ನಿವೇಶನ ನೀಡದೆ ವಂಚನೆ ಆರೋಪ: ವರ್ಧಿನಿ ಹೌಸಿಂಗ್‌ ಕಂಪನಿ ಕಚೇರಿ ಬಳಿ ಧರಣಿ

KannadaprabhaNewsNetwork | Published : Jul 22, 2024 1:20 AM

ಸಾರಾಂಶ

ನಿವೇಶನ ನೀಡುವುದಾಗಿ ಹಣ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿ ಶಿರಡಿ ಸಾಯಿ ವರ್ಧಿನಿ ಹೌಸಿಂಗ್‌ ಪ್ರೈವೇಟ್‌ ಲಿಮಿಟೆಡ್‌ ಕಚೇರಿಗೆ ನೂರಾರು ಗ್ರಾಹಕರು ಭಾನುವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಿವೇಶನ ನೀಡುವುದಾಗಿ ಹಣ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿ ಶಿರಡಿ ಸಾಯಿ ವರ್ಧಿನಿ ಹೌಸಿಂಗ್‌ ಪ್ರೈವೇಟ್‌ ಲಿಮಿಟೆಡ್‌ ಕಚೇರಿಗೆ ನೂರಾರು ಗ್ರಾಹಕರು ಭಾನುವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ನಾಗರಬಾವಿ ಸಮೀಪದ ಜ್ಞಾನಜ್ಯೋತಿನಗರದ ಶಿರಡಿ ಸಾಯಿ ವರ್ಧಿನಿ ಹೌಸಿಂಗ್‌ ಪ್ರೈವೇಟ್‌ ಲಿಮಿಟೆಡ್‌ ಕಚೇರಿಗೆ ಮುತ್ತಿಗೆ ಹಾಕಿದ ಗ್ರಾಹಕರು, ಕಂಪನಿಯ ಮುಖ್ಯಸ್ಥ ಸತೀಶ್‌ಗೌಡ ಸಿದ್ದಾರೂಢ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಾವರೆಕರೆ ಬಳಿ ನಿವೇಶನ ನೀಡುವುದಾಗಿ ಹಲವು ವರ್ಷಗಳ ಹಿಂದೆ ಸುಮಾರು 400ಕ್ಕೂ ಅಧಿಕ ಗ್ರಾಹಕರಿಂದ ಹಣ ಪಡೆದು ಈವರೆಗೂ ನಿವೇಶನ ನೀಡಿಲ್ಲ. ನಿವೇಶನದ ಬಗ್ಗೆ ಕೇಳಿದಾಗಲೆಲ್ಲಾ ಒಂದೊಂದು ಕಾರಣ ನೀಡುತ್ತಾರೆ. ಪ್ರತಿ ಗ್ರಾಹಕರಿಂದ ಲಕ್ಷಾಂತ ರು. ಹಣ ಪಡೆದಿದ್ದಾರೆ. ಇದೀಗ ನಿವೇಶನ ಜಾಗದ ವಿಚಾರ ನ್ಯಾಯಾಲಯದಲ್ಲಿದೆ. ನ್ಯಾಯಾಲಯದಲ್ಲಿ ಬಗೆಹರಿದ ಬಳಿಕ ನಿವೇಶನ ಹಂಚಿಕೆ ಮಾಡುವುದಾಗಿ ಹೇಳುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

7 ವರ್ಷದ ಹಿಂದೆ 40/60 ಅಳತೆಯ ನಿವೇಶನಕ್ಕಾಗಿ 20 ಲಕ್ಷ ರು. ಪಾವತಿಸಿದ್ದೇನೆ. ಸಬ್‌ ರಿಜಿಸ್ಟರ್‌ ಕಚೇರಿಯಲ್ಲಿ ನೋಂದಣಿ ಸಹ ಮಾಡಿಕೊಟ್ಟಿದ್ದಾರೆ. ಆದರೆ, ಈವರೆಗೂ ನಿವೇಶನ ಕೈ ಸೇರಿಲ್ಲ. ಕಷ್ಟಪಟ್ಟು ದುಡಿದ ಹಣವನ್ನು ಶಿರಡಿ ಸಾಯಿ ವರ್ಧಿನಿ ಹೌಸಿಂಗ್‌ ಪ್ರೈವೇಟ್‌ ಲಿಮಿಟೆಡ್‌ಗೆ ನೀಡಿದ್ದೇನೆ. ಇದೀಗ ನಿವೇಶನ ನೀಡದೆ ವಂಚಿಸಲಾಗಿದೆ ಎಂದು ನೊಂದ ಗ್ರಾಹಕ ಬೈರಪ್ಪ ಆರೋಪಿಸಿದರು.

ಇದರಲ್ಲಿ ಸುಮಾರು 400ಕ್ಕೂ ಅಧಿಕ ಗ್ರಾಹಕರ ಭವಿಷ್ಯವಿದೆ. ಸಾಲ ಮಾಡಿ, ಜಮೀನು ಮಾರಾಟ ಮಾಡಿ, ಜೀವನ ಪೂರ್ತಿ ದುಡಿದ ಹಣವನ್ನು ನೀಡಿದ್ದಾರೆ. ನಮಗೆ ನಿವೇಶನ ಕೊಡಬೇಕು. ಇಲ್ಲವೇ ನಮ್ಮ ಹಣ ವಾಪಸ್‌ ನೀಡಬೇಕು. ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ ನಮಗೆ ನ್ಯಾಯ ಕೊಡಿಸಬೇಕು ಎಂದು ಪ್ರತಿಭಟನಾನಿರತ ಗ್ರಾಹಕರು ಆಗ್ರಹಿಸಿದರು.

Share this article