ಅಶುದ್ಧ ನೀರು ವಿತರಣೆ ಆರೋಪ: ಸತ್ಯಶೋಧನಾ ಸಮಿತಿ ಪರಿಶೀಲನೆ

KannadaprabhaNewsNetwork |  
Published : Jan 10, 2025, 12:48 AM IST
ಸತ್ಯಶೋಧನಾ ಸಮಿತಿ ಸದಸ್ಯರಿಂದ ಪರಿಶೀಲನೆ | Kannada Prabha

ಸಾರಾಂಶ

ಸಾರ್ವಜನಿಕ ಹಿತದೃಷ್ಟಿಯಿಂದ ಇದು ಗಂಭೀರ ವಿಚಾರವಾಗಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ನಗರಕ್ಕೆ ತುಂಬೆ ಡ್ಯಾಂನಿಂದ ಶುದ್ಧೀಕರಿಸದ ನೀರು ಪೂರೈಕೆ ಮಾಡುತ್ತಿರುವ ಕುರಿತು ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಉಂಟಾದ ಚರ್ಚೆಯ ಹಿನ್ನೆಲೆಯಲ್ಲಿ ಸತ್ಯಾಸತ್ಯತೆ ಪರಿಶೀಲಿಸಲು ವಿಪಕ್ಷ ನಾಯಕ ಅನಿಲ್ ಕುಮಾರ್ ನೇತೃತ್ವದಲ್ಲಿ ರಚಿಸಲಾದ ಸತ್ಯ ಶೋಧನಾ ಸಮಿತಿಯು ವಿವಿಧೆಡೆ ಒಳಚರಂಡಿ ಸ್ಥಾವರಗಳಿಗೆ ಭೇಟಿ ನೀಡಿ ಪರಿಶೀಲಿಸಿತು.

ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ನೇತೃತ್ವದಲ್ಲಿ ಕಾರ್ಪೊರೇಟರ್‌ಗಳಾದ ಅನಿಲ್ ಕುಮಾರ್, ಶಶಿಧರ್ ಹೆಗ್ಡೆ, ಭಾಸ್ಕರ್ ಕೆ., ಪ್ರವೀಣ್‌ಚಂದ್ರ ಆಳ್ವ, ಕೇಶವ ಮರೋಳಿ, ಶಂಶುದ್ದೀನ್ ಕುದ್ರೋಳಿ, ಜೀನತ್ ಶಂಶುದ್ದೀನ್ ಸತೀಶ್ ಪೆಂಗಲ್, ಚೇತನ್ ಕುಮಾರ್, ಕಿಶೋರ್ ಕುಮಾರ್ ಶೆಟ್ಟಿ, ಹೇಮಂತ್ ಗರೋಡಿ ಅವರು ನಗರದ ಜೆಪ್ಪಿನಮೊಗರು ಕಡೇಕಾರ್ ಒಳಚರಂಡಿ ಸ್ಥಾವರಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಅಲ್ಲಿ ಒಳಚರಂಡಿ ನೀರು ಶುದ್ಧೀಕರಣಗೊಳ್ಳದೆ ನೇರವಾಗಿ ರಾಜಕಾಲುವೆ ಮುಖಾಂತರ ಹರಿಯುವುದನ್ನು ಸಮಿತಿ ಗುರುತಿಸಿತು.

ಸುರತ್ಕಲ್‌ ಮದ್ಯದಲ್ಲಿರುವ ಒಳಚರಂಡಿ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿದ್ದು, ಅಲ್ಲಿ ಕಳೆದ ಒಂದು ತಿಂಗಳಿಂದ ಪಂಪ್‌ಸೆಟ್‌ಗಳ ದುಸ್ಥಿತಿಯಿಂದ ಕಂಡೇವು ನದಿಗೆ ತ್ಯಾಜ್ಯ ಹರಿದು ಹೋಗುವ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಸಮಿತಿ ಸದಸ್ಯರು ಅಲ್ಲಿಂದ ಮುಚ್ಚೂರು ವೆಟ್‌ವೆಲ್‌ಗೆ ಭೇಟಿ ನೀಡಿದ್ದು, ಅಲ್ಲೂ ಒಂದು ತಿಂಗಳಿನಿಂದ ಪಂಪ್ ಕೆಟ್ಟು ಒಳಚರಂಡಿ ತ್ಯಾಜ್ಯ ನೇರವಾಗಿ ನಂದಿನಿ ನದಿ ಸೇರುತ್ತಿರುವುದನ್ನು ವೀಕ್ಷಿಸಿದ್ದಾರೆ.

ಈ ಬಗ್ಗೆ ಮುಂದಿನ ಕ್ರಮವಾಗಿ ತ್ಯಾಜ್ಯ ನೀರು ಸಂಸ್ಕರಣಾ ಘಟಕದಲ್ಲಿ ಸಾರ್ವಜನಿಕರಿಗೆ ವಿತರಿಸುವ ನೀರಿನ ಸಾಂಪಲ್‌ಗಳನ್ನು ಸಂಗ್ರಹಿಸಿ ಲ್ಯಾಬ್‌ಗಳಿಗೆ ಪರೀಕ್ಷೆಗೆ ನೀಡಲಾಯಿತು.ಸಾರ್ವಜನಿಕ ಹಿತದೃಷ್ಟಿಯಿಂದ ಇದು ಗಂಭೀರ ವಿಚಾರವಾಗಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ತಿಳಿಸಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ