ಕನ್ನಡಪ್ರಭ ವಾರ್ತೆ ಕುಶಾಲನಗರ
ಮಡಿಕೇರಿ ಕ್ಷೇತ್ರಕ್ಕೆ ಸರ್ಕಾರದಿಂದ ವಿಶೇಷ ಪ್ಯಾಕೇಜ್ ಕಲ್ಪಿಸಲು ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗುವುದು ಎಂದು ಶಾಸಕ ಡಾ. ಮಂತರ್ ಗೌಡ ತಿಳಿಸಿದ್ದಾರೆ.ಅವರು ಕುಶಾಲನಗರದಲ್ಲಿ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಾರಿ ಮಳೆ ಹಾನಿ ಹಿನ್ನೆಲೆಯಲ್ಲಿ ಸುಮಾರು 200ಕ್ಕೂ ಅಧಿಕ ಮನೆಗಳು ಹಾನಿಗೀಡಾಗಿವೆ. ಮೂಲಭೂತ ಸೌಕರ್ಯ ಕಲ್ಪಿಸಲು ಸರ್ಕಾರದಿಂದ ಹೆಚ್ಚಿನ ಅನುದಾನ ಕೋರಲಾಗುವುದು ಎಂದು ಹೇಳಿದರು.ಕೆಲವು ವರ್ಷಗಳಿಂದ ಕಾವೇರಿ ನದಿ ಪ್ರವಾಹದಿಂದ ನದಿ ತಟದ ಕೆಲವು ಬಡಾವಣೆಗಳು ಪ್ರವಾಹಕ್ಕೆ ತುತ್ತಾಗುತ್ತಿವೆ. ಈಗಾಗಲೇ ಕೆಲವೊಂದು ಕಡೆ ಬಡಾವಣೆಯ ಮತ್ತು ನದಿ ನಡುವೆ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆದಿದೆ. ಶಾಶ್ವತವಾಗಿ ಕುಶಾಲನಗರವನ್ನು ಪ್ರವಾಹ ಮುಕ್ತವನ್ನಾಗಿಸಲು ಯೋಜನೆಯನ್ನು ರೂಪಿಸುವ ನಿಟ್ಟಿನಲ್ಲಿ ಅಧಿವೇಶನದಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು.
ನದಿ ಬದಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಬಡಾವಣೆಗಳ ಬಗ್ಗೆ ನಿಯಮಾನುಸಾರ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಯಾವುದೇ ಸಂದರ್ಭ ನದಿ ಬದಿಯ ಪ್ರದೇಶಗಳನ್ನು ಹೊತ್ತುವರಿ ಮಾಡದಂತೆ ಎಚ್ಚರ ವಹಿಸಲಾಗುವುದು ಎಂದು ಶಾಸಕರು ಹೇಳಿದರು.ಕುಶಾಲನಗರ ಪಟ್ಟಣದ ಅಭಿವೃದ್ಧಿಗಾಗಿ ಸರ್ಕಾರದಿಂದ 2 ಕೋಟಿ ರು. ಅನುದಾನ ಕಲ್ಪಿಸುವುದಾಗಿ ಭರವಸೆ ವ್ಯಕ್ತಪಡಿಸಿದರು. ಕುಶಾಲನಗರ ಪಟ್ಟಣದ ಒಳ ಚರಂಡಿ ಯೋಜನೆ ಸೆಪ್ಟೆಂಬರ್ 15ರ ಒಳಗೆ ಕಾರ್ಯಾರಂಭ ಮಾಡಲಿದೆ. ಈ ನಿಟ್ಟಿನಲ್ಲಿ ಒಳಚರಂಡಿ ಯೋಜನೆ ಅಧಿಕಾರಿಗಳಿಗೆ ಗಡುವು ನೀಡಲಾಗಿದ್ದು, ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.ನದಿ ತಟದ ಅಂಚಿನಲ್ಲಿ ಅಳವಡಿಸಿರುವ ಒಳಚರಂಡಿ ಯೋಜನೆಯ ಪೈಪ್ ಗಳು ಮ್ಯಾನ್ ಹೋಲ್ ಗಳನ್ನು ತೆರವುಗೊಳಿಸಿ ಸಮರ್ಪಕವಾಗಿ ಕಾಮಗಾರಿ ನಡೆಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.