ಕನ್ನಡಪ್ರಭ ವಾರ್ತೆ ಕಲಬುರಗಿ
ವೈದ್ಯರ ನಿರ್ಲಕ್ಷ್ಯ ಮತ್ತು ಚಿಕಿತ್ಸೆ ನೀಡುವಲ್ಲಿ ಹೆಚ್ಚು ಕಮ್ಮಿ ಆಗಿದ್ದರಿಂದಲೇ ತಮ್ಮ ಕುಟುಂಬದ ಸದಸ್ಯ ಸಾವನ್ನಪ್ಪಿದ್ದಾನೆಂದು ಆರೋಪಿಸಿ ಧೀಡಿರನೇ ಇಲ್ಲಿನ ಯುನೈಟೆಡ್ ಆಸ್ಪತ್ರೆ ವಿರುದ್ಧ ಕುಟುಂಬಸ್ಥರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಸೋಮವಾರ ನಡೆದಿದೆ.ಜೇವರ್ಗಿ ತಾಲೂಕು ಜೈನಾಪುರ ಗ್ರಾಮದ ನಾಗಣ್ಣ (54) ಕುರ್ಚಿಯಿಂದ ಬಿದ್ದು ಹೊಟ್ಟೆಗೆ ತೀವ್ರಗಾಯ ಮಾಡಿಕೊಂಡದ್ದ. ಈತನನ್ನು ಚಿಕಿತ್ಸೆಗೆ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಸೋಮವಾರ ಮೃತಪಟ್ಟ ವ್ಯಕ್ತಿ ಈತನಾಗಿದ್ದ.
ನಾಗಣ್ಣ ಮನೆಯಲ್ಲಿ ಆಯತಪ್ಪಿ ಬಿದ್ದಿದ್ದ ವೇಳೆ ಹೊಟ್ಟೆಯ ಭಾಗಕ್ಕೆ ಮಂಚ ಬಡಿದಿತ್ತು. ಜುಲೈ 3 ರಂದು ಚಿಕಿತ್ಸೆಗೆಂದು ತನ್ನ ಮಗನೊಂದಿಗೆ ಕಲಬುರಗಿಯಲ್ಲಿರುವ ಯುನೈಟೆಡ್ ಆಸ್ಪತ್ರೆಗೆ ದಾಖಲಾಗಿದ್ದರು.ತಪಾಸಣೆ ನಡೆಸಿದ್ದ ಆಸ್ಪತ್ರೆಯ ವೈದ್ಯರು, ಹೊಟ್ಟೆಗೆ ಪೆಟ್ಟು ಬಡಿದಿರುವುದರಿಂದ ಹೊಟ್ಟೆಯೊಳಗೆ ರಕ್ತ ಹೆಪ್ಪುಗಟ್ಟಿದೆ. ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ಹೇಳಿದ್ದರು.
ಶಸ್ತ್ರಚಿಕಿತ್ಸೆ ಬಳಿಕ ನಾಗಣ್ಣ ಪ್ರಜ್ಞಾಬೀನ ಸ್ಥಿತಿಗೆ ಜಾರಿದ್ದರು. 10 -15 ದಿನಗಳು ಕೋಮಾದಲ್ಲಿದ್ದ ನಾಗಣ್ಣ ಇಂದು ಸಾವನ್ನಪ್ಪಿದ್ದಾರೆಂದು ಆಸ್ಪತ್ರೆಯವರು ಹೇಳಿದಾಗ ಕುಟುಂಬಸ್ಥರು ಆಕ್ರೋಶಗೊಡು ಪ್ರತಿಭಟನೆ ನಡೆಸಿದರು.ಹೋಟೆ ನೋವು ಎಂದು ಆಸ್ಪತ್ರೆಗೆ ದಾಖಲಾಗಿದ ವ್ಯಕ್ತಿಯ ಚಿಕಿತ್ಸೆಯಲ್ಲಿ ಅಲಕ್ಷತನ ತೋರಲಾಗಿದೆ, ಇದರಿಂದಲೇ ನಾಗಣ್ಣ ಕೋಮಾಕ್ಕೆ ಜಾರುವಂತೆ ಮಾಡಲಾಗಿದೆ. ಚಿಕಿತ್ಸೆನೀಡುವಲ್ಲಿ ನಿರ್ಲಕ್ಷ್ಯವಹಿಸಿದ ವೈದ್ಯರು ಮತ್ತು ಯುನೈಟೆಡ್ ಆಸ್ಪತ್ರೆಯ ವಿರುದ್ಧ ಸೂಕ್ತ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ಈ ಘಟನೆ ಸಾಮಾನ್ಯವಲ್ಲ, ಜಿಲ್ಲಾ ಆರೋಗ್ಯ ಇಲಾಖೆ ಖಾಸಗಿ ಆಸ್ಪತ್ರೆಗಳ ರೋಗಿಗಳ ಜೀವಕ್ಕೆ ರಕ್ಷಣೆ ಒದಗಿಸುವ ನೀಟ್ಟಿನಲ್ಲಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಪ್ರತಿಭಟನೆ ಮಾಡಿದರು.ಸ್ಟೇಷನ್ ಬಜಾರ್ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರತಿಭಟನಾಕಾರರನ್ನು ಚದುರಿಸಿದರು. ಆಸ್ಪತ್ರೆ ಎದುರು ನೂರಾರು ಜನ ಗುಂಪುಗೂಡಿದ್ದಲ್ಲದೆ ಖಾಸಗಿ ಆಸ್ಪತ್ರೆಗಳ ಹಾವಳಿಯ ವಿರುದ್ಧ ಅಸಮಧಾನ ಹೋರಹಾಕಿದರು.