ಗದಗ: ವ್ಯಕ್ತಿ ಸತ್ತ ಮೇಲೆ ಆತ ಮಾಡಿದ ಮಹತ್ಕಾರ್ಯಗಳು, ಶೋಧನೆಗಳು, ಸಂಶೋಧನೆಯು ಹಾಗೇಯೇ ಉಳಿಯಬೇಕು, ಇತರರಿಗೆ ಉಪಯೋಗವಾಗಬೇಕು ಎನ್ನುವಂತೆ ಸಿ.ವಿ. ಕೆರಿಮನಿಯವರು ಬದುಕಿದ್ದಾರೆ ಎಂದು ರಾಮಲಿಂಗೇಶ್ವರ ದಾಸೋಹಮಠ ಬೆಳ್ಳಟ್ಟಿ ಶ್ರೀಬಸವರಾಜ ಸ್ವಾಮಿಗಳು ಹೇಳಿದರು.
ಜಗತ್ತಿನ ಎಲ್ಲ ಸಾಹಿತ್ಯಗಳು ಜನಪದ ಸಾಹಿತ್ಯದಿಂದಲೇ ಉಗಮವಾಗಿವೆ ಎನ್ನುವ ಭಾವ ಡಾ. ಜಕಬಾಳ ಅವರ ಮಾತುಗಳನ್ನು ಕೇಳಿದಾಗ ಗೋಚರವಾಗುತ್ತಿದೆ. ಆಡು ಭಾಷೆಯಲ್ಲಿ ತಮ್ಮ ಅಭಿಲಾಷೆಗಳನ್ನು ಪ್ರಕಟಿಸಲು ಬುದ್ಧಿವಂತರು ತಾಳ-ಮೇಳಗಳನ್ನು ಮಿಶ್ರಣ ಮಾಡಿ ಹಾಡುವ ಜನಪದ ಹಾಡುಗಳು ವಿಶಿಷ್ಟವಾಗಿವೆ ಎಂದರು.
ಶಿಕ್ಷಕ ಪೂರ್ಣಾಜಿ ಕರಾಟೆ ಮಾತನಾಡಿ, ಗದಗ ಜಿಲ್ಲೆಯ ಲಕ್ಷ್ಮೇಶ್ವರವನ್ನು ಕಾರ್ಯಕ್ಷೇತ್ರ ಮಾಡಿಕೊಂಡು ಕಳೆದ ನಾಲ್ಕು ದಶಕಗಳಿಂದ ಸಾಹಿತ್ಯ ಸರಸ್ವತಿಯ ಸೇವೆ ಮಾಡಿದ ಕೆರಿಮನಿ ಅವರು ಅರ್ಪಣಾ ಮನೋಭಾವದ ಕನ್ನಡ ಪ್ರಾಧ್ಯಾಪಕ, ಪ್ರಾಚಾರ್ಯ ಸೃಜನಶೀಲ ಸಾಹಿತಿಗಳಾಗಿ ಅಪಾರ ಶಿಷ್ಯ ಬಳಗ ಹೊಂದಿ ಮೂವತ್ತಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ ಎಂದರು.ಡಾ. ದತ್ತಪ್ರಸನ್ನ ಪಾಟೀಲ ಮಾತನಾಡಿ, ಹೆಸರಾಂತ ಜನಪದ ವಿದ್ವಾಂಸರಾದ ಡಾ. ಜಕಬಾಳ ಉಪನ್ಯಾಸ ಪ್ರಾತ್ಯಕ್ಷಿಕೆಗಳ ಮೂಲಕ ಜನಪದ ಕಲಾ ಪ್ರಕಾರಗಳನ್ನು ಇಂದಿನ ತಲೆಮಾರಿಗೆ ವರ್ಗಾಯಿಸುವ ಮಹತ್ವದ ಕಾರ್ಯವನ್ನು ಮಾಡುತ್ತಿದ್ದಾರೆ. 17ಕ್ಕೂ ಅಧಿಕ ಪುಸ್ತಕಗಳನ್ನು ನೂರಾರು ಲೇಖನಗಳನ್ನು ಬರೆದು ರಾಷ್ಟ್ರ ಹಾಗೂ ರಾಜ್ಯಮಟ್ಟದ ಅನೇಕ ವಿಚಾರಗೋಷ್ಠಿಗಳಲ್ಲಿ ಭಾಗವಹಿಸಿ ನವೀನ ವಿಚಾರಗಳನ್ನು ಮಂಡಿಸಿದ್ದಾರೆ. ಇವರ ಸಾಹಿತ್ಯ ಸೇವೆಯನ್ನು ಮನಗಂಡು ಪ್ರೊ. ಸಿ.ವಿ. ಕೆರಿಮನಿ ತಿರುಳ್ಗನ್ನಡ ಸಿರಿ ದತ್ತಿ ಪ್ರಶಸ್ತಿಯನ್ನು ಪರಿಷತ್ತಿನಲ್ಲಿ ಸ್ಥಾಪಿಸಿ ಪ್ರಥಮವಾಗಿ ನೀಡಿ ಗೌರವಿಸಲಾಗುತ್ತಿದೆ ಎಂದರು.ಈ ವೇಳೆ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಪ್ರೊ. ಎ.ಬಿ. ಹಿರೇಮಠ ಮಾತನಾಡಿದರು. ಪ್ರೊ. ಸಿ.ವಿ. ಕೆರಿಮನಿ ತಿರುಳ್ಗನ್ನಡ ಸಿರಿ ಪ್ರಶಸ್ತಿಯನ್ನು ಡಾ. ಸಿದ್ದಣ್ಣ ಜಕಬಾಳ ಅವರಿಗೆ ಪ್ರದಾನ ಮಾಡಲಾಯಿತು. ಬಿಜಾಪುರ ಜಿಲ್ಲೆಯ ಆಲಮೇಲ್ ತಾಲೂಕಿನಲ್ಲಿ ನಡೆಯುವ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ಜಿಲ್ಲಾ ಕಸಾಪ ಕಾರ್ಯಕಾರಿ ಸಮಿತಿ ಸದಸ್ಯರಾದ ಸಿ.ಕೆ. ಎಚ್ ಶಾಸ್ತ್ರಿ (ಕಡಣಿ) ಅವರನ್ನು ಸನ್ಮಾನಿಸಲಾಯಿತು.
ಶಾಂತಲಾ ಹಂಚಿನಾಳ ಪ್ರಾರ್ಥಿಸಿದರು. ಶಿವಾನಂದ ಗಿಡ್ನಂದಿ ಸ್ವಾಗತಿಸಿದರು. ಈಶ್ವರ ಮೆಡ್ಲೇರಿ ನಿರೂಪಿಸಿದರು. ಸೋಮಶೇಖರ ಕೆರಿಮನಿ ವಂದಿಸಿದರು.