ಪೊಲೀಸರಿಂದ ಹಲ್ಲೆ ಆರೋಪ: ಮನನೊಂದು ವಿಷ ಸೇವನೆ

KannadaprabhaNewsNetwork | Published : Jan 5, 2025 1:32 AM

ಸಾರಾಂಶ

ದಾಬಸ್‍ಪೇಟೆ: ಯಾವುದೇ ನೋಟಿಸ್ ನೀಡದೇ ಏಕಾಏಕಿ ಜಮೀನು ತೆರವುಗೊಳಿಸಲು ಬಂದ ಅಧಿಕಾರಿಗಳನ್ನು ಪ್ರಶ್ನಿಸಿದ್ದಕ್ಕೆ ಪೊಲೀಸರು ಮಹಿಳೆಯರು ಸೇರಿದಂತೆ ಕುಟುಂಬದವರ ಮೇಲೆ ದೌರ್ಜನ್ಯ ನಡೆಸಿದ್ದರಿಂದ ವ್ಯಕ್ತಿಯೊಬ್ಬ ಮನನೊಂದು ವಿಷ ಕುಡಿದು ಸಾವು ಬದುಕಿನ ನಡುವೆ ಹೋರಾಡುತ್ತಿರುವ ಘಟನೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ದಾಬಸ್‍ಪೇಟೆ: ಯಾವುದೇ ನೋಟಿಸ್ ನೀಡದೇ ಏಕಾಏಕಿ ಜಮೀನು ತೆರವುಗೊಳಿಸಲು ಬಂದ ಅಧಿಕಾರಿಗಳನ್ನು ಪ್ರಶ್ನಿಸಿದ್ದಕ್ಕೆ ಪೊಲೀಸರು ಮಹಿಳೆಯರು ಸೇರಿದಂತೆ ಕುಟುಂಬದವರ ಮೇಲೆ ದೌರ್ಜನ್ಯ ನಡೆಸಿದ್ದರಿಂದ ವ್ಯಕ್ತಿಯೊಬ್ಬ ಮನನೊಂದು ವಿಷ ಕುಡಿದು ಸಾವು ಬದುಕಿನ ನಡುವೆ ಹೋರಾಡುತ್ತಿರುವ ಘಟನೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನೆಲಮಂಗಲ ತಾಲೂಕಿನ ಹುಚ್ಚೇಗೌಡನಪಾಳ್ಯದ ನಿವಾಸಿ ಸಿದ್ದರಾಜು ವಿಷ ಸೇವಿಸಿದ್ದು, ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ 48ರ ರಸ್ತೆ ಅಗಲೀಕರಣದ ಹಿನ್ನೆಲೆಯಲ್ಲಿ ಕಳೆದ ಐದು ವರ್ಷಗಳ ಹಿಂದೆ ಬೇಗೂರು ಗ್ರಾಮದ ಸರ್ವೆ ನಂ.250/1ನ 9 ಗುಂಟೆ ಜಮೀನನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಶಪಡಿಸಿಕೊಂಡಿತ್ತು. ಈ ಸಂದರ್ಭದಲ್ಲಿ ಜಮೀನು ಮಾಲೀಕರಾದ ಮುದ್ದುಮಾರಯ್ಯಗೆ 1.25 ಕೋಟಿ ಪರಿಹಾರ ನೀಡದೆ, ಮಾರೋಹಳ್ಳಿ ಗ್ರಾಮದ ಹನುಮರಾಜಯ್ಯ ಹೆಸರಿಗೆ ಭೂ ಪರಿಹಾರದ ಹಣ ಮಂಜೂರಾಗಿತ್ತು. ಈ ಹಿನ್ನೆಲೆಯಲ್ಲಿ ಮುದ್ದುಮಾರಯ್ಯ ಮಕ್ಕಳು ಕೋರ್ಟ್‍ನಲ್ಲಿ ನಮಗೆ ಹಣ ಬರಬೇಕೆಂದು ದಾವೆ ಹೂಡಿದ್ದರಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಪರಿಹಾರದ ಹಣವನ್ನು ಸಿವಿಲ್ ನ್ಯಾಯಾಲಯದಲ್ಲಿ ಠೇವಣಿ ಇಡಲಾಗಿತ್ತು.

ಘಟನಾ ವಿವರ:

ವಿಷ ಸೇವಿಸಿದ ವ್ಯಕ್ತಿ ಪತ್ನಿ ಸೌಮ್ಯ ಮಾತನಾಡಿ, ಜ.3ರಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಜಮೀನನಲ್ಲಿ ರಸ್ತೆ ಕಾಮಗಾರಿ ಆರಂಭಿಸಲು ಬಂದಿದ್ದು, ಜಮೀನು ಮಾಲೀಕ ಸಿದ್ದರಾಜು ಹಾಗೂ ಕುಟುಂಬಸ್ಥರು ನಮಗೆ ನೋಟಿಸ್ ನೀಡದೆ ಏಕಾಏಕಿ ತೆರವು ಕಾರ್ಯಕ್ಕೆ ಬಂದಿದ್ದೀರಾ? ಜ.18ರಂದು ಕೇಸ್ ಇದೆ. ಆ ಬಳಿಕ ನೋಟಿಸ್ ನೀಡಿ ತೆರವುಗೊಳಿಸಿ ಎಂದಿದ್ದಕ್ಕೆ ಪ್ರಾಧಿಕಾರದ ಅಧಿಕಾರಿಗಳು ಕರ್ತವ್ಯಕ್ಕೆ ಅಡ್ಡಿ ಮಾಡುತ್ತಿದ್ದಾರೆಂದು ಪೊಲೀಸರನ್ನು ಘಟನಾ ಸ್ಥಳಕ್ಕೆ ಕರೆಸಿದ್ದಾರೆ.

ಘಟನಾ ಸ್ಥಳಕ್ಕೆ ಬಂದ ನೆಲಮಂಗಲ ಗ್ರಾಮಾಂತರ ಇನ್ಸ್‌ಪೆಕ್ಟರ್ ನರೇಂದ್ರ ಬಾಬು ಹಾಗೂ ಸಿಬ್ಬಂದಿ ರಸ್ತೆ ಕೆಲಸಕ್ಕೆ ಅಡ್ಡಿಪಡಿಸಬಾರದು. ಇದು ಸರ್ಕಾರದ ಕೆಲಸ ಎಂದು ಠಾಣೆಗೆ ಕರೆದೊಯ್ದು ಕೇಸ್ ಹಾಕ್ತೀವಿ ಅಂತ ಹೆದರಿಸಿ, ನನ್ನ ಯಜಮಾನರು ಸೇರಿದಂತೆ ಮಗ, ಮೈದುನ, ಅತ್ತೆಯನ್ನು ಎಳೆದಾಡಿ, ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದರು ಎಂದು ಆರೋಪಿಸಿದ್ದಾರೆ.

ಪೊಲೀಸರೇ ನೇರ ಹೊಣೆ:

ಪೊಲೀಸರು ನಮ್ಮೊಂದಿಗೆ ಕೆಟ್ಟದಾಗಿ ವರ್ತಿಸಿದ್ದು, ಇದರಿಂದ ಮನನೊಂದು ನನ್ನ ಪತಿ ವಿಷ ಸೇವಿಸಿದ್ದಾರೆ. ಅವರನ್ನು ಆಸ್ಪತ್ರೆಗೆ ಸೇರಿಸಲು ಬಿಡದೆ, ನೈಸ್ ರಸ್ತೆಯಲ್ಲಿ ಆಂಬ್ಯುಲೆನ್ಸ್‌ ಅಡ್ಡಹಾಕಿ ಬಿಜಿಎಸ್ ಆಸ್ಪತ್ರೆಗೆ ಬೇಡ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕೆಂದು ತಡೆದರು. ಇದೀಗ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನನ್ನ ಪತಿ ಜೀವಕ್ಕೆ ಅಪಾಯವಾದರೆ ಅದಕ್ಕೆ ಪೊಲೀಸರೆ ನೇರ ಹೊಣೆಗಾರರು ಎಂದು ಆರೋಪಿಸಿದರು.

ದಯಾಮರಣಕ್ಕೆ ಅವಕಾಶ ನೀಡಿ: ನಮಗೆ ಅನ್ಯಾಯವಾಗಿದೆ ನ್ಯಾಯಯುತವಾಗಿ ಪರಿಹಾರದ ಹಣ ನೀಡದೇ ಹೋದರೆ ಜೀವನ ನಡೆಸಲು ಕಷ್ಟವಾಗುತ್ತದೆ. ಅನ್ಯಾಯವಾದರೇ ಇಡೀ ಕುಟುಂಬಕ್ಕೆ ದಯಾಮರಣಕ್ಕೆ ಅವಕಾಶ ನೀಡುವಂತೆ ಪ್ರಧಾನಿಯವರಿಗೆ ಪತ್ರ ಬರೆಯುತ್ತೇವೆ ಎಂದು ಹೇಳಿದರು.

ಪೋಟೋ 3 :

ಹುಚ್ಚೇಗೌಡನಪಾಳ್ಯದಲ್ಲಿ ರಸ್ತೆ ಅಗಲೀಕರಣ.

ಪೋಟೋ 4 :

( ಫೋಟೋ ಸಣ್ಣದಾಗಿ ಬಳಸಿ)

ಹುಚ್ಚೇಗೌಡನಪಾಳ್ಯದ ನಿವಾಸಿ ಸಿದ್ದರಾಜು ವಿಷಯ ಸೇವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು.

Share this article