ವಸತಿ ನಿಲಯದಲ್ಲಿ ಬಾಲಕನ ಮೇಲೆ ಹಲ್ಲೆ ಆರೋಪ: ಎಫ್‌ಆರ್‌ಐ ದಾಖಲು

KannadaprabhaNewsNetwork | Published : Jan 29, 2025 1:30 AM

ಸಾರಾಂಶ

ಉಳಿದ ವಿದ್ಯಾರ್ಥಿಗಳ ಜತೆಗೆ ಬಾಲಕ ಅನುಚಿತ ವರ್ತನೆ ಮಾಡುತ್ತಿದ್ದಾನೆ ಎಂಬ ಆರೋಪವಿತ್ತು. ಈ ಹಿನ್ನೆಲೆಯಲ್ಲಿ ಜ. 22ರಂದು ದೈಹಿಕ ಶಿಕ್ಷಕ ಸಾಯಿಪ್ರಸಾದ ಎಂಬುವರು ಬಾಲಕ ಪ್ರವೀಣ ಕರಡಿಗುದ್ದಿ ಎಂಬಾತನನ್ನು ಪ್ರಶ್ನಿಸಿ ಕೈ ಎಳೆದಿರುವ ಕಾರಣ ಕೈಗೆ ಗಾಯವಾಗಿದೆ.

ಧಾರವಾಡ:

8ನೇ ತರಗತಿಯ ವಿದ್ಯಾರ್ಥಿಗೆ ಇಲ್ಲಿಯ ಬುದ್ಧರಕ್ಕಿತ ಶಾಲೆಯ ವಸತಿ ನಿಲಯದಲ್ಲಿ ದೈಹಿಕ ಶಿಕ್ಷಕನಿಂದ ಹಲ್ಲೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಉಳಿದ ವಿದ್ಯಾರ್ಥಿಗಳ ಜತೆಗೆ ಅನುಚಿತ ವರ್ತನೆ ಮಾಡುತ್ತಿದ್ದಾನೆ ಎಂಬ ಆರೋಪವಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಜ. 22ರಂದು ದೈಹಿಕ ಶಿಕ್ಷಕ ಸಾಯಿಪ್ರಸಾದ ಎಂಬುವರು ಬಾಲಕ ಪ್ರವೀಣ ಕರಡಿಗುದ್ದಿ ಎಂಬಾತನನ್ನು ಪ್ರಶ್ನಿಸಿ ಕೈ ಎಳೆದಿರುವ ಕಾರಣ ಕೈಗೆ ಗಾಯವಾಗಿದೆ. ಬಾಲಕ ವೈದ್ಯಕೀಯ ಚಿಕಿತ್ಸೆ ಪಡೆದು ಈ ಬಗ್ಗೆ ಪಾಲಕರಿಗೆ ದೂರಿರುವ ಹಿನ್ನೆಲೆಯಲ್ಲಿ ಮಂಗಳವಾರ ಇದು ಬೆಳಕಿಗೆ ಬಂದಿದೆ.

ಈ ಕುರಿತು ಮಾಧ್ಯಮಗಳಿಗೆ ಮಾತನಾಡಿರುವ ಬಾಲಕ ಪ್ರವೀಣ ತಂದೆ ಅಡಿವೆಪ್ಪ ಕರಡಿಗುದ್ದಿ, ದೈಹಿಕ ಶಿಕ್ಷಣ ಶಿಕ್ಷಕನಿಗೆ ಮೊದಲಿನಿಂದಲೂ ನನ್ನ ಮಗನ ಮೇಲೆ ಸಿಟ್ಟಿತ್ತು. ಜೊತೆಗೆ ಕೂಡಿ ಹಾಕಿ ಜಾತಿ ನಿಂದನೆ ಸಹ ಮಾಡಿದ್ದಾರೆ ಎಂದು ಮಗ ಹೇಳಿದ್ದಾನೆ. ಶಿಕ್ಷಕನಿಂದ ಹಲ್ಲೆಯಾಗಿರುವ ಕುರಿತು ಸಂಸ್ಥೆಯವರಿಗೂ ದೂರಿದ್ದು ಸ್ಪಂದಿಸಲಿಲ್ಲ. ಹೀಗಾಗಿ ಉಪ ನಗರ ಠಾಣೆಯಲ್ಲಿ ಶಿಕ್ಷಕನ ವಿರುದ್ಧ ಪ್ರಕರಣ ದಾಖಲಿಸಿದ್ದಾಗಿ ತಿಳಿಸಿದರು.

ಈ ಘಟನೆ ಕುರಿತು ಸ್ಪಷ್ಟನೆ ನೀಡಿರುವ ಸಂಸ್ಥೆಯ ಮುಖ್ಯಸ್ಥ ಎಫ್‌.ಎಚ್‌. ಜಕ್ಕಪ್ಪನವರ, ಶಿಕ್ಷಕನಿಂದ ಬಾಲಕನ ಮೇಲೆ ಆಗಿರುವ ಹಲ್ಲೆ ಘಟನೆಗೆ ವಿಷಾದ ವ್ಯಕ್ತಪಡಿಸುತ್ತೇವೆ. ಆದರೆ, ಈ ಕುರಿತು ತಾವು ಎಲ್ಲವನ್ನು ಪರಿಶೀಲಿಸಲಾಗಿ, ಬಾಲಕ ಪ್ರವೀಣನಿಂದ ಉಳಿದ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗಿದೆ. ಅಸಹ್ಯ ರೀತಿಯಲ್ಲಿ ಬಾಲಕ ವರ್ತಿಸಿದ್ದಕ್ಕೆ ವಸತಿ ನಿಲಯದ ಬಾಲಕರು ದೈಹಿಕ ಶಿಕ್ಷಣ ಶಿಕ್ಷಕರಿಗೆ ದೂರು ಹೇಳಿದ್ದು, ಬಾಲಕನ್ನು ಕರೆದು ವಿಚಾರಣೆ ಮಾಡುವಾಗ ಆತನ ಕೈಗೆ ಪೆಟ್ಟಾಗಿದ್ದು ಸೂಕ್ತ ಚಿಕಿತ್ಸೆ ಸಹ ಕೊಡಿಸಲಾಗಿದೆ. ಶಾಲೆ ಹಾಗೂ ವಸತಿ ನಿಲಯದಲ್ಲಿ ಇಂತಹ ಘಟನೆಗಳು ನಡೆಯಬಾರದೆಂದು ಸಿಸಿ ಕ್ಯಾಮೆರಾ ಸಹ ಹಾಕಿದ್ದು ಯಾವುದೇ ಮಗುವನ್ನು ಕೂಡಿ ಹಾಕುವ ಹಾಗೂ ಜಾತಿ ನಿಂದನೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

Share this article