ಕನ್ನಡಪ್ರಭ ವಾರ್ತೆ ಆನವಟ್ಟಿ ಸರ್ಕಾರ ನೀಡುವ ಸಮವಸ್ತ್ರ ಬಿಟ್ಟು, ಮತ್ತೆ 2 ಜೊತೆ ಪ್ರತ್ಯೇಕ ಸಮವಸ್ತ್ರವನ್ನು ಆನವಟ್ಟಿಯ ಕೆಪಿಎಸ್ (ಪ್ರೌಢ ಮತ್ತು ಕಾಲೇಜು) ಶಾಲಾ ಮಕ್ಕಳಿಗೆ ನಿಗದಿಮಾಡಿದ್ದು, ಈ ಎರಡು ಜೊತೆ ಸಮವಸ್ತ್ರ ವಿತರಿಸಬೇಕಾದ ಗುತ್ತಗೆದಾರರು ಹೆಚ್ಚಿಗೆ ಹಣ ಪಡೆದು, ಕನಿಷ್ಠ ಗುಣಮಟ್ಟದ ಬಟ್ಟೆ ವಿತರಿಸಿರುವ ಬಗ್ಗೆ ಪೋಷಕರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲೆ ವಿಭಾಗದ 8ನೇ ತರಗತಿಯ 400 ವಿದ್ಯಾರ್ಥಿಗಳಿಗೆ, ಎರಡು ಜೊತೆ ಸಮವಸ್ತ್ರದ ಗುತ್ತಿಗೆ ಪಡೆದಿರುವ ಗುತ್ತಿಗೆದಾರ ಒಬ್ಬ ವಿದ್ಯಾರ್ಥಿಗೆ ₹850 ವಸೂಲಿ ಮಾಡಿದ್ದಾರೆ. ಗುತ್ತಿಗೆದಾರ ವಿತರಿಸಿರುವ ಸಮವಸ್ತ್ರಗಳು ಅತ್ಯಂತ ಕನಿಷ್ಠ ಗುಣಮಟ್ಟ ಹೊಂದಿವೆ. ಇದೇ ಗುಣಮಟ್ಟದ ಎರಡು ಜೊತೆ ಬಟ್ಟೆಗಳು, ಮಾರುಕಟ್ಟೆಯಲ್ಲಿ ₹350 ಬೆಲೆಗೆ ಸಿಗುತ್ತವೆ. ಬಟ್ಟೆಗಳ ಮೇಲೆ ಹೊಲಿಗೆ ಸರಿಯಾಗಿ ಕೂರುತ್ತಿಲ್ಲ. ಬಟ್ಟೆಗಳು ಹಿಂಜುತ್ತಿವೆ ಎಂದುಪೋಷಕರು ದೂರಿದರು. ಕೆಪಿಎಸ್ ಶಾಲೆ ಕಾಲೇಜು ವಿಭಾಗದಲ್ಲಿ ಉಪನ್ಯಾಸಕರೊಬ್ಬರು ಅವರ ಪ್ರಭಾವ ಬೀರಿ, ಸ್ವತಃ ಸಹೋದರನಿಗೆ, ಎರಡು ಜೊತೆ ಸಮವಸ್ತ್ರ ಪೂರೈಕೆ ಗುತ್ತಿಗೆ ಕೊಡಿಸಿದ್ದಾರೆ. ಬಟ್ಟೆ ಗುಣಮಟ್ಟ ತಕ್ಕಮಟ್ಟಿಗೆ ಚೆನ್ನಾಗಿದ್ದರೂ, ಬೆಲೆ ₹950 ಹೆಚ್ಚಾಯಿತು. ಮಾರುಕಟ್ಟೆಯ ಅಂಗಡಿಗಳಲ್ಲಿ ಅವರು ವಿತರಿಸಿರುವ ಬಟ್ಟೆಗಳು ₹700 ರಿಂದ ₹750ಕ್ಕೆ ಸಿಗುತ್ತವೆ. ಅಳತೆಗಳು ತುಂಬ ಕಡಿಮೆ ಇವೆ. ನಮ್ಮ ಅಳತೆಗೆ ಬಟ್ಟೆ ಹೊಲಿಗೆ ಹಾಕಿಸಿಕೊಳ್ಳಲು ಮತ್ತೆ ಹೆಚ್ಚುವರಿ ಬಟ್ಟೆ ಸೇರಿಸಬೇಕಾಗಿದೆ. ₹25 ರಿಂದ ₹30 ವಿದ್ಯಾರ್ಥಿಗಳ ಬಟ್ಟೆಗಳ ಕಲರ್‌ನಲ್ಲಿ ವ್ಯತ್ಯಾಸವಿದೆ ಎಂದು ಕೆಲವು ವಿದ್ಯಾರ್ಥಿಗಳು ಸಹ ಬೇಸರ ವ್ಯಕ್ತಪಡಿಸಿದ್ದಾರೆ. - - - ಬಾಕ್ಸ್ ಉಪಪ್ರಾಂಶುಪಾಲರ ಮಾತು ಲೆಕ್ಕಕ್ಕಿಲ್ಲ ಪ್ರತಿ ವರ್ಷ ಸ್ಥಳೀಯ ಬಟ್ಟೆ ವ್ಯಾಪಾರಿಗಳನ್ನು ಕರೆಸಿ, ಶಾಲಾ ಶಿಕ್ಷಕರು ಮತ್ತು ಶಾಲಾ ಅಭಿವೃದ್ಧಿ ಸಮಿತಿಯವರು ಉತ್ತಮ ಗುಣಮಟ್ಟದ ಬಟ್ಟೆ ಆಯ್ಕೆ ಮಾಡಿ, ಬೆಲೆ ಕಡಿಮೆ ಮಾಡಿಸಿ, ಪೋಷಕರಿಗೆ ಹೊರೆಯಾಗದಂತೆ ನೋಡಿಕೊಳ್ಳುತ್ತಿದ್ದೆವು. ಈ ವರ್ಷ ಹೊಸದಾಗಿ ನೇಮಕವಾದ ಕಾಲೇಜು ಅಭಿವೃದ್ಧಿ ಸಮಿತಿಯವರು ನಮ್ಮ ಮಾತನ್ನು ಕೇಳಲಿಲ್ಲ, ವಿಶ್ವಾಸಕ್ಕೂ ತೆಗೆದುಕೊಂಡಿಲ್ಲ. ಕನಿಷ್ಠ ಮಟ್ಟದ ಸಮವಸ್ತ್ರ ವಿತ್ತರಿಸಿರುವುದು ಎಲ್ಲರಿಗೂ ಬೇಸರ ಮೂಡಿಸಿದೆ ಎಂದು ಉಪಪ್ರಾಂಶುಪಾಲ ಎಚ್.ಮಹಾದೇವಪ್ಪ ತಿಳಿಸುತ್ತಾರೆ. - - - ಕೋಟ್ಸ್ ಶಾಲೆ-ಕಾಲೇಜಿನ ವಿದ್ಯಾರ್ಥಿಗಳ ಪೋಷಕರ ಸಭೆ ಕರೆದು, ಅವರ ಎದುರಲ್ಲೇ ಪೋಷಕರನ್ನೇ ಶಾಲಾ –ಕಾಲೇಜು ಅಭಿವೃದ್ಧಿ ಸಮಿತಿಗೆ ಸದಸ್ಯರನ್ನಾಗಿ ಆಯ್ಕೆ ಮಾಡಬೇಕು. ಅವರ ಮಕ್ಕಳು ಆ ಸಂಸ್ಥೆಗಳಲ್ಲಿ ಓದುತ್ತಿರುವುದರಿಂದ ಹೆಚ್ಚಿನ ಕಾಳಜಿ ವಹಿಸಿ ಅವ್ಯವಹಾರ ನಡೆಯದಂತೆ ನೋಡಿಕೊಳ್ಳುತ್ತಾರೆ. ಜೊತೆಗೆ ಶಾಲೆ ಅಭಿವೃದ್ಧಿ ಬಗ್ಗೆಯೂ ಚಿಂತನೆ ಮಾಡುತ್ತಾರೆ - ಸುರೇಶ್ ಮಸಾಲ್ತಿ, ಮುಖಂಡ ಕನಿಷ್ಠ ಗುಣಮಟ್ಟದ ಸಮವಸಸ್ತ್ರ ವಿತರಣೆಯಲ್ಲಿ ನನ್ನ ಪಾತ್ರವಿಲ್ಲ. ಗುತ್ತಿಗೆದಾರ ಸಂಗಮೇಶ್ ಎನ್ನುವವರು ಕಡಿಮೆ ಬೆಲೆಯಲ್ಲಿ ಗರಿಷ್ಠ ಗುಣಮಟ್ಟದ ಹೊಂದಿರುವ ಬಟ್ಟೆಗಳನ್ನು ವಿದ್ಯಾರ್ಥಿಗಳಿಗೆ ವಿತರಿಸುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ ಈಗ ಕನಿಷ್ಠ ಗುಣಮಟ್ಟದ ಸಮವಸ್ತ್ರ ವಿತರಿಸಿದ್ದಾರೆ. ವಿಚಾರಿಸಲು ಪೋನ್ ಮಾಡಿದರೆ ಸ್ವೀಕರಿಸುತ್ತಿಲ್ಲ. ಸಂಪರ್ಕಕ್ಕೂ ಸಿಗುತ್ತಿಲ್ಲ - ನಾಗರಾಜ ಶುಂಠಿ, ಕಾರ್ಯಾಧ್ಯಕ್ಷ, ಕಾಲೇಜು ಅಭಿವೃದ್ಧಿ ಸಮಿತಿ - - - -ಕೆಪಿ17ಎಎನ್‌ಟಿ1ಇಪಿ: ವಿದ್ಯಾರ್ಥಿಗಳಿಗೆ ಗುತ್ತಿಗೆದಾರ ವಿತರಿಸಿರುವ ಕನಿಷ್ಠ ಗುಣಮಟ್ಟದ ಬಟ್ಟೆ.