ಆರಗ ಕಾಲದ ಕಳಪೆ ಕಾಮಗಾರಿಗಳ ತನಿಖೆಯಾಗಲಿ: ಆಯನೂರು ಮಂಜುನಾಥ್ ಆಗ್ರಹ

KannadaprabhaNewsNetwork | Published : Jul 16, 2024 12:33 AM

ಸಾರಾಂಶ

ತೀರ್ಥಹಳ್ಳಿ ಭಾಗದಲ್ಲಿ 100 ಕೋಟಿ ರು.ವೆಚ್ಚದಲ್ಲಿ ನಡೆದಿರುವ ಕಾಮಗಾರಿಗಳು ಕಳಪೆಯಾಗಿದ್ದು, ಉದ್ಘಾಟನೆಗೂ ಮುನ್ನವೇ ಸೋರುತ್ತಿವೆ. ಇಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಆರಗ ಜ್ಞಾನೇಂದ್ರ ಸಚಿವರಾಗಿದ್ದ ಕಾಲದಲ್ಲಿ ತೀರ್ಥಹಳ್ಳಿ ಭಾಗದಲ್ಲಿ 100 ಕೋಟಿ ರು.ವೆಚ್ಚದಲ್ಲಿ ನಡೆದಿರುವ ಕಾಮಗಾರಿಗಳು ಕಳಪೆಯಾಗಿದ್ದು, ಉದ್ಘಾಟನೆಗೂ ಮುನ್ನವೇ ಸೋರುತ್ತಿವೆ. ಇಲ್ಲಿ ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ಸಮಗ್ರ ತನಿಖೆ ಮಾಡಬೇಕು ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಆಗ್ರಹಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ತೀರ್ಥಹಳ್ಳಿ ಕ್ಷೇತ್ರದಲ್ಲಿ ಪೊಲೀಸ್ ಕ್ವಾಟರ್ಸ್ ಪೊಲೀಸ್ ಠಾಣೆ, ಅಗ್ನಿಶಾಮಕ ಕಟ್ಟಡ, ಗ್ರಾಮಾಭಿವೃದ್ಧಿ ಭವನ, ಪ್ರಥಮ ದರ್ಜೆ ಕಾಲೇಜು, ಹೀಗೆ ವಿವಿಧ ಕಟ್ಟಡಗಳು ಆರಗಜ್ಞಾನೇಂದ್ರ ಅವರು ಸಚಿವರಾಗಿದ್ದಾಗ ನಿರ್ಮಾಣವಾಗಿವೆ. ಸುಮಾರು 100 ಕೋಟಿಗಳ ವೆಚ್ಚದಲ್ಲಿ ಈ ಎಲ್ಲಾ ಕಟ್ಟಡಗಳು ನಿರ್ಮಾಣವಾಗಿದ್ದು, ಉದ್ಘಾಟನೆಗೂ ಮುನ್ನವೇ ಈಗ ಅವೆಲ್ಲವೂ ಸೋರುತ್ತಿವೆ ಎಂದು ದೂರಿದರು.

ಕಟ್ಟಡ ನಿರ್ಮಾಣವಾಗಿ ಉದ್ಘಾಟನೆ ಹಂತದಲ್ಲೇ ಸೋರುತ್ತಿವೆ ಎಂದರೆ ಎಷ್ಟೊಂದು ಕಳಪೆಯಾಗಿರಬಹುದು ಎಂದು ಅರ್ಥವಾಗುತ್ತದೆ. ಈ ಕಟ್ಟಡಗಳು ಕಳೆದ ವರ್ಷದ ಅಲ್ಪ ಮಳೆಗೆ ಸೋರುತ್ತಿದ್ದವು. ಈ ವರ್ಷ ಜೋರು ಮಳೆಯಾಗುತ್ತಿದೆ. ಮುಂದೆ ಜಡಿ ಮಳೆ ಇಡಿದರೆ ಕೆಲವು ಕಟ್ಟಡಗಳು ಬೀಳುವ ಸಾಧ್ಯತೆಯೂ ಇವೆ ಎಂದು ಹರಿಹಾಯ್ದರು.

ಬಿಜೆಪಿ ಕಾಲದಲ್ಲಿ ಭ್ರಷ್ಟಚಾರ ತುಂಬು ತುಳುಕಿತ್ತು ಎನ್ನುವುದಕ್ಕೆ ಸೋರುತ್ತಿರುವ ಸರ್ಕಾರಿ ಕಟ್ಟಡಗಳೇ ಸಾಕ್ಷಿಯಾಗಿವೆ.ಇಷ್ಟೊಂದು ಭ್ರಷ್ಟಚಾರ ನಡೆದಿದ್ದರು ಆರಗ ಜ್ಞಾನೇಂದ್ರ ಅವರು ಏಕೆ ಸುಮ್ಮನೆ ಇದ್ದಾರೆ ಎಂದು ಅರ್ಥವಾಗುತ್ತಿಲ್ಲ. ಮುಂಬರುವ ಅಧಿವೇಶನದಲ್ಲಿ ಅವರೇ ಈ ಬಗ್ಗೆ ಧ್ವನಿ ಎತ್ತಲಿ. ತನಿಖೆಗೆ ಅವರೇ ಒತ್ತಾಯಿಸಬೇಕು. ವಿಶೇಷವೆಂದರೆ ಈ ಎಲ್ಲಾ ಕಟ್ಟಡಗಳ ಗುತ್ತಿಗೆದಾರ ಒಬ್ಬನೇ. ಆತ ಶಾಸಕ ಆರಗ ಜ್ಞಾನೇಂದ್ರ ಸಂಬಂಧಿ ಎಂದು ಹೇಳಲಾಗುತ್ತಿದೆ ಎಂದರು. ಕಟ್ಟಡಗಳ ಉದ್ಘಾಟನೆ ಸಮಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪನವರು ಮಳೆಗಾಲದಲ್ಲಿ ಕಟ್ಟಡಗಳು ಸೋರುವುದು ಸಾಮಾನ್ಯ ಎಂದು ಸೌಜನ್ಯಕ್ಕಾಗಿ ಹಾಗೆ ಹೇಳಿರಬಹುದು. ಕಟ್ಟಡಗಳು ಸೋರುವುದನ್ನು ಅವರು ಸಮರ್ಥಿಸಿಕೊಂಡಿಲ್ಲ. ಅಲ್ಲದೇ ಸಚಿವರ ಕಾರಿನಲ್ಲಿಯೇ ಅರಗಜ್ಞಾನೇಂದ್ರ ಅವರು ಉದ್ಘಾಟನ ಸ್ಥಳಕ್ಕೆ ಬಂದಿದ್ದಾರೆ. ಬರುವ ದಾರಿಯಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಬೇಡಿ ಎಂದು ಕೇಳಿಕೊಂಡಿದ್ದಾರೆ. ಹಾಗಾಗಿ ಈ ರೀತಿ ಹೇಳಿರಬಹುದಷ್ಟೇ. ಆದರೆ, ತನಿಖೆ ಮಾಡಬೇಕು ಎಂಬುವುದು ನಮ್ಮ ಆಗ್ರಹ ಎಂದು ಆಯನೂರು ಮಂಜುನಾಥ್‌ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸದನದಲ್ಲಿ ಸರ್ಕಾರಿ ನೌಕರರ ಏಳನೇ ವೇತನ ಜಾರಿ ಮಾಡಲು ಸರ್ಕಾರ ಕ್ರಮಕೈಗೊಳ್ಳಬೇಕು. ಈಗಾಗಲೇ ಮುಖ್ಯಮಂತ್ರಿ ಗಳು ಭರವಸೆ ನೀಡಿದ್ದಾರೆ. ಶೇ.27.5 ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ. ಮಧ್ಯಾಂತರವಾಗಿ ಶೇ.17 ರಷ್ಟು ಈಗಾಗಲೇ ನೀಡಲಾಗಿದೆ. ಹಾಗೆಯೇ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ಕೂಡ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಆರ್. ಪ್ರಸನ್ನಕುಮಾರ್, ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ಮುಖಂಡರಾದ ವೈ.ಎಚ್.ನಾಗರಾಜ್, ಚಂದ್ರಭೂಪಾಲ್, ಕಲಗೂಡು ರತ್ನಾಕರ್ ಮತ್ತಿತರರು ಇದ್ದರು.

Share this article