ಭಟ್ಕಳ: ಪುರಸಭೆಯ ಅವೈಜ್ಞಾನಿಕ ಒಳಚರಂಡಿ ಕಾಮಗಾರಿಯಿಂದ ಪಟ್ಟಣದ ಆಸರಕೇರಿಯಲ್ಲಿ ಒಳಚರಂಡಿ ಮ್ಯಾನ್ ಹೋಲ್ ನಿಂದ ನೀರು ಸೋರಿಕೆಯಾಗಿ ಬಾವಿ ಸೇರಿ ಕಲುಷಿತಗೊಂಡಿದ್ದು, ಇದರ ನೀರು ಸೇವನೆ ಮಾಡಿದ ಜನರು ಜ್ವರದಿಂದ ಆಸ್ಪತ್ರೆ ಸೇರುತ್ತಿದ್ದು. ಈ ಬಗ್ಗೆ ಕೂಡಲೇ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಮಂಗಳವಾರ ಆಸರಕೇರಿಯ ಸಾರ್ವಜನಿಕರು ತಹಸೀಲ್ದಾರಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ತಹಸೀಲ್ದಾರ ನಾಗೇಂದ್ರ ಕೋಳಶೆಟ್ಟಿ, ಈ ಬಗ್ಗೆ ಸ್ಥಳಕ್ಕಾಗಮಿಸಿ ಪರಿಶೀಲಿಸುವ ಭರವಸೆ ನೀಡಿದರು. ಸಾರ್ವಜನಿಕರು ಬಳಿಕ ತಾಲೂಕು ಆರೋಗ್ಯಾಧಿಕಾರಿ ಡಾ.ಸವಿತಾ ಕಾಮತ್ ಅವರಿಗೆ ಮನವಿ ಸಲ್ಲಿಸಿ ಆಸರಕೇರಿ ವಾರ್ಡ್‌ನ ಬಾವಿಗಳ ನೀರು ಮತ್ತು ಸಾಮೂಹಿಕ ರಕ್ತ ಪರೀಕ್ಷೆ ನಡೆಸುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಸದಸ್ಯರಾದ ವೆಂಕಟೇಶ ನಾಯ್ಕ, ಕೃಷ್ಣ ನಾಯ್ಕ ಆಸರಕೇರಿ, ಶ್ರೀಧರ ನಾಯ್ಕ, ಶ್ರೀಕಾಂತ ನಾಯ್ಕ, ಈಶ್ವರ ನಾಯ್ಕ, ಗಣಪತಿ ನಾಯ್ಮ, ಮನಮೋಹನ ನಾಯ್ಕ, ಪ್ರಕಾಶ ನಾಯ್ಕ,ಆರ್.ಜಿ.ನಾಯ್ಕ ಮುಂತಾದವರಿದ್ದರು.ಮನವಿಗೆ ಸ್ಪಂದನೆ:
ಆಸರಕೇರಿಯ ಸಾರ್ವಜನಿಕರ ಮನವಿಗೆ ತಕ್ಷಣ ಸ್ಪಂದಿಸಿದ ತಹಸೀಲ್ದಾರ ನಾಗೇಂದ್ರ ಕೊಳಶೆಟ್ಟಿ ಮಂಗಳವಾರ ಸಂಜೆ ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವಡ, ತಾಲೂಕು ಆರೋಗ್ಯಾಧಿಕಾರಿ ಡಾ.ಸವಿತಾ ಕಾಮತ್ ಜೊತೆಗೂಡಿ ಆಸರಕೇರಿ ವಾರ್ಡ್‌ಗೆ ತೆರಳಿ ಪರಿಶೀಲನೆ ನಡೆಸಿದರು.ಸಾರ್ವಜನಿಕರು ಒಳಚರಂಡಿ ಮ್ಯಾನ್ ಹೋಲ್ ಸೋರಿಕೆ ಆಗುತ್ತಿರುವ ಬಗ್ಗೆ ಅಧಿಕಾರಿಗಳಿಗೆ ತೋರಿಸಿಕೊಟ್ಟರು. ಇದನ್ನು ನೋಡಿದ ತಹಸೀಲ್ದಾರ ನಾಗೇಂದ್ರ ಈ ಬಗ್ಗೆ ಕೂಡಲೇ ಸೂಕ್ತ ಕ್ರಮ ವಹಿಸುವಂತೆ ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವಡಗೆ ಸೂಚಿಸಿದರು.