ಹೊಸಕೋಟೆ: 2014ರಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಮತ್ತು ಲೂಟಿ ಆರೋಪಗಳನ್ನು ಹೊರೆಸಿ ಅಧಿಕಾರಕ್ಕೆ ಬಂದ ಬಿಜೆಪಿ, ಇಂದು ಚುನಾವಣಾ ಆಯೋಗವನ್ನು ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದೆ. ಎಸ್‌ಐಆರ್ ಪ್ರಕ್ರಿಯೆ ಹೆಸರಿನಲ್ಲಿ ಮತದಾರರ ಹಕ್ಕುಗಳಿಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹರೀಶ್ ಚಕ್ರವರ್ತಿ ಆರೋಪಿಸಿದರು.
ಹಿಂದೆ ಆಯೋಗದ ನೇಮಕಾತಿಗೆ ಸಂಬಂಧಿಸಿದಂತೆ ಪ್ರಧಾನಿ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಾಗೂ ವಿರೋಧ ಪಕ್ಷದ ನಾಯಕರು ಒಳಗೊಂಡ ಸಮಿತಿಯ ವ್ಯವಸ್ಥೆಯಿತ್ತು. ಅಂತಹ ವ್ಯವಸ್ಥೆಯನ್ನು ಕಡೆಗಣಿಸಿ ಆಯೋಗದ ಸ್ವಾಯತ್ತತೆಗೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಳ್ಳಲಾಗುತ್ತಿದೆ. ದೇಶದಲ್ಲಿ ಸಮಸ್ಯೆಗಳನ್ನು ಪ್ರಶ್ನಿಸುವವರನ್ನು ದೇಶದ್ರೋಹಿಗಳೆಂದು ಬಿಂಬಿಸುವ ಪ್ರವೃತ್ತಿ ಹೆಚ್ಚಾಗಿದೆ. ಪ್ರಜಾಪ್ರಭುತ್ವದಲ್ಲಿ ಪ್ರಶ್ನಿಸುವುದು ಮತ್ತು ಪ್ರತಿಭಟಿಸುವುದು ಪ್ರತಿಯೊಬ್ಬ ನಾಗರಿಕನ ಹಕ್ಕು ಎಂದರು.
ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬರುವ ಮುನ್ನ ಕಪ್ಪುಹಣ ವಾಪಸ್ ತರುವುದು, ಆರ್ಥಿಕತೆ ಸುಧಾರಣೆ ಹಾಗೂ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಯ ಭರವಸೆ ನೀಡಿದ್ದರು. ಆದರೆ, ಉದ್ಯೋಗಕ್ಕಾಗಿ ಯುವಕರು ಪ್ರಶ್ನಿಸಿದರೆ, ಸ್ವಯಂ ಉದ್ಯೋಗದ ಹೆಸರಿನಲ್ಲಿ ಪಕೋಡಾ ಮಾರುವಂತೆ ಹೇಳುತ್ತಿದ್ದಾರೆ. ದೇಶದ ಆರ್ಥಿಕತೆ, ನಿರುದ್ಯೋಗ ಮತ್ತು ಬೆಲೆ ಏರಿಕೆ ಕುರಿತು ಸರ್ಕಾರ ಉತ್ತರಿಸಬೇಕು. ಕೇಂದ್ರದ ಸಾಲದ ಪ್ರಮಾಣ ಹೆಚ್ಚಳ, ಜಿಎಸ್‌ಟಿ ಹೊರೆ ಹಾಗೂ ಪೆಟ್ರೋಲ್-ಡೀಸೆಲ್ ಬೆಲೆಗಳ ಕುರಿತು ಪ್ರಶ್ನಿಸಿದ ಅವರು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾದರೂ ದೇಶದಲ್ಲಿ ಇಂಧನ ಬೆಲೆಗಳು ಹೆಚ್ಚಿರುವುದಕ್ಕೆ ಕಾರಣವೇನು ಎಂದು ಪ್ರಶ್ನಿಸಿದರು.ದೆಹಲಿಯಲ್ಲಿ ಎಸ್‌ಐಆರ್ ಪ್ರಕ್ರಿಯೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯರೊಂದಿಗೆ ಪೊಲೀಸರು ನಡೆದುಕೊಂಡ ರೀತಿಯನ್ನ ಖಂಡಿಸಿದ ಅವರು, ಪ್ರಜಾಸತ್ತಾತ್ಮಕವಾಗಿ ಪ್ರಶ್ನೆ ಮಾಡುವ ಮಹಿಳೆಯರನ್ನು ಬಲವಂತವಾಗಿ ಎಳೆದೊಯ್ಯುವುದು ಸರಿಯಲ್ಲ. ದೇಶದ ನಾಗರಿಕರಿಗೆ ಆಯೋಗದ ಬಗ್ಗೆ ಪ್ರಶ್ನಿಸುವ ಹಕ್ಕಿಲ್ಲವೇ? ದೇಶದ ಮುಂದಿನ ಪೀಳಿಗೆಯ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಪ್ರಜಾಪ್ರಭುತ್ವದ ಮೌಲ್ಯಗಳು, ಸಂವಿಧಾನಬದ್ಧ ಹಕ್ಕುಗಳು ಹಾಗೂ ಸ್ವತಂತ್ರ ಚುನಾವಣಾ ವ್ಯವಸ್ಥೆಯನ್ನು ರಕ್ಷಿಸುವುದು ಎಲ್ಲರ ಜವಾಬ್ದಾರಿ. ಇದನ್ನು ಕೇಂದ್ರ ಬಿಜೆಪಿ ಸರ್ಕಾರ ಅರಿತುಕೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ದೇಶದ ಮತದಾರರು ತಕ್ಕಪಾಠ ಕಲಿಸಲಿದಾರೆ ಎಂದರು.
ಫೋಟೋ: 11 ಹೆಚ್‌ಎಸ್‌ಕೆ 1