ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ಗುರುವಾರ ನಡೆದಿದ್ದು, ಆರಂಭದಲ್ಲೇ ಮೇಯರ್ ಅವರು ಶಕ್ತಿನಗರದ ಮೂರುವರೆ ಎಕರೆ ಜಾಗವನ್ನು ಟಿಡಿಆರ್ ಮೂಲಕ ಸ್ವಾಧೀನಪಡಿಸಲು ಮಂಜೂರಾತಿ ನೀಡುವುದಾಗಿ ತಿಳಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಅಬ್ದುಲ್ ರವೂಫ್ ಮತ್ತು ಎ.ಸಿ. ವಿನಯರಾಜ್, ಸದಸ್ಯರ ಗಮನಕ್ಕೆ ತಾರದೆ ಈ ಹಿಂದೆಯೇ ಪೂರ್ವಭಾವಿ ಮಂಜೂರಾತಿ ನೀಡಲಾಗಿದೆ. ಇದೀಗ ಕೌನ್ಸಿಲ್‌ನ ಅಜೆಂಡಾದಲ್ಲಿ ನಮೂದಿಸದೆ ಹಿಂಬಾಗಿಲ ಮೂಲಕ ಅನುಮೋದನೆ ನೀಡುವ ಹಿಂದೆ ಯಾವ ಉದ್ದೇಶ ಇದೆ ಎಂದು ಪ್ರಶ್ನಿಸಿದರು.ಮನೆ ಕಟ್ಟಲು ಅಡ್ಡಿ ಆರೋಪ: ಮೇಯರ್ ಮನೋಜ್ ಕುಮಾರ್ ಮಾತನಾಡಿ, ಈ ಮೂರುವರೆ ಎಕರೆ ಜಾಗದಲ್ಲಿ ಬಡ ಪೌರ ಕಾರ್ಮಿಕರಿಗೆ ಮನೆ ಕಟ್ಟಿಕೊಡುವ ಯೋಜನೆ ಇದೆ, 10 ಸಾವಿರ ಅರ್ಜಿ ಇವೆ ಎಂದರು. ಪೌರ ಕಾರ್ಮಿಕರ ಮನೆ ನಿರ್ಮಾಣಕ್ಕೆ ವಿಪಕ್ಷದವರು ಅಡ್ಡಿ ಪಡಿಸುತ್ತಿದ್ದಾರೆ ಎಂದು ಮಾಜಿ ಮೇಯರ್ ಸುಧೀರ್ ಶೆಟ್ಟಿ ಆರೋಪಿಸಿದರು.
5 ವರ್ಷದಲ್ಲಿ ಒಂದೂ ಮನೆ ಕಟ್ಟಿಲ್ಲ: ಬಡವರಿಗೆ ಮನೆ ಕಟ್ಟಲು ಯಾವ ವಿರೋಧವೂ ಇಲ್ಲ. ಆದರೆ ಶಕ್ತಿನಗರದಲ್ಲಿ ಈ ಹಿಂದೆಯೇ 10 ಎಕರೆ ಜಾಗ, ಬೋಂದೆಲ್‌ನಲ್ಲಿ 10 ಎಕರೆ ಜಾಗವನ್ನು ಮನೆ ಕಟ್ಟಿಕೊಡಲು ಗುರುತಿಸಿಡಲಾಗಿತ್ತು. ಈಗ ತರಾತುರಿಯಲ್ಲಿ ಬೇರೆ ಕಡೆ ಮೂರುವರೆ ಎಕರೆಗೆ ಟಿಡಿಆರ್ ಅನುಮೋದನೆ ನೀಡುವ ಹಿಂದೆ ಯಾವ ಲಾಭ ಇದೆ? 5 ವರ್ಷಗಳಲ್ಲಿ ನೆನಪಾಗದ ಪೌರ ಕಾರ್ಮಿಕರು ಈಗ ನೆನಪಾದದ್ದು ಹೇಗೆ ಎಂದು ವಿಪಕ್ಷ ನಾಯಕ ಅನಿಲ್ ಕುಮಾರ್, ಸದಸ್ಯರಾದ ಎ.ಸಿ. ವಿನಯರಾಜ್, ಪ್ರವೀಣ್‌ಚಂದ್ರ ಆಳ್ವ, ಶಶಿಧರ ಹೆಗ್ಡೆ, ನವೀನ್ ಡಿಸೋಜ ಪ್ರಶ್ನಿಸಿದರು.10 ಸಾವಿರ ಅರ್ಜಿಗಳು ಇದ್ದರೂ ಮನೆ ಕಟ್ಟಿ ಕೊಟ್ಟಿಲ್ಲ ಎಂಬ ವಿಚಾರ ಬೇರೆ ಮಗ್ಗುಲಿಗೆ ಹೊರಳಿ ಪರಸ್ಪರ ರಾಜಕೀಯ ಆರೋಪ- ಪ್ರತ್ಯಾರೋಪಗಳಲ್ಲಿ ಸದನ ಗೊಂದಲದ ಗೂಡಾಯಿತು. ಯಾವುದೇ ಕಾರಣಕ್ಕೂ ಈ ಟಿಡಿಆರ್ ಅನುಮೋದನೆ ಮಾಡಬಾರದು ಎಂದು ವಿಪಕ್ಷ ಸದಸ್ಯರು ಬಾವಿಗಿಳಿದು ಪ್ರತಿಭಟನೆ ನಡೆಸಿ ಪಟ್ಟು ಹಿಡಿದರು.
ಉಪ ಮೇಯರ್ ಭಾನುಮತಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ವೀಣಾ ಮಂಗಳ, ಕದ್ರಿ ಮನೋಹರ ಶೆಟ್ಟಿ, ಸುಮಿತ್ರ, ಸರಿತಾ ಶ್ರೀಧರ್, ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಇದ್ದರು.ಒಳಚರಂಡಿ ತ್ಯಾಜ್ಯ ವೆಟ್‌ವೆಲ್ಲಿಂದಲೇ ಹೊರಕ್ಕೆ!
ನೀರಿನ ಬಿಲ್‌ನಲ್ಲಿ ಯುಜಿಡಿ (ಒಳಚರಂಡಿ ಸಂಪರ್ಕ) ಇಲ್ಲದ ಮನೆಗಳಿಗೂ ಯುಜಿಡಿ ಶುಲ್ಕ ವಿಧಿಸಲಾಗುತ್ತಿದೆ. ಪ್ರೇಮಾನಂದ ಶೆಟ್ಟಿಯವರು ಮೇಯರ್ ಆಗಿದ್ದ ವೇಳೆ ಯುಜಿಡಿ ಸಂಪರ್ಕ ಹೊಂದಿರದ ಮನೆಗಳ ಶುಲ್ಕವನ್ನು ತೆರವುಗೊಳಿಸಿದ್ದು, ಮತ್ತೆ ಯಾಕೆ ಆರಂಭಿಸಲಾಗಿದೆ ಎಂದು ಸದಸ್ಯ ವಿನಯರಾಜ್ ಪ್ರಶ್ನಿಸಿದರು. ಇದನ್ನು ಸರಿಪಡಿಸುವುದಾಗಿ ಅಧಿಕಾರಿಗಳು ತಿಳಿಸಿದರು.
ಹ್ಯಾಮಿಲ್ಟನ್ ವೃತ್ತ ತೆರವುಗೊಳಿಸಿ ಏಕಮುಖ ಸಂಚಾರ ಮಾಡಿದ್ದರಿಂದ ಸಾಕಷ್ಟುಸಮಸ್ಯೆಯಾಗಿದೆ ಎಂದು ಆಕ್ಷೇಪಿಸಿ ಸದಸ್ಯ ಅಬ್ದುಲ್ ಲತೀಫ್ ಬ್ಯಾನರ್ ಹಿಡಿದು ಸದನದಲ್ಲೇ ಪ್ರತಿಭಟಿಸಿದರು. ಸೋಮವಾರ ತಜ್ಞರ ಜತೆ ಸ್ಥಳ ಪರಿಶೀಲನೆ ನಡೆಸಲು ಮೇಯರ್ ಮನೋಜ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.