ಧರ್ಮದ ಆಧಾರದ ಮೇಲೆ ಮೀಸಲಾತಿ ಆರೋಪ: ಬಿಜೆಪಿ ಆಕ್ರೋಶ

KannadaprabhaNewsNetwork | Published : May 30, 2024 12:45 AM

ಸಾರಾಂಶ

ಹಿಂದುಳಿದ ವರ್ಗದವರ ಮೀಸಲಾತಿ ಸಂವಿಧಾನ ಬದ್ಧ ಹಕ್ಕಾಗಿದ್ದು ಇದನ್ನು ಕಸಿಯುವ ಪ್ರಯತ್ನವನ್ನು ಬಿಜೆಪಿ ಪಕ್ಷ ವಿರೋಧಿಸುತ್ತದೆ. ಕರ್ನಾಟಕದಲ್ಲಿಯೂ ಕಾಂಗ್ರೆಸ್ ಸರ್ಕಾರ ಇದೇ ಮಾದರಿಯ ಮೀಸಲಾತಿ ತರಲು ಯೋಜನೆ ರೂಪಿಸಿದೆ, ಹಾಗೊಮ್ಮೆ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ ಕಸಿದು ಮುಸ್ಲಿಮರಿಗೆ ನೀಡಿದರೆ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಜಾತಿಗಳಿಗೆ ಅನ್ಯಾಯವಾಗಲಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಹಿಂದುಳಿದ ವರ್ಗದ ಮೀಸಲಾತಿಯನ್ನು ಕಸಿದು ಧರ್ಮದ ಹೆಸರಿನಲ್ಲಿ ಮುಸಲ್ಮಾನರಿಗೆ ನೀಡಲು ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ಮುಂದಾಗಿದೆ ಎಂದು ಆರೋಪಿಸಿ ಭಾರತೀಯ ಜನತಾ ಪಕ್ಷದ ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಯಕರ್ತರು ಮಂಡ್ಯದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಿಂದ ಮೆರವಣಿಗೆ ಹೊರಟ ಪಕ್ಷದ ಕಾರ್ಯಕರ್ತರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಇಂಡಿಯಾ ಒಕ್ಕೂಟದ ವಿರುದ್ಧ ಧಿಕ್ಕಾರದ ಘೋಷಣೆ ಕೂಗುತ್ತಾ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ರಾಜ್ಯಪಾಲರಿಗೆ ಮನವಿ ಪತ್ರ ರವಾನಿಸಿದರು.

ಪಶ್ಚಿಮ ಬಂಗಾಳದಲ್ಲಿ ಹಿಂದುಳಿದ ವರ್ಗದ ಮೀಸಲಾತಿಯನ್ನು ಧರ್ಮದ ಹೆಸರಿನಲ್ಲಿ ಮುಸ್ಲಿಮರಿಗೆ ನೀಡಲು ಮುಂದಾಗಿರುವುದನ್ನು ಭಾರತೀಯ ಜನತಾ ಪಕ್ಷ ವಿರೋಧಿಸಲಿದೆ, ಅಲ್ಲಿನ ಸರ್ಕಾರದ ಸಂವಿಧಾನ ವಿರೋಧಿ ದೋಷ ಪೂರಿತ ಮೀಸಲಾತಿ ವ್ಯವಸ್ಥೆಯನ್ನು ರದ್ದು ಮಾಡಿರುವ ಹೈಕೋರ್ಟ್ ತೀರ್ಪನ್ನು ಸ್ವಾಗತಿಸುವುದಾಗಿ ಹೇಳಿದರು.

ಹಿಂದುಳಿದ ವರ್ಗದವರ ಮೀಸಲಾತಿ ಸಂವಿಧಾನ ಬದ್ಧ ಹಕ್ಕಾಗಿದ್ದು ಇದನ್ನು ಕಸಿಯುವ ಪ್ರಯತ್ನವನ್ನು ಬಿಜೆಪಿ ಪಕ್ಷ ವಿರೋಧಿಸುತ್ತದೆ. ಕರ್ನಾಟಕದಲ್ಲಿಯೂ ಕಾಂಗ್ರೆಸ್ ಸರ್ಕಾರ ಇದೇ ಮಾದರಿಯ ಮೀಸಲಾತಿ ತರಲು ಯೋಜನೆ ರೂಪಿಸಿದೆ, ಹಾಗೊಮ್ಮೆ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ ಕಸಿದು ಮುಸ್ಲಿಮರಿಗೆ ನೀಡಿದರೆ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಜಾತಿಗಳಿಗೆ ಅನ್ಯಾಯವಾಗಲಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಎಂತಹ ಸಂದರ್ಭ ಎದುರಾದರೂ ಸಂವಿಧಾನ ವಿರೋಧಿ ಮೀಸಲಾತಿ ವ್ಯವಸ್ಥೆಯನ್ನು ರಾಜ್ಯದಲ್ಲಿ ಜಾರಿಗೆ ತರಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಸಮಿತಿ ಸದಸ್ಯ ಡಾ.ಸಿದ್ದರಾಮಯ್ಯ, ರೈತಮೋರ್ಚಾ ಅಧ್ಯಕ್ಷ ಅಶೋಕ್ ಜಯರಾಂ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿವೇಕ್, ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಕೆ.ಆರ್.ನರಸಿಂಹಾಚಾರ್, ಪ್ರಧಾನ ಕಾರ್ಯದರ್ಶಿ ವಾಸು, ಮೈಷುಗರ್ ಮಾಜಿ ಅಧ್ಯಕ್ಷ ಶಿವಲಿಂಗೇಗೌಡ, ನಾಗಮಂಗಲ ನರಸಿಂಹಮೂರ್ತಿ, ಆನಂದ್, ಕೇಶವ್, ಕೆಂಪಬೋರಯ್ಯ, ಸಿ.ಟಿ. ಮಂಜುನಾಥ್, ಬಿ.ಟಿ ಶಿವಲಿಂಗಯ್ಯ, ನಿತ್ಯಾನಂದ, ಕೃಷ್ಣ, ಧನಂಜಯ್, ಸತೀಶ್ ಮದ್ದೂರು, ಪೀಹಳ್ಳಿ ರಮೇಶ್, ಸಂತೋಷ್ಕುರ್ಮಾ, ರಮೇಶ್ ವಿಶ್ವಕರ್ಮ, ಹೊಸಹಳ್ಳಿ ಶಿವು, ಹರ್ಷ, ಪ್ರಸನ್ನ ನೇತೃತ್ವ ವಹಿಸಿದ್ದರು.

Share this article