ಕನ್ನಡಪ್ರಭವಾರ್ತೆ ಬೆಳ್ತಂಗಡಿ/ಪುತ್ತೂರು ಬೆಳ್ತಂಗಡಿ ತಾಲೂಕು ಕಳೆಂಜದ ಗ್ರಾಮದ ಅಮ್ಮಿನಡ್ಕ ಲೋಲಾಕ್ಷ ಎಂಬವರ ಮನೆ ಪಂಚಾಂಗ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ್ಪಿನಂಗಡಿ ಆರ್‌ಎಫ್ಒ ಕರ್ತವ್ಯಕ್ಕೆ ಅಡ್ಡಿಪಡಿಸಿದರೆಂದು ಆರೋಪಿಸಿ ತಡವಾಗಿ ನೀಡಿದ ದೂರಿನಂತೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮೇಲೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆಂಜ ಗ್ರಾಮದ ಸರ್ವೆ ನಂಬ್ರ 309 ರಲ್ಲಿ ಲೋಲಾಕ್ಷ ಗೌಡ ಎಂಬವರು ಮೀಸಲು ಅರಣ್ಯ ಪ್ರದೇಶಕ್ಕೆ ಅತಿಕ್ರಮಣ ಮಾಡಿ ಮೀಸಲು ಅರಣ್ಯ ಪ್ರದೇಶದಲ್ಲಿ ಮನೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು. ಈ ಸ್ಥಳಕ್ಕೆ ಹಿರಿಯ ಅಧಿಕಾರಿಗಳ ಸೂಚನೆಯಂತೆ ಅ.9ರಂದು ತಾನು ಸಿಬ್ಬಂದಿಯೊಂದಿಗೆ ಭೇಟಿ ನೀಡಿದ್ದು, ಲೋಲಾಕ್ಷ ಗೌಡ ಎಂಬವರು ಮೀಸಲು ಅರಣ್ಯ ಪ್ರದೇಶದಲ್ಲಿ ಮನೆ ನಿರ್ಮಾಣ ಮಾಡಲು ಪೌಂಡೇಶನ್ ಹಾಕಿರುವುದು ಕಂಡುಬಂತು. ಕೂಡಲೇ ನಿವೇಶನ ತೆರವು ಮಾಡುವಂತೆ ಲೋಲಾಕ್ಷ ಗೌಡ ಅವರಿಗೆ ಸೂಚಿಸಿದ್ದೆ. ತೆರವುಗೊಳಿಸದೆ ಇರುವುದರಿಂದ ಪಂಚಾಂಗವನ್ನು ಸಿಬ್ಬಂದಿ ಮುಖಾಂತರ ತೆರವುಗೊಳಿಸಲು ಮುಂದಾದೆವು. ಆ ಸಮಯ ಶಾಸಕ ಹರೀಶ್ ಪೂಂಜಾ ಬೆಂಬಲಿಗರೊಂದಿಗೆ ಸೇರಿ ತಡೆದಿದ್ದು, ಅಧಿಕಾರಿಗಳ ಸಮ್ಮುಖದಲ್ಲಿ ಅಸಂಸದೀಯ ಪದ ಬಳಸಿದ್ದಾರೆ. ಆದುದರಿಂದ ಅರಣ್ಯ ಇಲಾಖಾ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಶಾಸಕರು ಹಾಗೂ ಬೆಂಬಲಿಗರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅರಣ್ಯಾಧಿಕಾರಿ ಜಯಪ್ರಕಾಶ್ ಕೋರಿದ್ದರು. ದೂರು ಸ್ವೀಕರಿಸಿದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಉಪವಿಭಾಗಾಧಿಕಾರಿಗೆ ಮನವಿ: ಪ್ರಕರಣಕ್ಕೆ ಸಂಬಂಧಿಸಿ ಹರೀಶ್ ಪೂಂಜಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಪುತ್ತೂರು ತಾಲೂಕು ಶಾಖೆಯ ವತಿಯಿಂದ ಪುತ್ತೂರಿನ ಸಹಾಯಕ ಆಯುಕ್ತರಿಗೆ ಬುಧವಾರ ಮನವಿ ಸಲ್ಲಿಸಿ ಆಗ್ರಹಿಸಲಾಯಿತು. ಶಾಸಕ ಹರೀಶ್ ಪೂಂಜಾ ಹಾಗೂ ಮತ್ತಿತರರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ಅರಣ್ಯ ಇಲಾಖೆಯ ಕರ್ತವ್ಯವಾದ ಅರಣ್ಯ ರಕ್ಷಣೆ ನಿರ್ಭಯವಾಗಿ ನಿರ್ವಹಿಸಲು ಅನುವು ಮಾಡಿಕೊಡಬೇಕು. ಕರ್ತವ್ಯ ನಿರ್ವಹಿಸುವಲ್ಲಿ ಸೂಕ್ತ ರಕ್ಷಣೆ ಒದಗಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಯಿತು. ಉಪವಿಭಾಗಾಧಿಕಾರಿ ಗಿರೀಶ್ ನಂದನ್ ಮನವಿ ಸ್ವೀಕರಿಸಿದರು. ತಹಸೀಲ್ದಾರ್ ಶಿವಶಂಕರ್ ಜೊತೆಗಿದ್ದರು. ರಾಜ್ಯ ಸರ್ಕಾರಿ ನೌಕರರ ಸಂಘ ಪುತ್ತೂರು ತಾಲೂಕು ಶಾಖೆ ಅಧ್ಯಕ್ಷ ಶಿವಾನಂದ ಆಚಾರ್ಯ, ರಾಜ್ಯ ಪರಿಷತ್ ಸದಸ್ಯ ಪುರುಷೋತ್ತಮ, ಹಿರಿಯ ಉಪಾಧ್ಯಕ್ಷ ಹರಿಪ್ರಕಾಶ್ ಬೈಲಾಡಿ, ಗೌರವ ಅಧ್ಯಕ್ಷ ರಾಮಚಂದ್ರ, ಸದಸ್ಯರಾದ ಮಹೇಶ್ ಕುಮಾರ್, ಸುಲೋಚನಾ, ಕವಿತಾ, ಪದ್ಮಾವತಿ, ಉಪವಲಯ ಅರಣ್ಯಾಧಿಕಾರಿಗಳಾದ ಅಶೋಕ್, ಜರಾಲ್ಡ್ ಡಿಸೊಜ, ಬೀಟ್ ಫಾರೆಸ್ಟರ್ ಜಗದೀಶ್ ಮತ್ತಿತರರಿದ್ದರು. ಜೈಲಿಗೆ ಹೋದರೂ ಚಿಂತೆಯಿಲ್ಲ, ಕೊನೆ ತನಕ ಬಡವರ ಪರ: ಪೂಂಜ ನಾನು ಜೈಲಿಗೆ ಹೋದರೂ ಪರವಾಗಿಲ್ಲ, ಕೊನೆಯವರೆಗೂ ಬಡವರ ಪರವಾಗಿಯೇ ನಿಲ್ಲುತ್ತೇನೆ ಎಂದ ಶಾಸಕ ಹರೀಶ್ ಪೂಂಜ ಪ್ರತಿಕ್ರಿಯಿಸಿದ್ದಾರೆ. ಪ್ರಕರಣ ದಾಖಲು ಕುರಿತು ಮಾತನಾಡಿರುವ ಅವರು, ನಾನು ಶಾಸಕನಾಗಿರುವುದು ನನ್ನ ಜನರ ಸೇವೆಗೆ ಮತ್ತು ಅವರ ರಕ್ಷಣೆಗೆ. ಶಾಸಕನಾಗಿ ಜನರಿಗೋಸ್ಕರ ಇರುವವನು ಅದಕ್ಕಾಗಿ ಯಾವ ಬೆಲೆ ತೆರಲು ಸಿದ್ಧ ಎಂದು ತಿಳಿಸಿದ್ದಾರೆ. ನೂರಾರು ವರ್ಷಗಳಿಂದ ಬದುಕು ಕಟ್ಟಿಕೊಂಡಿದ್ದ ಮನೆಯವರ ಪರವಾಗಿ ನಾನೊಬ್ಬ ಜನಪ್ರತಿನಿಧಿಯಾಗಿ ಧ್ವನಿ ಎತ್ತಿದ್ದು ತಪ್ಪಾ? ನನ್ನ ಕ್ಷೇತ್ರದ ಜನರ ಪರವಾಗಿ ಹೋರಾಡುವ ಹಕ್ಕು ನನಗಿಲ್ಲವೇ? ನನ್ನ ಜನ ನನ್ನಲ್ಲಿ ಸಮಸ್ಯೆ ಹೇಳಿಕೊಂಡಾಗ ಸುಮ್ಮನಿರಬೇಕೆ? ಹೀಗಾದರೆ ಸಾಮಾನ್ಯ ಜನರ ಗತಿಯೇನು ಎಂದು ಅವರು ಪ್ರಶ್ನಿಸಿದ್ದಾರೆ. ಮುಖ್ಯಮಂತ್ರಿಗಳೇ, ಅರಣ್ಯ ಸಚಿವರೇ ನಿಮ್ಮ ಈ ಬೆದರಿಕೆ ತಂತ್ರಗಳಿಗೆ ನಾನು ಬೆದರುವುದಿಲ್ಲ. ಬಡವರಿಗಾಗಿ ಇಂತಹ ನೂರು ಕೇಸು ಹಾಕಿಸಿಕೊಳ್ಳುವುದಕ್ಕೂ ಸಿದ್ಧನಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.