ಶಿವಮೊಗ್ಗ: ಸನಾತನ ಕಾಲದಿಂದಲೂ ಗೋವಿಗೆ ವಿಶೇಷವಾದ ಸ್ಥಾನಮಾನ ಇದ್ದು, ಗೋವಿನಲ್ಲಿ ದೇವತೆಗಳು ವಾಸಿಸಿದ್ದಾರೆ ಎನ್ನುವುದು ಪುರಾಣ ಕಾಲದಿಂದಲೂ ಇರುವ ನಂಬಿಕೆ. ಗೋವಿನ ಪೂಜೆಯು ನಮ್ಮ ಸಂಸ್ಕೃತಿಯ ಭಾಗ. ಗೋಪೂಜೆಯಿಂದ ಸಕಲ ಇಷ್ಟಾರ್ಥ ಸಿದ್ಧಿಸುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.
12 ವರ್ಷಗಳಿಂದ ನಿರಂತರವಾಗಿ ಗೋಪೂಜೆ ಹಾಗೂ ಗೋವಿನ ಸೇವೆ ಮಾಡುತ್ತ ಬಂದಿರುವ ಜ್ಞಾನೇಶ್ವರಿ ಗೋ ಶಾಲೆ ಬಹಳ ಒಳ್ಳೆಯ ಕೆಲಸವನ್ನು ಮಾಡುತ್ತ ಬಂದಿದೆ. ಪ್ರತಿಯೊಬ್ಬರೂ ಈ ಗೋಶಾಲೆಯನ್ನು ವೀಕ್ಷಿಸಬೇಕು ಎಂದರು.ಉದ್ಯಮಿ ಭೂಪಾಳಂ ಶಶಿಧರ್ ಮಾತನಾಡಿ, ದೀಪಾವಳಿ ಹಬ್ಬದಲ್ಲಿ ಗೋಪೂಜೆ ಮಾಡುವುದರಿಂದ ವಿಶೇಷವಾದ ಫಲ ಸಿಗುತ್ತದೆ. ಜ್ಞಾನೇಶ್ವರಿ ಗೋಶಾಲೆಯವರು ಮಾಡುತ್ತಿರುವ ಸಮಾಜಮುಖಿ ಕಾರ್ಯ ಅರ್ಥಪೂರ್ಣವಾಗಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಜ್ಞಾನೇಶ್ವರಿ ಗೋ ಶಾಲೆ ಅಧ್ಯಕ್ಷ ಚಂದ್ರಹಾಸ ಪಿ.ರಾಯ್ಕರ್ ಮಾತನಾಡಿ, ಇಂತಹ ಗೋಶಾಲೆಗಳು ಶಾಶ್ವತವಾಗಿ ಉಳಿಯಲು ಸರ್ಕಾರದ ಹಾಗೂ ಸಾರ್ವಜನಿಕರು, ಜನಪ್ರತಿನಿಧಿಗಳ ಸಹಕಾರ ತುಂಬಾ ಅಗತ್ಯವಾಗಿ ಬೇಕಾಗಿದೆ. ಇಲ್ಲವಾದರೆ ನಿರ್ವಹಣೆ ತುಂಬಾ ಕಷ್ಟಕರವಾಗುತ್ತದೆ ಎಂದು ಹೇಳಿದರು.
ಇದೇ ವೇಳೆ ಉದ್ಯಮಿ ಭೂಪಾಳಂ ಶಶಿಧರ್ ಅವರು 50 ಸಾವಿರ ರು. ದೇಣಿಗೆ ನೀಡಿದರು. ಕೃಷ್ಣಮೂರ್ತಿ, ಶ್ರೀಪಾದ ರೇವಣಕರ್, ಗುರುರಾಜ್ ಶೇಠ್, ಡಿ.ವಿ.ಪ್ರಕಾಶ್, ಆರ್.ಗಣೇಶ್, ಜನಾರ್ದನ್ ಶೇಠ್, ಪ್ರಶಾಂತ್ ರಾಯ್ಕರ್, ಎಸ್.ಪಾಂಡುರಂಗ ಶೇಠ್, ಕಮಲಾಕ್ಷ ಶೇಠ್ ಇತರರಿದ್ದರು.