ಕನಕ ನೌಕರರ ಕಟ್ಟಡ ನಿರ್ಮಾಣದ ಬಗ್ಗೆ ಆರೋಪ, ಪ್ರತ್ಯಾರೋಪ

KannadaprabhaNewsNetwork |  
Published : Jan 04, 2025, 12:32 AM IST
ಚಿತ್ರ 2 | Kannada Prabha

ಸಾರಾಂಶ

ಪ್ರವಾಸಿ ಮಂದಿರದಲ್ಲಿ ಹೋರಾಟ ಹಮ್ಮಿಕೊಳ್ಳುವ ಕುರಿತು ಪೂರ್ವಭಾವಿ ಸಭೆ

ಕನ್ನಡಪ್ರಭ ವಾರ್ತೆ ಹಿರಿಯೂರು

ನಗರದ ತಾಲೂಕು ಕಚೇರಿ ಬಳಿಯಲ್ಲಿ ನಿರ್ಮಾಣವಾಗುತ್ತಿರುವ ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ಕಟ್ಟಡದ ವಿಚಾರವಾಗಿ ತಾಲೂಕು ಕುರುಬರ ಸಂಘದ ಪತ್ರಿಕಾ ಪ್ರಕಟಣೆಗೆ ಉತ್ತರವಾಗಿ ದಲಿತಪರ ಸಂಘಟನೆಗಳು ಶುಕ್ರವಾರ ನಗರದ ಪ್ರವಾಸಿ ಮಂದಿರದಲ್ಲಿ ಹೋರಾಟ ಹಮ್ಮಿಕೊಳ್ಳುವ ಪೂರ್ವಭಾವಿ ಸಭೆ ನಡೆಸಿದವು.

ಮಹಾನಾಯಕ ದಲಿತ ಸೇನೆ ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ಕೆಪಿ. ಶ್ರೀನಿವಾಸ್ ಮಾತನಾಡಿ, ತಾಲೂಕು ಕುರುಬರ ಸಂಘದ ಅಧ್ಯಕ್ಷರು ಪತ್ರಿಕಾ ಹೇಳಿಕೆ ನೀಡಿ ಕೆಲವು ಸಂಘಟನೆಗಳು ಕಟ್ಟಡ ನಿರ್ಮಾಣದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದಿದ್ದಾರೆ. ಆದರೆ ಜನವರಿ-4-2021 ರ ನಗರಸಭೆ ಸಾಮಾನ್ಯ ಸಭೆಯಲ್ಲಿ

ಇದೇ ಸಂಘದ ಕಟ್ಟಡಕ್ಕೆ 12.9×20 ಅಡಿಯಷ್ಟು ಜಾಗವನ್ನು ನಗರಸಭೆ ಸರ್ವ ಸದಸ್ಯರು ಒಪ್ಪಿ ಸರ್ಕಾರದ ನಿಯಮಾವಳಿಗಳ ಪ್ರಕಾರ ಮಂಜೂರು ಮಾಡಿರುವುದು ಸರಿಯಷ್ಟೆ. ಒಮ್ಮೆ ನಗರಸಭೆ ಸದಸ್ಯರ ಸಾಮಾನ್ಯ ಸಭೆಯಲ್ಲಿ ಇಂತಿಷ್ಟೇ ಅಡಿಯೆಂದು ಸದಸ್ಯರೆಲ್ಲರೂ ಒಪ್ಪಿ ಮಂಜೂರು ಮಾಡಿದ ಮೇಲೂ ಆ ಸಂಘದ ಹೆಸರಿನಲ್ಲಿ ನಗರಸಭೆಯಲ್ಲಿ ಹೆಚ್ಚಿನ ಅಳತೆಗೆ ಖಾತೆ ಆಗಿರುವುದು ಅನುಮಾನ ಹುಟ್ಟು ಹಾಕುತ್ತಿದೆ. ನಗರಸಭೆಯ ಕೌನ್ಸಿಲ್ ಸಭೆಯ ನಿರ್ಣಯವಾದ ಮೇಲೆ ಅದನ್ನೇ ಬದಲಾಯಿಸಬಹುದು ಎಂದಾದರೆ ಇಂತಹ ಹತ್ತಾರು ಸಭೆಯ ನೂರಾರು ನಿರ್ಣಯಗಳನ್ನು ಬದಲಾಯಿಸಬಹುದಲ್ಲವಾ ಎಂಬ ಪ್ರಶ್ನೆ ಈಗ ಎಲ್ಲರದ್ದಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆದರೆ ಮಾತ್ರ ಸತ್ಯಾಂಶ ಹೊರಬರಲಿದ್ದು ಈ ಒತ್ತುವರಿ ಕಟ್ಟಡದ ಸತ್ಯಾoಶ ಜನರಿಗೆ ತಿಳಿಯುವವರೆಗೆ ನಮ್ಮ ಸಂಘಟನೆಯ ಹೋರಾಟ ಮುಂದುವರಿಯಲಿದೆ ಎಂದರು.

ಈ ಸಂದರ್ಭದಲ್ಲಿ ಅಂಬೇಡ್ಕರ್ ವಾದದ ಕರ್ನಾಟಕ ದಲಿತ ಸಂಘರ್ಷ ಸಂಘಟನೆಯ ಬೆಂಗಳೂರು ವಿಭಾಗೀಯ ಸಂಘಟನಾ ಸಂಚಾಲಕ ಜೀವೇಶ್ ಬೋರನಕುಂಟೆ, ಭಾರತೀಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಕಾರ್ಯಾಧ್ಯಕ್ಷ ಕೆ.ತಿಮ್ಮರಾಜು, ಪ್ರೊ.ಬಿ.ಕೃಷ್ಣಪ್ಪ ಬಣದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಅಧ್ಯಕ್ಷ ಕೆಆರ್.ಹಳ್ಳಿ ರಘುನಾಥ್, ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಂತರಾಯ ಬ್ಯಾಡರಹಳ್ಳಿ, ಕರ್ನಾಟಕ ನವ ನಿರ್ಮಾಣ ಸೇನೆಯ ತಾಲೂಕು ಅಧ್ಯಕ್ಷ ಲಕ್ಷ್ಮಿಕಾಂತ್, ಡಿಎಸ್ಎಸ್ ಮುಖಂಡ ನಾಗರಾಜ್, ಬಿಡಿಎಸ್ಎಸ್ ತಾಲೂಕು ಅಧ್ಯಕ್ಷ ಚಿದಾನಂದ್, ಓಂಕಾರ್ ಮಸ್ಕಲ್ ಮಟ್ಟಿ, ಕೃಷ್ಣಪ್ಪ, ಶ್ರೀನಿವಾಸ್ ಮುಂತಾದವರು ಹಾಜರಿದ್ದರು.

ಸಂಘಟನೆಗಳ ಆರೋಪ ಸತ್ಯಕ್ಕೆ ದೂರವಾದದ್ದು: ಮಹಾಂತೇಶ

ನಗರದ ತಾಲೂಕು ಕಚೇರಿ ಹತ್ತಿರದ ಎಸ್‌ಬಿಐ ಬ್ಯಾಂಕ್ ಬಳಿ ನಿರ್ಮಾಣ ಮಾಡುತ್ತಿರುವ ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ಕಟ್ಟಡವನ್ನು ಅಕ್ರಮವಾಗಿ ನಿರ್ಮಿಸಲಾಗುತ್ತಿದೆ ಎಂಬ ಕೆಲ ಸಂಘಟನೆಗಳ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ತಾಲೂಕು ಕುರುಬರ ಸಂಘದ ಅಧ್ಯಕ್ಷ ಬಿ ಮಹಾಂತೇಶ್ ಹೇಳಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿದ ಅವರು, ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ಕಟ್ಟಡ ನಿರ್ಮಾಣದ ಬಗ್ಗೆ ಕೆಲವರು ಪತ್ರಿಕೆಗಳಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಮುಖ್ಯಮಂತ್ರಿಗಳು ಭೂಮಿ ಪೂಜೆ ಮಾಡಿದ್ದಾರೆ ಎಂದು ಪ್ರಕಟಿಸಲಾಗಿದೆ. ಆದರೆ ಸಿಎಂ ಸಿದ್ದರಾಮಯ್ಯನವರು ರಾಜ್ಯ ಪ್ರಾದೇಶಿಕ ಕುರುಬರ ಸಂಘದ ನಿವೇಶನದಲ್ಲಿ ಭೂಮಿ ಪೂಜೆ ನೆರವೇರಿಸಿದ್ದರು. ಮಾಹಿತಿ ಕೊರತೆಯಿಂದ ಈ ರೀತಿಯ ಸುದ್ದಿಗಳನ್ನು ಹರಡುತ್ತಿದ್ದಾರೆ. ಕನಕ ನೌಕರರ ಸಂಘದ ಕಟ್ಟಡಕ್ಕೆ ಸಂಬಂಧಿಸಿದಂತೆ 18*60 ಅಡಿ ಅಳತೆಯ 2715/ಎ ಖಾತೆ ಇರುತ್ತದೆ. ಇದಕ್ಕೆ 2021-22 ರಿಂದ ಇಲ್ಲಿಯವರೆಗೆ ಕಂದಾಯ ಪಾವತಿಸಲಾಗಿದೆ ಎಂದಿದ್ದಾರೆ.

PREV

Recommended Stories

ಕರಾವಳಿ, ಮಲೆನಾಡದಲ್ಲಿ ಗಾಳಿಸಹಿತ ಜಡಿ ಮಳೆ : ಶಾಲೆಗಳಿಗೆ ಇಂದು ರಜೆ
ಆರೆಸ್ಸೆಸ್‌ ಭಾರತದ ತಾಲಿಬಾನ್‌: ಹರಿಪ್ರಸಾದ್ ವಿವಾದ