ಕನ್ನಡಪ್ರಭ ವಾರ್ತೆ ಶಹಾಪುರ
ಪೌರಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳನ್ನು ಕೇಳಲು ಮುಂದಾದ ಪೌರ ಕಾರ್ಮಿಕರಿಗೆ ಬೇರೆ ಕಡೆ ನಿಯೋಜನೆ ಶಿಕ್ಷೆ ನೀಡುವ ಮೂಲಕ ಅಧಿಕಾರಿ ವರ್ಗ ಪೌರಕಾರ್ಮಿಕರ ಮೇಲೆ ದರ್ಪ ಮೆರೆದಿದ್ದರೆಂದು ಆರೋಪಿಸಿ, ರಾಜ್ಯ ಪೌರಕಾರ್ಮಿಕರ ಸಂಘ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಗರದ ನಗರಸಭೆ ಮುಂದೆ ಬುಧವಾರ ಬೆಳ್ಳಂಬೆಳಗ್ಗೆಯಿಂದ ಧರಣಿ ಆರಂಭಿಸಲಾಯಿತು.ನಮ್ಮ ವೇತನದಲ್ಲಿ ಕಡಿತಗೊಳಿಸಿರುವ ಇಪಿಎಫ್, ಇಎಸ್ ಹಣ ಜಮೆ ಮಾಡುವಂತೆ ಕಳೆದ 7-8 ತಿಂಗಳಿಂದ ಮೌಖಿಕವಾಗಿ ಹೇಳಿದರೂ ಹಾಗೂ ಮನವಿ ಪತ್ರ ಕೊಟ್ಟಿದ್ದರೂ ಯಾವುದೇ ಪ್ರಯೋಜನೆ ಆಗದಿದ್ದಾಗ ಧರಣಿ ನಡೆಸಿದಾಗ ಎಲ್ಲರ ಎದುರೇ ಭರವಸೆ ನೀಡಿ, ಈಗ ನಮ್ಮ ಪೌರಕಾರ್ಮಿಕ ಸಂಘದ ಅಧ್ಯಕ್ಷ ಶರಣು ನರಬೋಳಿ ಮತ್ತು ಕಾರ್ಯದರ್ಶಿ ಹಣಮಂತ ಯಾದವ ಅವರಿಗೆ ಕಾರಣ ಕೇಳುವ ನೋಟಿಸ್ ನೀಡುವ ಮೂಲಕ ನಮ್ಮ ಹೋರಾಟದ ಹಕ್ಕುಗಳನ್ನು ಕಿತ್ತುಕೊಂಡಿದ್ದಾರೆ. ಅಲ್ಲದೆ ಈಗ ಅವರನ್ನು ಬೇರೆ ಕಡೆ ನಿಯೋಜನೆ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಡಿ.19ರಂದು ನಗರ ಸಭೆಯಲ್ಲಿ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸಿದ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರ ಎದುರು ಅಳಲು ತೋಡಿಕೊಂಡು ಎರಡು ಗಂಟೆಯೊಳಗೆ ನಮ್ಮ ಸಂಘದ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ಇಬ್ಬರನ್ನು ಬೇರೆಡೆ ನಿಯೋಜನೆ ಮಾಡಿ ಆದೇಶ ಪ್ರತಿ ನೀಡಿ ಇವತ್ತೇ ಬಿಡುಗಡೆಗೊಳಿಸಬೇಕು. ನಡೆಯಿರಿ ಯಾವುದಾದರೂ ಮಾತಾಡೋದಿಲ್ಲವೆಂದು ದರ್ಪ ತೋರುತ್ತಿದ್ದಾರೆ ಎಂದು ಧರಣಿ ನಿರತರು ಆರೋಪಿಸಿದ್ದಾರೆ.ಈ ಸಮಸ್ಯೆ ದೊಡ್ಡದಾಗುವ ಮುನ್ನ ಸಚಿವರು ಪೌರಕಾರ್ಮಿಕರ ಸಮಸ್ಯೆ ಬಗೆಹರಿಸಬೇಕು ಎಂದು ಲಂಚ ಮುಕ್ತ ಕರ್ನಾಟಕ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಮೊಹಮ್ಮದ್ ಇಸ್ಮಾಯಿಲ್ ತಿಮ್ಮಾಪುರಿ ಮತ್ತು ಕಲ್ಯಾಣ ಕರ್ನಾಟಕ ಯುವ ವೇದಿಕೆಯ ತಾಲೂಕಾಧ್ಯಕ್ಷ ಭೀಮಶಂಕರ ಕಟ್ಟಿಮನಿ ಮನವಿ ಮಾಡಿದರು.
ಈ ಪ್ರತಿಭಟನೆ ಸುದ್ದಿ ತಿಳಿದು ಸ್ಥಳಕ್ಕೆ ಪೌರಾಯುಕ್ತ ರಮೇಶ ಬಡಿಗೇರ ಭೇಟಿ ನೀಡಿದ ವೇಳೆ ಧರಣಿನಿರತರ ಮಧ್ಯ ಮಾತಿನ ಚಕಮಕಿ ನಡೆಯಿತು.ಪೌರಕಾರ್ಮಿಕರಿಗೆ 10 ತಿಂಗಳಿಂದ ಸಂಬಳವಿಲ್ಲ. ಕೇಳಿದರೆ ಅಸಡ್ಡೆಯಾಗಿ ನಗರಸಭೆ ಅಧಿಕಾರಿಗಳು ಉತ್ತರಿಸುತ್ತಾರೆ. ಪೌರಕಾರ್ಮಿಕರ ಹೆಸರಲ್ಲಿ ಲಕ್ಷಾಂತರ ರೂಪಾಯಿ ಕೊಳ್ಳೆ ಹೊಡೆಯಲಾಗಿದೆ. ಮಾಡಿದ ತಪ್ಪು ಹೊರ ಬೀಳುತ್ತದೆ ಎನ್ನುವ ಭಯಕ್ಕೆ ಪೌರಕಾರ್ಮಿಕರ ಸಂಘದ ಅಧ್ಯಕ್ಷ ಹಾಗೂ ಕಾರ್ಯದರ್ಶಿಯವರ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಅವರನ್ನು ಬೇರೆಡೆ ನಿಯೋಜನೆ ಮಾಡುವಂತೆ ಉನ್ನತ ಅಧಿಕಾರಿಗಳನ್ನು ದಾರಿತಪ್ಪಿಸುವ ಕೆಲಸ ಮಾಡಿದ್ದಾರೆ. ಜಿಲ್ಲಾಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಂಗವಿಕಲರ ಸಂಘದ ರಾಜ್ಯಾಧ್ಯಕ್ಷ ಸುಭಾಸ್ ಹೋತಪೇಟ ಮನವಿ ಮಾಡಿದ್ದಾರೆ.
ಪೌರಕಾರ್ಮಿಕರು ಹಾಗೂ ದಲಿತ ಸಂಘರ್ಷ ಸಮಿತಿಯ ತಾಲೂಕಾಧ್ಯಕ್ಷ ಬಸ್ಸು ನಾಟೇಕಾರ, ಶ್ರೀರಾಮ ಸೇನೆಯ ತಾಲೂಕಾಧ್ಯಕ್ಷ ಶಿವು ಶಿರವಾಳ, ಭೀಮನಗೌಡ ಕಟ್ಟಿಮನಿ, ಶಿವಕುಮಾರ್ ದೊಡ್ಮನಿ, ಸರ್ವಜ್ಞ ಸಂಘಟನೆಯ ಮುಖಂಡ ಸಂಗಮೇಶ್ ಕುಂಬಾರ್ ಸೇರಿದಂತೆ ಇತರರಿದ್ದರು.ಬಾಕ್ಸ್ನಗರಸಭೆಯಲ್ಲಿ ಜಾತಿ ತಾರತಮ್ಯ ಆರೋಪ
ನಗರಸಭೆಯಲ್ಲಿ ಸುಮಾರು ಏಳೆಂಟು ವರ್ಷಗಳಿಂದಲೂ ಪೌರಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿದ್ದೇವೆ. ಆದರೆ, ನಮ್ಮೊಂದಿಗೆ ಕೆಲಸ ಮಾಡುವ ಕೆಲವರು ಒಂದು ದಿನಾನೂ ಕೆಲಸಕ್ಕೆ ಹಾಜರಾಗದೆ, ಕೇವಲ ಹಾಜರಾತಿಗೆ ಹಾಜರಾಗಿ ರಾಜರಂತೆ ತಿರುಗಿದರೂ ಅವರನ್ನು ಯಾರು ಪ್ರಶ್ನೆ ಮಾಡುತ್ತಿಲ್ಲ. ನಾವು ದಲಿತರು ಅನ್ನುವ ಕಾರಣಕ್ಕೆ ಎಲ್ಲಾ ಕೆಲಸ ನಮಗೆ ಹೇಳುತ್ತಾರೆ. ನಗರಸಭೆಯಲ್ಲಿ ಅಧಿಕಾರಿಗಳು ಜಾತಿ ತಾರತಮ್ಯ ಮಾಡುತ್ತಾರೆ ಎಂದು ಪೌರಕಾರ್ಮಿಕರ ಗಂಭೀರ ಆರೋಪವಾಗಿದೆ.