ಎಲ್ಲಾ ಹೆಣ್ಣುಮಕ್ಕಳು ವಿದ್ಯಾಭ್ಯಾಸ ಪಡೆಯಬೇಕು

KannadaprabhaNewsNetwork | Published : Jul 31, 2024 1:04 AM

ಸಾರಾಂಶ

ಕತ್ತಲು ಇರುವ ಕಡೆ ನಾವು ಬೆಳಕಿನ ದೀಪಗಳನ್ನು ಹಚ್ಚಬೇಕು. ಈ ಹಣತೆಗಳೆ ನಾವು ಹೆಣ್ಣು ಮಕ್ಕಳು. ಹುಟ್ಟಿದ ಮನೆ ಆಗಲಿ, ಕೊಟ್ಟ ಮನೆ ಆಗಲಿ ಹಾಗೂ ಸಮಾಜಕ್ಕೆ ಆಗಲಿ ನಾವು ಹಣತೆಗಳಾಗಿ ಹೆಣ್ಣು ಮಕ್ಕಳು ಕೆಲಸ ನಿರ್ವಹಿಸಬೇಕು ಎಂಬುದು ನನ್ನ ಆಶಯ. ಎಲ್ಲಾ ಹೆಣ್ಣುಮಕ್ಕಳು ವಿದ್ಯಾಭ್ಯಾಸ ಪಡೆಯಬೇಕು. ಇಲ್ಲಿರುವ ಪ್ರತಿ ಹೆಣ್ಣು ಮಕ್ಕಳು ಹಾಗೂ ಪ್ರತಿ ವಿದ್ಯಾರ್ಥಿನಿಯರು ಕೂಡ ಈ ಹಣತೆಗಳಾಗಿ ಅವರು ಉಜ್ವಲಿಸಿ, ಪ್ರಜ್ವಲಿಸಲಿ ಎಂದು ಜಲ್ಲಾಧಿಕಾರಿ ಸತ್ಯಭಾಮ ಹೇಳಿದರು.

ಕನ್ನಡಪ್ರಭ ವಾರ್ತೆ ಹಾಸನ

ಮಕ್ಕಳಿಗೆ ಮನೆಯಲ್ಲೇ ಸರಿಯಾದ ಸಂಸ್ಕಾರ ಕೊಟ್ಟರೇ ಕೊಲೆ ಸುಲಿಗೆ, ಮಾನವ ಕಳ್ಳಸಾಗಣಿಕೆ ಯಾವುದು ಇರುವುದಿಲ್ಲ ಉತ್ತಮ ಭವಿಷ್ಯದ ಜೊತೆಗೆ ಉತ್ತಮ ಸಮಾಜ ನಿರ್ಮಾಣ ಮಾಡಬಹುದು ಎಂದು ಜಿಲ್ಲಾಧಿಕಾರಿ ಸಿ. ಸತ್ಯಭಾಮ ನೆರೆದಿದ್ದ ಮಹಿಳೆಯರಿಗೆ ತಿಳಿಮಾತು ಹೇಳಿದರು. ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ "ಭೇಟಿ ಬಚಾವೊ ಭೇಟಿ ಪಡಾವೊ " ಯೋಜನೆಯಡಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆಯ ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಕತ್ತಲು ಇರುವ ಕಡೆ ನಾವು ಬೆಳಕಿನ ದೀಪಗಳನ್ನು ಹಚ್ಚಬೇಕು. ಈ ಹಣತೆಗಳೆ ನಾವು ಹೆಣ್ಣು ಮಕ್ಕಳು. ಹುಟ್ಟಿದ ಮನೆ ಆಗಲಿ, ಕೊಟ್ಟ ಮನೆ ಆಗಲಿ ಹಾಗೂ ಸಮಾಜಕ್ಕೆ ಆಗಲಿ ನಾವು ಹಣತೆಗಳಾಗಿ ಹೆಣ್ಣು ಮಕ್ಕಳು ಕೆಲಸ ನಿರ್ವಹಿಸಬೇಕು ಎಂಬುದು ನನ್ನ ಆಶಯ. ಇಲ್ಲಿರುವ ಪ್ರತಿ ಹೆಣ್ಣು ಮಕ್ಕಳು ಹಾಗೂ ಪ್ರತಿ ವಿದ್ಯಾರ್ಥಿನಿಯರು ಕೂಡ ಈ ಹಣತೆಗಳಾಗಿ ಅವರು ಉಜ್ವಲಿಸಿ, ಪ್ರಜ್ವಲಿಸಲಿ ಎಂದು ಅಭಿಪ್ರಾಯಪಟ್ಟರು.

ಸಮಾಜದಲ್ಲಿ ಬೇಕಾದಷ್ಟು ಕತ್ತಲು ಇದೆ. ಕತ್ತಲನ್ನು ಹೋಗಲಾಡಿಸಿ ನಾವು ಬೆಳಕನ್ನು ನೀಡುವಂತಹ ದೀಪಗಳಾಗಬೇಕು. ಹೆಣ್ಣೊಂದು ಕಲಿತರೇ ಶಾಲೆಯೊಂದು ತೆರೆದಂತೆ. ಮನೆಯಲ್ಲಿ ಮಕ್ಕಳಿಗೆ ಸರಿಯಾದ ಸಂಸ್ಕಾರ ಕೊಟ್ಟರೇ ಕೊಲೆ ಸುಲಿಗೆ, ಮಾನವ ಕಳ್ಳಸಾಗಣಿಕೆ ಯಾವುದು ಇರುವುದಿಲ್ಲ. ಹೆಣ್ಣು ಮಕ್ಕಳು ಸೇರಿ ಶಿಕ್ಷಣ ಪಡೆಯುತ್ತಿದ್ದು, ಸಾಕ್ಷರತಾ ಪ್ರಮಾಣ ನೂರರಷ್ಟು ಬರುತ್ತಿದೆ. ಸಾಕ್ಷರತೆಯಲ್ಲ, ನಮಗೆ ಬೇಕಾಗಿರುವುದು ಪ್ರಾಮಾಣಿಕತೆ. ತಪ್ಪು ಮಾಡಬಾರದು ಎನ್ನುವ ಮನೋಭಾವ ಬರಬೇಕು. ಶಿಕ್ಷಣ ಪಡೆದವರೇ ರಸ್ತೆ ಕಾಮಗಾರಿ, ಅಧಿಕಾರ ಎಲ್ಲವನ್ನು ಪಡೆಯುವುದು. ನಾವು ನೀವು ಎಲ್ಲಾ ಮಾಡುತ್ತಿರುವ ಕೆಲಸ ಓದಿನಿಂದಲೇ ಎಂಬುದನ್ನು ಮರೆಯಬಾರದು. ದೇಶದಲ್ಲಿರುವ ಎಲ್ಲಾ ಹೆಣ್ಣು ಮಕ್ಕಳು ವಿದ್ಯಾಭ್ಯಾಸ ಪಡೆಯಬೇಕು. ಅಪ್ರಮಾಣಿಕತೆಯಿಂದ ಇಲ್ಲದೇ ಮೌಲ್ಯಗಳನ್ನು ಕಳೆದುಕೊಳ್ಳಲಾಗುತ್ತಿದೆ. ಹಿರಿಯ ನಾಗರಿಕರ ಕೇಸುಗಳು ನಮ್ಮ ಬಳಿ ಬಂದಾಗ ಹಣತೆಗಳಾಗಬೇಕಾದ ನಾವು ಹಿರಿಯರನ್ನು ಹೊರಗೆ ಹಾಕುತ್ತಿರುವ ವಿಚಾರ ಒಂದು ಬೇಸರದ ಸಂಗತಿ. ಕಾಲ ಕೆಟ್ಟಿರುವುದಿಲ್ಲ. ಕೆಟ್ಟಿರುವುದು ನಾವುಗಳು, ನಮ್ಮ ಮೌಲ್ಯಗಳು. ಕೇವಲ ಎಜುಕೇಟೆಡ್ ಆದರೇ ಸಾಲದು. ನಾವು ಓದಿದ್ದೇವೆ ಎಂಬುದಕ್ಕೆ ಸಾಕ್ಷೀಕರಿಸಿ ನಮ್ಮ ನಡವಳಿಕೆಗಳು ಉತ್ತಮ ಆಗಬೇಕು ಎಂದು ಸಲಹೆ ನೀಡಿದರು. ಇದೆ ವೇಳೆ ಹಿರಿಯ ಸಿವಿಲ್ ನ್ಯಾಯಾಧೀಶರಾದ ಜಿ.ಕೆ. ದಾಕ್ಷಾಯಿಣಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ದೂದ್ ಪೀರ್, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಎಂ. ಮಹಾಲಿಂಗಯ್ಯ, ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಕೆ.ಎನ್. ಯಮುನ, ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ಪರಪ್ಪಸ್ವಾಮಿ, ವಕೀಳರ ಸಂಘದ ಉಪಾಧ್ಯಕ್ಷ ಯೋಗೀಶ್, ಮಹದೇವ್, ಮಾನಸಿಕ ಆರೋಗ್ಯ ತಜ್ಞ ಮಂಜುನಾಥ್, ಅನೀಲ್ ಇತರರು ಉಪಸ್ಥಿತರಿದ್ದರು. ಲತಾ ಪ್ರಾರ್ಥಿಸಿದರು. ಇಲಾಖೆ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಧರಣಿ ಕುಮಾರ್ ಸ್ವಾಗತಿಸಿದರು.

Share this article