದರು. ಸಂವಿಧಾನದ ೭೩, ೭೪ನೇ ವಿಧಿ ತಿದ್ದುಪಡಿ ಮಾಡಿ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ ನೀಡಿದಾಗ ಬಿಜೆಪಿಯ ಅಂದಿನ ರಾಜ್ಯ ಉಪಾಧ್ಯಕ್ಷ, ರಾಜ್ಯಸಭೆ ಸದಸ್ಯ ರಾಮಾ ಜೋಯಿಸ್ ಪ್ರಶ್ನಿಸಿ ಸುಪ್ರಿಂ ಮೆಟ್ಟಿಲೇರಿದ್ದರು. ಆದರೆ ಸುಪ್ರಿಂ ಕೋರ್ಟ್ ಮೀಸಲಾತಿ ಪರ ತೀರ್ಪು ನೀಡಿತ್ತು ಎಂದರು.

ಮೋದಿ ಸಂವಿಧಾನ ಓದಿಯೇ ಇಲ್ಲ, ಓದಿದ್ದರೆ ಅವರು ಹೀಗೆಲ್ಲಾ ಮಾತನಾಡುತ್ತಿರಲಿಲ್ಲ. ಸಂವಿಧಾನದ ೧೫, ೧೬ನೇ ವಿಧಿ ಅನ್ವಯ ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮಾತ್ರ ಮೀಸಲಾತಿ ನೀಡಬೇಕೆಂದಿದೆ. ಇದಲ್ಲದೇ, ಮೀಸಲಾತಿ ಶೆ.೫೦ರ ಮಿತಿ ಮೀರಬಾರದು ಎಂದು ಇದ್ದಾಗಲೂ ಮೇಲ್ವರ್ಗದ ಶೇ.೩ರಷ್ಟು ಜನರಿಗೆ ಶೇ.೧೦ರಷ್ಟು ಮೀಸಲಾತಿ ನೀಡಿದರು ಎಂದರು.

ಗಾಯತ್ರಿ ಸಿದ್ದೇಶ್ವರ ಮಾತಾಡೋದಿಲ್ಲ:

ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಅವರೇ ಬಾಯಿಬಿಟ್ಟು ಮಾತನಾಡದಿದ್ದಾಗ ಇನ್ನು ಅಡುಗೆ ಮಾಡಿಕೊಂಡಿದ್ದ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ ಮಾತನಾಡಲು ಸಾಧ್ಯವೇ? ಅವರು ಮನೆಯಿಂದ ಹೊರಗೆ ಬಂದವರಲ್ಲ. ಬಿಜೆಪಿಯವರಿಗೆ ಅಷ್ಟೊಂದು ಗೆಲ್ಲುವ ವಿಶ್ವಾಸವಿದ್ದರೆ ೧೨ ಜನ ಹಾಲಿ ಎಂಪಿಗಳಿಗೆ ಟಿಕೆಟ್ ನಿರಾಕರಿಸುತ್ತಿರಲಿಲ್ಲ. ಆಡಳಿತ ಅಲೆ ಇರುವುದರಿಂದಲೇ ಅವರು ಮುಖ ಬದಲಾವಣೆ ಮಾಡುತ್ತಾರೆ ಎಂದರು.

ಬಿಜೆಪಿ ಜೊತೆ ವಿನಯ ಶಾಮೀಲು:

ಕಾಂಗ್ರೆಸ್ ಪಕ್ಷಕ್ಕೆ ತೊಂದರೆ ಕೊಡಲೆಂದೇ ದಾವಣಗೆರೆ ಕ್ಷೇತ್ರದಲ್ಲಿ ವಿನಯ್ ಕುಮಾರ್ ಪಕ್ಷೇತರವಾಗಿ ಸ್ಪರ್ಧಿಸಿದ್ದಾರೆ. ನಿರಂಜನಾನಂದಪುರಿ ಶ್ರೀಗಳ ಮೂಲಕ ಅವನನ್ನು ಮನೆಗೆ ಕರೆಯಿಸಿ, ನೀನು ಪಕ್ಷಕ್ಕೆ ಬಂದು ೬ ತಿಂಗಳಷ್ಟೇ ಆಗಿದೆ, ಮುಂದೆ ಏನಾದರೂ ಅನುಕೂಲ ಮಾಡುತ್ತೇವೆ ಎಂದಾಗ ಒಪ್ಪಿಕೊಂಡು, ಶಾಲು ಹಾಕಿಸಿಕೊಂಡಿದ್ದ. ಆದರೆ, ವಾಪಸ್ ದಾವಣಗೆರೆ ಬರುತ್ತಿದ್ದಂತೆ ಬದಲಾದ ಆತ ಬಿಜೆಪಿ ಜೊತೆ ಶಾಮೀಲಾಗಿದ್ದಾನೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ, ಮಾಜಿ ಶಾಸಕ ಎಸ್.ರಾಮಪ್ಪ, ಮುಖಂಡರಾದ ನಂದಿಗಾವಿ ಶ್ರೀನಿವಾಸ, ಎಂ.ನಾಗೇಂದ್ರಪ್ಪ, ಎಚ್.ಎಸ್.ನಾಗರಾಜ್, ಬಿ.ಎಚ್.ಆನಂದ್, ಆನಂದ್‌ಕುಮಾರ್, ಶಂಕರ್ ಖಟಾವ್‌ಕರ್, ಎಬಿಎಂ ವಿಜಯ್, ಬಿ.ಎಂ.ವಾಗೀಶ್‌ಸ್ವಾಮಿ, ಹಬೀಬುಲ್ಲಾ ಮತ್ತಿತರರಿದ್ದರು.

- - -

ಕೋಟ್‌ ಈಗಾಗಲೇ ದಾವಣಗೆರೆ ಮತದಾರರು ನಿಶ್ಚಯಿಸಿರುವುದರಿಂದ ಕಾಂಗ್ರೆಸ್ ಗೆಲ್ಲುವುದು ಪೂರ್ವದಲ್ಲಿ ಸೂರ್ಯ ಹುಟ್ಟುವಷ್ಟೆ ಸತ್ಯ, ನಿಮಗೆ ನಾನು ಬೇಕಾ, ವಿನಯ್ ಕುಮಾರ್ ಬೇಕಾ ಎಂದು ಪ್ರಶ್ನಿಸಿದ ಸಿಎಂ ಚುನಾವಣೆಗೆ ನಿಂತಿರುವುದು ಪ್ರಭಾ ಅಲ್ಲ, ಸಿದ್ದರಾಮಯ್ಯನೆ ಎಂದು ತಿಳಿದು ಮತ ಚಲಾವಣೆ ಮಾಡಬೇಕು

- ಸಿದ್ದರಾಮಯ್ಯ, ಸಿಎಂ

- - - -೫ಎಚ್‌ಆರ್‌ಆರ್೪:

ಹರಿಹರದ ಗಾಂಧಿ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಪರ ಪ್ರಚಾರ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು.

Share this article