ಕನ್ನಡಪ್ರಭ ವಾರ್ತೆ ಕೋಲಾರಶ್ರೀನಿವಾಸಪುರ ತಾಲೂಕಿನ ಜಿನಗಲಕುಂಟೆ ಅರಣ್ಯ ಜಮೀನು ವಿಚಾರವು ಮತ್ತೆ ಮುನ್ನೆಲೆಗೆ ಬಂದಿದೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಅರಣ್ಯ ಇಲಾಖೆಯ ಮಧ್ಯೆ ಈ ಜಮೀನಿಗಾಗಿ ನಡೆಯುತ್ತಿರುವ ಕಾನೂನು ಹೋರಾಟವು ತಾರ್ಕೀಕ ಹಂತಕ್ಕೆ ತಲುಪುವ ಲಕ್ಷಣಗಳು ಗೋಚರಿಸುತ್ತಿವೆ. ತಾಲೂಕಿನ ಜಿನಗಲಕುಂಟೆ ಸರ್ವೆ ನಂಬರ್ ೧ ಮತ್ತು ೨ ರಲ್ಲಿನ ೬೧ ಎಕರೆ ೩೯ ಗುಂಟೆ ಅರಣ್ಯ ಪ್ರದೇಶವು ಒತ್ತುವರಿಯಾಗಿದೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಈ ಜಮೀನನ್ನು ಅತಿಕ್ರಮಿಸಿ ಕೊಂಡಿದ್ದಾರೆ ಎಂದು ದಶಕದಿಂದ ಅರಣ್ಯ ಇಲಾಖೆ ಅರೋಪಿಸುತ್ತಿದೆ. ಆದರೆ ಅಧಿಕೃತವಾಗಿ ಯಾವೂದೇ ದಾಖಲೆಗಳು ಬಹಿರಂಗವಾಗಿರಲಿಲ್ಲ. ಆದರೆ ಈಗಾ ಅರಣ್ಯ ಇಲಾಖೆಯ ರಾಜ್ಯ ಕಚೇರಿಯಿಂದ ಮಾಜಿ ಸ್ಪೀಕರ್ ರಮೇಶ್‌ರಿಗೆ ಜಾರಿ ಮಾಡಿರುವ ನೋಟಿಸ್ ಮಾಧ್ಯಮಗಳಿಗೆ ಲಭ್ಯವಾಗಿದೆ.ಹಕ್ಕುದಾರಿಕೆ ಇನ್ನೂ ಅಸ್ಪಷ್ಟ
ಇಷ್ಟು ವರ್ಷಗಳಿಂದ ಅರಣ್ಯ ಇಲಾಖೆ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ನಡುವೆ ಕಾನೂನುಗಳ ಸಮರವು ನಡೆಯುತ್ತಿತ್ತು, ಈ ಜಮೀನಿನ ಮಾಲೀಕತ್ವಕ್ಕಾಗಿ ಉಭಯರು ಹಲವು ದಾಖಲೆಗಳನ್ನು ಮಂಡಿಸಿ ಪ್ರತಿಪಾದಿಸಿದ್ದಾರೆ. ಆದರೂ ಈ ಜಮೀನಿನ ಹಕ್ಕುದಾರಿಕೆಯು ಇಲ್ಲಿಯವರೆಗೆ ಸ್ವಷ್ಟವಾಗಿರಲಿಲ್ಲ. ಆದರೆ ಇತ್ತೀಚೆಗೆ ತಾಲೂಕಿನಾದ್ಯಂತ ಅರಣ್ಯ ಭೂಮಿ ಒತ್ತುವರಿ ತೆರವಿಗಾಗಿ ಇಲಾಖೆಯು ನಡೆಸಿದ ತೀವ್ರ ಕಾರ್ಯಚರಣೆಯಲ್ಲಿ ರಾಜಕೀಯ ಪ್ರಭಾವಿಗಳ ಒತ್ತಡ ಮತ್ತು ಬಲಾಡ್ಯರ ಆಮಿಷವನ್ನು ಬದಿಗೆ ಸರಿಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಸಾವಿರಾರು ಎಕರೆ ಅರಣ್ಯ ಭೂಮಿಯನ್ನು ವಶಕ್ಕೆ ಪಡೆದಿದ್ದರು. ಡಿಸಿಎಫ್ ಏಡಕೊಂಡಲು ಅರಣ್ಯ ಒತ್ತುವರಿ ತೆರವಿಗೆ ಕಠಿಣ ಕ್ರಮ ಜರುಗಿಸಿದ್ದಾರೆ.ಕ್ರಮಕ್ಕೆ ಅಧಿಕಾರಿಗಳ ಹಿಂದೇಟುಇದೇ ಸಂದರ್ಭಧಲ್ಲಿ ಜಿನಗಲಕುಂಟೆ ಅರಣ್ಯ ಪ್ರದೇಶದ ಒತ್ತುವರಿ ತೆರವು ಮಾಡಿಸಲು ಅಧಿಕಾರಿಗಳ ಮೇಲೆ ಒತ್ತಡವು ಬಂದಿತು. ಆದರೆ ಅರಣ್ಯ ಅಧಿಕಾರಿಗಳು ತೆರವು ಒತ್ತಾಯವನ್ನು ಕೇಳಿ ಕೇಳದಂತೆ ಜಾಣ ಕಿವುಡುತನವನ್ನು ತೋರಿದರು, ಮುಂದಿನ ದಿನಗಳಲ್ಲಿ ಹಂತ, ಹಂತವಾಗಿ ಕ್ರಮ ಕೈಗೊಳುವುದಾಗಿ ಭರವಸೆ ನೀಡುತ್ತಿದ್ದರೇ ಹೊರತು ಕ್ರಮ ಕೈಗೊಳ್ಳುತ್ತಿರಲಿಲ್ಲ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ವಿರೋಧಿಗಳಿಗೆ ಜಿಲ್ಲಾ ಅರಣ್ಯ ಇಲಾಖೆಯ ಅಧಿಕಾರಿ ಏಡುಕೊಂಡಲು ನಡುವಳಿಕೆಗಳ ಮೇಲೆ ಅನುಮಾನ ಉಂಟಾಗಿ ಅಧಿಕಾರಿಗಳ ಪಕ್ಷಪಾತ ನಡೆಯ ವಿರುದ್ದ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ದೂರು ಸಲ್ಲಿಸಿದ್ದರು. ಬಡ ರೈತರ ಸಣ್ಣಪುಟ್ಟ ೧, ೨ ಎಕರೆ ಜಮೀನುಗಳನ್ನು ಕಸಿದು ಕೊಂಡಿರುವ ಅರಣ್ಯ ಇಲಾಖೆ ಅಧಿಕಾರಿಗಳು ರಾಜಕೀಯ ಪ್ರಭಾವಿತ ಒತ್ತುವರಿಗಳ ಬಗ್ಗೆ ಮೌನವಾಗಿದ್ದಾರೆಂದು ತೀವ್ರ ಅಕೋಶ ವ್ಯಕ್ತಪಡಿಸಿದ್ದಾರೆ.ರಮೇಶ್‌ಕುಮಾರ್ ಅವರಿಂದ ಒತ್ತುವರಿ?
ರೈತರ ದೂರುಗಳ ಬಗ್ಗೆ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಸೇರಿದಂತೆ ಅರಣ್ಯ ಇಲಾಖೆಯ ಮಂತ್ರಾಲಯವು ಸೂಕ್ತಕ್ರಮ ಜರುಗಿಸಲು ರಾಜ್ಯ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಾಕೀತು ಮಾಡಿದೆ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರಿಂದ ಅರಣ್ಯ ಇಲಾಖೆಯ ಭೂಮಿಗಳ ಒತ್ತುವರಿ, ಅತಿಕ್ರಮಿಸಿರುವುದರ ವಿರುದ್ದವಾಗಿ ಸರ್ವೇ ನಂಬರ್‌ಗಳನ್ನು ಜಂಟಿಯಾಗಿ ಸರ್ವೇ ಮಾಡಿಸಬೇಕು. ಈ ಜಮೀನುಗಳಲ್ಲಿ ಒತ್ತುವರಿ ಕಂಡು ಬಂದಲ್ಲಿ ತೆರವುಗೊಳಿಸಲು ಅಗತ್ಯ ಕ್ರಮಗಳನ್ನು ನಿಷ್ಠಾರವಾಗಿ ಜರುಗಿಸಬೇಕೆಂದು ಇದನ್ನು ವಿಶೇಷ ಪ್ರಕರಣವಾಗಿ ವೈಯುಕ್ತಿಕವಾಗಿ ಗಮನ ಹರಿಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಬೇಕೆಂದು ರಾಜ್ಯ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ಸೆಂಗುಟ್ಟಿವೇಲ್ ಅ.೨೩ ರಂದು ಜಿಲ್ಲಾ ಉಪಸಂರಕ್ಷಣಾಧಿಕಾರಿಗಳಿಗೆ ಆದೇಶ ನೀಡಿದ್ದಾರೆ ಎನ್ನಲಾಗಿದೆ. ತಾಲೂಕಿನ ಒತ್ತುವರಿಯ ನೆಪದಲ್ಲಿ ನೂರಾರು ರೈತರ ಜಮೀನುಗಳಲ್ಲಿನ ಬೆಳೆಗಳು, ಮಾವಿನ ತೋಪುಗಳನ್ನು ಜೆ.ಸಿ.ಬಿ.ಬಳಿಸಿ ರಾತ್ರೋ ರಾತ್ರಿ ದಾಳಿ ಮಾಡಿ ತೆರವು ಮಾಡಿಸಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರಭಾವಿ ರಾಜಕಾರಣಿಗಳ ಕುರಿತು ತಾರತಮ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಸಾರ್ವಜನಿಕರು ಟೀಕಿಸಿದ್ದಾರೆ.