ಇಂದು ಕಾಲ್ತುಳಿತದ ಎಲ್ಲ ಸಂಗತಿ ಬಹಿರಂಗ: ಸರ್ಕಾರ

KannadaprabhaNewsNetwork |  
Published : Jun 11, 2025, 11:45 AM IST

ಸಾರಾಂಶ

ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಸಂಗತಿಗಳನ್ನು ಬುಧವಾರ ಬಹಿರಂಗಪಡಿಸಲಾಗುವುದು ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಸಂಗತಿಗಳನ್ನು ಬುಧವಾರ ಬಹಿರಂಗಪಡಿಸಲಾಗುವುದು ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

ಪ್ರಕರಣ ಸಂಬಂಧ ಬಂಧನಕ್ಕೆ ಒಳಗಾಗಿರುವ ಆರ್‌ಸಿಬಿ ಮಾರುಕಟ್ಟೆ ವಿಭಾಗದ ನಿಖಿಲ್‌ ಸೋಸಲೆ, ಡಿಎನ್‌ಎ ಎಂಟರ್‌ಟೈನ್‌ಮೆಂಟ್‌ ನೆಟ್‌ವರ್ಕ್ಸ್‌ ನಿರ್ದೇಶಕ ಸುನೀಲ್‌ ಮ್ಯಾಥ್ಯೂ, ಡಿಎನ್‌ನ ಮ್ಯಾನೇಜರ್‌ ಕಿರಣ್‌ ಕುಮಾರ್‌ ಮತ್ತು ಸಮಂತ್‌ ಮಾವಿನಕೆರೆ ಅವರು, ತಮ್ಮನ್ನು ಬಿಡುಗಡೆ ಮಾಡಲು ಆದೇಶಿಸುವಂತೆ ಕೋರಿ ಅರ್ಜಿಗಳನ್ನು ನ್ಯಾಯಮೂರ್ತಿ ಎಸ್‌.ಆರ್‌.ಕೃಷ್ಣ ಕುಮಾರ್‌ ಅವರ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ಹಿರಿಯ ವಕೀಲ ಸಂದೇಶ್‌ ಚೌಟ ಅವರು ಸುದೀರ್ಘವಾಗಿ ವಾದ ಮಂಡಿಸಿದರು. ವಾದ ಪೂರ್ಣಗೊಳಿಸುವ ವೇಳೆ ಪೀಠದ ಮುಂದೆ ಹಾಜರಾದ ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ್‌ ಶೆಟ್ಟಿ ಅವರು, ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ವಿಚಾರಗಳನ್ನು ಬಹಿರಂಗಪಡಿಸಲಾಗುವುದು. ಎಲ್ಲವನ್ನೂ ಕಪ್ಪು-ಬಿಳುಪಿನ ಮಾದರಿಯಲ್ಲಿ ಪೀಠದ ಮುಂದಿಡಲು ಸಿದ್ಧತೆ ನಡೆಸಬೇಕಿದೆ. ಅರ್ಜಿದಾರರ ಆರೋಪಗಳಿಗೆ ವಿಸ್ತೃತವಾದ ಮಂಡನೆ ಮಾಡಬೇಕಿದೆ. ಇದೇ ಕಾರಣಕ್ಕೆ ಹಂಗಾಮಿ ನ್ಯಾಯಮೂರ್ತಿಗಳ ಮುಂದೆ ಇರುವ ಸ್ವಯಂಪ್ರೇರಿತ ಪಿಐಎಲ್‌ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಲು ಮನವಿ ಮಾಡಲಾಗಿದೆ. ಹೀಗಾಗಿ, ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಬೇಕು ಎಂದು ಕೋರಿದರು.

ಅದಕ್ಕೆ ಸಂದೇಶ್‌ ಚೌಟ, ಅರ್ಜಿದಾರರ ತಕ್ಷಣ ಬಿಡುಗಡೆಗೆ ಆದೇಶಿಸಬೇಕು. ಅರ್ಜಿದಾರರು ಈ ಅರ್ಜಿಯಲ್ಲಿ ಸಫಲವಾಗದಿದ್ದರೆ, ಮತ್ತೆ ಕಸ್ಟಡಿಗೆ ಹೋಗುತ್ತಾರೆ ಎಂದು ಕೋರಿದರು. ಇದಕ್ಕೆ ತೀವ್ರವಾಗಿ ಆಕ್ಷೇಪಿಸಿದ ಅಡ್ವೊಕೇಟ್‌ ಜನರಲ್‌, ಅಂತಹ ಮನವಿ ಪರಿಗಣಿಸಲು ಸಾಧ್ಯವಿಲ್ಲ. ವಿಚಾರಣೆಯನ್ನು ಮುಂದೂಡಬೇಕು ಎಂದು ಕೋರಿದರು. ಈ ಮನವಿ ಪರಿಗಣಿಸಿದ ನ್ಯಾಯಪೀಠ, ಅರ್ಜಿಯನ್ನು ಬುಧವಾರ ಬೆಳಗ್ಗೆ 10.30ಕ್ಕೆ ಮುಂದೂಡಿತು.ಇದಕ್ಕೂ ಮುನ್ನ ಸಂದೇಶ್‌ ಚೌಟ ವಾದಿಸಿ, ಜೂ.5ರಂದು ಬೆಳಗಿನ ಜಾವ ಪ್ರತ್ಯೇಕವಾಗಿ ಸಮಂತ್‌ ಮಾವಿನಕೆರೆ ನಿಖಿಲ್‌ ಸೋಸಲೆ ಹಾಗೂ ಸುನೀಲ್‌ ಮ್ಯಾಥ್ಯೂ ಮತ್ತು ಕಿರಣ್‌ ಕುಮಾರ್‌ ಬಂಧಿಸಲಾಗಿದೆ. ಇವರನ್ನು ಬಂಧಿಸಲು ಸಿಸಿಬಿಗೆ ಯಾವ ಅಧಿಕಾರ ಇದೆ? ತನಿಖೆಗೆ ಹಾಜರಾಗುವಂತೆ ನೋಟಿಸ್‌ ನೀಡದೆಯೇ ಬಂಧಿಸಿದ್ದು ಹೇಗೆ? ಮುಖ್ಯಮಂತ್ರಿ ಸೂಚನೆ ಆಧರಿಸಿ ನಾಲ್ವರನ್ನು ಬಂಧಿಸಲಾಗಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಅಲ್ಲದೆ, ಎಫ್‌ಐಆರ್‌ನಲ್ಲಿ ಅರ್ಜಿದಾರರ ಹೆಸರು ಇಲ್ಲ. ಕಾಲ್ತುಳಿತ ಘಟನೆಯ ತನಿಖೆ ನಡೆಸದೆ ಅರ್ಜಿದಾರರನ್ನು ಬಂಧಿಸಿರುವುದು ಅಕ್ರಮ. ಐವರು ಪೊಲೀಸ್‌ ಅಧಿಕಾರಿಗಳು, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ವಜಾ ಮಾಡಲಾಗಿದೆ. ಗುಪ್ತದಳದ ಮುಖ್ಯಸ್ಥ ಹೇಮಂತ್‌ ನಿಂಬಾಳ್ಕರ್‌ ವರ್ಗಾವಣೆಯಾಗಿದೆ. ಇವರಲ್ಲಿ ಯಾರೊಬ್ಬರನ್ನೂ ಏಕೆ ಬಂಧಿಸಿಲ್ಲ? ಮುಖ್ಯಮಂತ್ರಿಗೆ ಬಂಧನ ಆದೇಶ ನೀಡುವ ಅಧಿಕಾರ ಎಲ್ಲಿದೆ? ಬಂಧನ ಅಧಿಕಾರ ತನಿಖಾಧಿಕಾರಿ ವಿವೇಚನೆಗೆ ಬಿಟ್ಟದ್ದು. ರಾಜಕೀಯ ಪ್ರಭಾವ ಇಲ್ಲಿ ಕೆಲಸ ಮಾಡಿದೆ. ವಿಜಯೋತ್ಸವಕ್ಕೆ ಬನ್ನಿ ಎಂದು ಆರ್‌ಸಿಬಿ ಕರೆ ನೀಡಿದೆ. ಇದೇ ಕರೆಯನ್ನು ಸರ್ಕಾರವೂ ನೀಡಿದೆ. ಆರ್‌ಸಿಬಿ, ಡಿಎನ್‌ಎ, ಕೆಎಸ್‌ಸಿಎ, ಸರ್ಕಾರ ಎಲ್ಲರೂ ಒಂದೇ ನೆಲೆಯಲ್ಲಿ ಇದ್ದಾರೆ. ಹೀಗಿದ್ದರೂ ನ್ಯಾಯಾಲಯದಲ್ಲಿ ಒಬ್ಬರಿಗೊಬ್ಬರು ಹೋರಾಡುವ ಅಗತ್ಯವೇನಿದೆ? ಎಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!