ನಾಳೆ ಬಂಗಾರಪ್ಪ ಅವರ 93ನೇ ಜನ್ಮ ದಿನೋತ್ಸವ

KannadaprabhaNewsNetwork |  
Published : Oct 25, 2025, 01:00 AM IST
ಶಿವಮೊಗ್ಗದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ  ವೇಣುಗೋಪಾಲ್ ನಾಯಕ್ ಮಾತನಾಡಿದರು. | Kannada Prabha

ಸಾರಾಂಶ

ಸೊರಬದ ಬಂಗಾರಧಾಮದಲ್ಲಿ ಅ.26ರಂದು ಎಸ್.ಬಂಗಾರಪ್ಪ ಫೌಂಡೇಷನ್, ಶ್ರೀ ಎಸ್.ಬಂಗಾರಪ್ಪ ವಿಚಾರ ವೇದಿಕೆ ಇವರ ಸಹಯೋಗದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ 93ನೇ ಜನ್ಮದಿನೋತ್ಸವ ಕಾರ್ಯಕ್ರಮವನ್ನು ಅ.26ರಂದು ಆಯೋಜಿಸಲಾಗಿದೆ ಎಂದು ವಿಚಾರ ವೇದಿಕೆಯ ಅಧ್ಯಕ್ಷ ವೇಣುಗೋಪಾಲ್ ನಾಯಕ್ ತಿಳಿಸಿದರು.

ಶಿವಮೊಗ್ಗ: ಸೊರಬದ ಬಂಗಾರಧಾಮದಲ್ಲಿ ಅ.26ರಂದು ಎಸ್.ಬಂಗಾರಪ್ಪ ಫೌಂಡೇಷನ್, ಶ್ರೀ ಎಸ್.ಬಂಗಾರಪ್ಪ ವಿಚಾರ ವೇದಿಕೆ ಇವರ ಸಹಯೋಗದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ 93ನೇ ಜನ್ಮದಿನೋತ್ಸವ ಕಾರ್ಯಕ್ರಮವನ್ನು ಅ.26ರಂದು ಆಯೋಜಿಸಲಾಗಿದೆ ಎಂದು ವಿಚಾರ ವೇದಿಕೆಯ ಅಧ್ಯಕ್ಷ ವೇಣುಗೋಪಾಲ್ ನಾಯಕ್ ತಿಳಿಸಿದರು.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಂಗಾರಪ್ಪನವರು ಸಮಾಜವಾದಿ ಚಿಂತಕರಾಗಿದ್ದರು. ಅಭಿವೃದ್ಧಿಯ ಹರಿಕಾರರಾಗಿದ್ದರು. ಬಡವರ ಬಂಧುವಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಜನಮಾನಸದಲ್ಲಿ ಉಳಿದಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಅವರೊಂದು ನಕ್ಷತ್ರವಾಗಿದ್ದಾರೆ. ಇಂತಹ ಬಂಗಾರಪ್ಪನವರ ಜನ್ಮದಿನೋತ್ಸವವನ್ನು ನಮನ- ಚಿಂತನ- ಸನ್ಮಾನದ ಮೂಲಕ ಆಯೋಜಿಸಲಾಗಿದೆ ಎಂದರು.ಜನ್ಮದಿನೋತ್ಸವದ ಅಂಗವಾಗಿ 4 ಜನರಿಗೆ ‘ಬಂಗಾರ’ ಪ್ರಶಸ್ತಿ ನೀಡಲಾಗುವುದು. ಈ ಪ್ರಶಸ್ತಿ 1 ಲಕ್ಷ ರು. ನಗದು ಹಾಗೂ ಫಲಕ ಒಳಗೊಂಡಿರುತ್ತದೆ. ಈ ಬಾರಿ ‘ಸಾಹಿತ್ಯ ಬಂಗಾರ’ದ ಪ್ರಶಸ್ತಿಯು ಪ್ರಸಿದ್ಧ ಸಾಹಿತಿ ಡಾ.ಕಾಳೇಗೌಡ ನಾಗವಾರ, ಧರ್ಮ ಬಂಗಾರ ಪ್ರಶಸ್ತಿಯನ್ನು ಬೆಂಗಳೂರಿನ ಧರ್ಮ ಪ್ರವರ್ತಕ ಗುಬ್ಬಿ ತೋಟದಪ್ಪ ಧರ್ಮಸಂಸ್ಥೆ ಇವರ ಪರವಾಗಿ ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಎಲ್.ರೇವಣಸಿದ್ದಯ್ಯ ಅವರಿಗೆ, ‘ಜಾನಪದ ಬಂಗಾರ’ ಪ್ರಶಸ್ತಿಯನ್ನು ಚೌಡಿಕೆ ಕಲಾವಿದೆ ರಾಧಾಬಾಯಿ ಮಾದರ್ ಅವರಿಗೆ ಹಾಗೂ ‘ಕಲಾ ಬಂಗಾರ’ ಪ್ರಶಸ್ತಿಯನ್ನು ರಂಗಭೂಮಿ ಕಲಾವಿದ ಜೇವರ್ಗಿ ರಾಜಣ್ಣ ಅವರಿಗೆ ನೀಡಲಾಗುವುದು ಎಂದು ತಿಳಿಸಿದರು. ಪ್ರಶಸ್ತಿ ಪ್ರದಾನ ಸಮಾರಂಭ ಸಂಜೆ 5 ಗಂಟೆಗೆ ಬಂಗಾರಧಾಮದಲ್ಲಿ ನಡೆಯಲಿದೆ. ಸಚಿವ ಕೆ.ಎಚ್.ಮುನಿಯಪ್ಪ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಸಚಿವ ಸಂತೋಷ್ ಲಾಡ್, ಶಾಸಕ ಬೇಳೂರು ಗೋಪಾಲಕೃಷ್ಣ, ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಜಂಟಿ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ತಿಲಕ್ ಕುಮಾರ್, ನಾಟಕ ಅಕಾಡೆಮಿ ಅಧ್ಯಕ್ಷ ಡಾ.ಕೆ.ವಿ.ನಾಗರಾಜ್ ಮೂರ್ತಿ. ವಿಚಾರ ವೇದಿಕೆ ಅಧ್ಯಕ್ಷ ವೇಣುಗೋಪಾಲ ನಾಯಕ್ ಉಪಸ್ಥಿತರಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಸಚಿವ ಎಸ್. ಮಧು ಬಂಗಾರಪ್ಪ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.ಬಂಗಾರಪ್ಪ ವಿಚಾರ ವೇದಿಕೆ ಪ್ರಮುಖ ಜಿ.ಡಿ.ಮಂಜುನಾಥ್ ಮಾತನಾಡಿ, ಬಂಗಾರಪ್ಪನವರ ಚಿಂತನೆಗಳು, ಆದರ್ಶಗಳು ಎಲ್ಲಾ ಕಾಲಕ್ಕೂ ವರ್ತಮಾನವಾಗಿಯೇ ಇರುತ್ತವೆ. ಈ ಹಿನ್ನೆಲೆಯಲ್ಲಿ ಅ. 26ರಂದು ಬೆಳಗ್ಗೆ 10.30ಕ್ಕೆ ಸೊರಬದ ಡಾ.ರಾಜ್‌ಕುಮಾರ್ ರಂಗಮಂದಿರದಲ್ಲಿ ಬಂಗಾರಪ್ಪನವರ ಚಿಂತನೆಗಳು ಕುರಿತ ಸುಸ್ಥಿರ ಬದುಕು -ಪ್ರಸ್ತುತತೆಯ ವಿಚಾರ ಸಂಕಿರಣ ಏರ್ಪಡಿಸಲಾಗಿದೆ. ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪಾ, ಮತ್ತು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಅವರು ಉಪನ್ಯಾಸ ನೀಡುವರು. ವಿಚಾರ ಸಂಕಿರಣದ ಉದ್ಘಾಟನೆಯನ್ನು ಪ್ರಸಿದ್ಧ ಕವಿ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಅವರು ನೆರವೇರಿಸಲಿದ್ದು, ಸಾಹಿತಿ ಡಾ. ಕಾಳೇಗೌಡ ನಾಗವಾರ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.ನಂತರ ಮೂಡಬಿದರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ಎಂಬ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಬಂಗಾರಪ್ಪನವರ ಅಭಿಮಾನಿಗಳು, ಹಿತೈಷಿಗಳು ಆಗಮಿಸಲಿದ್ದಾರೆ. ಸಾರ್ವಜನಿಕರೂ ಈ ಕಾರ್ಯಕ್ರಮಕ್ಕೆ ಆಗಮಿಸಬೇಕು ಎಂದು ಮನವಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ವಿಚಾರ ವೇದಿಕೆಯ ಪ್ರಮುಖರಾದ ಶಮಂತ್, ಆದರ್ಶ ಹುಂಚದಕಟ್ಟೆ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುರ್ಚಿ ಕಿತ್ತಾಟ ರಾಜ್ಯದವರೇ ಬಗೆಹರಿಸಿಕೊಳ್ಳಬೇಕು: ಖರ್ಗೆ
ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ