ದೇವಸ್ಥಾನ ಟ್ರಸ್ಟ್ ನಿಂದ ದೇಗುಲ ಜಾಗ ಕಬಳಿಕೆ ಆರೋಪ

KannadaprabhaNewsNetwork | Published : Dec 5, 2024 12:34 AM

ಸಾರಾಂಶ

ಮುಜರಾಯಿ ಇಲಾಖೆಗೆ ಒಳಪಟ್ಟ ಬೆಲೆಬಾಳುವ ನಾಲ್ಕು ಎಕರೆ ಸರ್ಕಾರಿ ಜಾಗವನ್ನು ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ಹೆಸರಿನಲ್ಲಿ ದೇವಸ್ಥಾನ ಟ್ರಸ್ಚ್‌ ಕಬಳಿಕೆ ಮಾಡಿದ್ದು ತನಿಖೆ ನಡೆಸಿ ತೆರವುಗೊಳಿಸುವಂತೆ ಆಗ್ರಹಿಸಿ ಸಲ್ಲಿಸಿದ್ದ ದಾವೆ ವಿಚಾರವಾಗಿ ಬುಧವಾರ ಎಸಿ ನೇತೃತ್ವದಲ್ಲಿ ವಸ್ತು ಸ್ಥಿತಿ ಪರಿಶೀಲನೆ ನಡೆಯಿತು.

ಕನ್ನಡಪ್ರಭವಾರ್ತೆ ಪಾವಗಡ ಮುಜರಾಯಿ ಇಲಾಖೆಗೆ ಒಳಪಟ್ಟ ಬೆಲೆಬಾಳುವ ನಾಲ್ಕು ಎಕರೆ ಸರ್ಕಾರಿ ಜಾಗವನ್ನು ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ಹೆಸರಿನಲ್ಲಿ ದೇವಸ್ಥಾನ ಟ್ರಸ್ಚ್‌ ಕಬಳಿಕೆ ಮಾಡಿದ್ದು ತನಿಖೆ ನಡೆಸಿ ತೆರವುಗೊಳಿಸುವಂತೆ ಆಗ್ರಹಿಸಿ ಸಲ್ಲಿಸಿದ್ದ ದಾವೆ ವಿಚಾರವಾಗಿ ಬುಧವಾರ ಎಸಿ ನೇತೃತ್ವದಲ್ಲಿ ವಸ್ತು ಸ್ಥಿತಿ ಪರಿಶೀಲನೆ ನಡೆಯಿತು.

ಇಲ್ಲಿನ ವೀರ್ಲಗೊಂದಿಯ ನರಸಿಂಹಯ್ಯ ಹಾಗೂ ಆಮ್ ಆದ್ಮಿ ಪಕ್ಷದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪಾವಗಡದ ಎನ್‌.ರಾಮಾಂಜಿನಪ್ಪ ಜಿಲ್ಲಾಧಿಕಾರಿ ಹಾಗೂ ಬೆಂಗಳೂರು ರಾಜ್ಯ ಭೂ ಕಬಳಿಕೆ ನ್ಯಾಯಾಲಯದಲ್ಲಿ ಹೂಡಿದ್ದ ದಾವೆಗೆ ಸಂಬಂಧಿಸಿದಂತೆ ಮಧುಗಿರಿ ಉಪವಿಭಾಗಧಿಕಾರಿ ಗುಟೂರು ಶಿವಪ್ಪ, ತಹಸೀಲ್ದಾರ್‌ ಡಿ.ಎನ್‌.ವರದರಾಜು ಪುರಸಭೆ ಮುಖ್ಯಾಧಿಕಾರಿ ಜಾಫರ್‌ ಷರೀಪ್‌ ಇತರೇ ಅಧಿಕಾರಿಗಳಿಂದ ದಾಖಲೆ ಪರಿಶೀಲನೆ ಹಾಗೂ ಇತರೇ ವಿಚಾರಗಳ ಕುರಿತು ಮಾಹಿತಿ ಸಂಗ್ರಹಿಸಲಾಯಿತು.

ಪಟ್ಟಣದ ನಾಗರಕಟ್ಟೆ ಹಾಗೂ ಶ್ರೀನಿವಾಸ ನಗರದ ಮುಖ್ಯ ರಸ್ತೆ ಪಕ್ಕದಲಿರುವ ವಿವಾದಿತ ಸ್ಥಳಕ್ಕೆ ಭೇಟಿ ನೀಡಿದ ತಂಡ ಸ್ಥಳ ಪರಿಶೀಲನೆ ಜೊತೆಗೆ ವಿವಿಧ ಆಯಾಮಾಗಳಲ್ಲಿ ಸಂಶೋಧನೆ ನಡೆಸಿತು.

ಈ ವೇಳೆ ಸ್ಥಳದಲ್ಲಿದ್ದ ದಾವೆದಾರರು ಪಾವಗಡ ಪಟ್ಟಣದ ಶ್ರೀನಿವಾಸ ನಗರ ಸರ್ವೆ ನಂಬರ್ 72 /74ರಲ್ಲಿ ನಾಲ್ಕು ಎಕರೆ ಸರ್ಕಾರಿ ಜಮೀನು ಕಬಳಿಕೆಯಾಗಿದೆ. ಅಲ್ಲದೇ ಈ ಜಾಗದಲ್ಲಿ ಮುಜರಾಯಿ ಇಲಾಖೆಗೆ ಒಳಪಟ್ಟ ನೀಲಕಂಠೇಶ್ವರಸ್ವಾಮಿ ದೇವಸ್ಥಾನ, ಕಲ್ಯಾಣಿ ಹಾಗೂ ಜಂಗಮರ ಮಠ ಹಾಗೂ ಜಂಗಮರ ಸ್ವಾಮೀಜಿಗಳ ಸಮಾಧಿಗಳಿರುವ ಬಗ್ಗೆ ಕಂದಾಯ ಇಲಾಖೆಯ ದಾಖಲೆಗಳಲ್ಲಿ ನಮೂದಿಸಲಾಗಿದೆ. ಕಬಳಿಕೆಯ ಜಾಗ ಮುಜರಾಯಿ ಇಲಾಖೆಗೆ ಶ್ರೀ ನೀಲಕಂಠೇಶ್ವರ ಸ್ವಾಮಿ ದೇವಸ್ಥಾನಕ್ಕೆ ಸೇರಿದ್ದು, ಕಳೆದ ನಲವತ್ತು ವರ್ಷದ ಹಿಂದೆ ಪಟ್ಟಣದ ಆರ್ಯವೈಶ್ಯ ಸಂಘದ ಮುಖಂಡರು ಮುಜರಾಯಿ ಇಲಾಖೆಯ ನೀಲಕಂಠಶ್ವರ ಸ್ವಾಮಿ ದೇವಸ್ಥಾನ ಅಳಸಿ ಇದರ ಬದಲಿಗೆ ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನ ಎಂದು ನಾಮಕರಣಗೊಳಿಸುವ ಮೂಲಕ ಸರ್ಕಾರಿ ಜಾಗ ಕಬಳಿಸಿದ್ದಾರೆ. ಅಲ್ಲದೇ ನೀಲಕಂಠೇಶ್ವರಸ್ವಾಮಿ ದೇಗುಲಕ್ಕೆ ಮೀಸಲಿದ್ದ ಜಾಗದಲ್ಲಿ ಕಲ್ಯಾಣಿ ಹಾಗೂ ಜಂಗಮರಮಠ ಹಾಗೂ ಜಂಗಮರ ಸಮಾಧಿಗಳು ನಾಶವಾಗಿವೆ. ಸದರಿ ಜಾಗದಲ್ಲಿ ಅರ್ಧ ಎಕರೆಯಲ್ಲಿ ಶ್ರೀ ಕನ್ನಿಕಾಪರಮೇಶ್ವರಿ ದೇಗುಲ ನಿರ್ಮಿಸಿ ಉಳಿಕೆ ಜಮೀನಿನಲ್ಲಿ ಆರ್ಯವೈಶ್ಯ ಸಮಾಜದ ಉಳ್ಳವರು ಅಕ್ರಮವಾಗಿ 40ಕ್ಕೂ ಹೆಚ್ಚು ಸುಸಜ್ಜಿತ ಮನೆ ಕಟ್ಟಿಕೊಂಡು ವಾಸವಾಗಿದ್ದಾರೆ. ಈ ಭೂಕಬಳಿಕೆ ಬಗ್ಗೆ ತನಿಖೆ ನಡೆಯಬೇಕು. ಅಕ್ರಮ ಕಬಳಿಕೆ ಜಾಗ ತೆರವುಗೊಳಿಸಿ ಇದೇ ಜಾಗದಲ್ಲಿ ಮುಜರಾಯಿ ಇಲಾಖೆಗೆ ಸ್ವಾಧೀನಪಡಿಸಿಕೊಳ್ಳುವ ಮೂಲಕ ಶಿವಸರೂಪಿಯಾದ ನೀಲಕಂಠೇಶ್ವರ ಸ್ವಾಮಿ ದೇವಸ್ಥಾನ ನಿರ್ಮಾಣವಾಗಬೇಕು. ಜಂಗಮರ ಮಠ ಹಾಗೂ ಸಮಾಧಿಗಳು ಪುನಶ್ಚೇತನಗೊಳಿಸಬೇಕು.ಎಲ್ಲಾ ಜಾತಿ ಜನಾಂಗದ ಹಿಂದೂಗಳ ನಿತ್ಯ ಪೂಜೆ ಹಾಗೂ ಅನ್ನದಾಸೋಹಕ್ಕೆ ಅವಕಾಶ ಕಲ್ಪಿಸಬೇಕು. ಹಾಗೂ ಇದೇ ಜಾಗದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಭವನ ಮತ್ತು ಗ್ರಂಥಾಲಯ ನಿರ್ಮಿಸಿ ಅನುಕೂಲ ಕಲ್ಪಿಸುವಂತೆ ಒತ್ತಾಯಿಸಿದರು. ಈ ವೇಳೆ ಪುರಸಭೆಯ ಶಂಷುದ್ದೀನ್‌ ,ಕಂದಾಯ ಇಲಾಖೆ ರಾಜ್‌ಗೋಪಾಲ್‌ ,ವಿಎ ರಾಜೇಶ್‌,ಹಾಗೂ ಕನ್ನಮೇಡಿ ಕೃಷ್ಣಮೂರ್ತಿ ,ಬೇಕರಿ ನಾಗರಾಜು ಇತರೆ ಮುಖಂಡರಿದ್ದರು.

ಕೋಟ್‌ 1

ಪಟ್ಟಣದ ಶ್ರೀನಿವಾಸ ನಗರದಲ್ಲಿರುವ ನೀಲಕಂಠೇಶ್ವರಸ್ವಾಮಿ ಸೇರಿದ್ದ ಸರ್ಕಾರಿ ಜಾಗ ಕಬಳಿಕೆಯಾಗಿದೆ. ದೇಗುಲದಲ್ಲಿದ್ದ ಮುಜರಾಯಿ ಇಲಾಖೆ ವ್ಯಾಪ್ತಿಯ ನೀಲಕಂಠೇಶ್ವರಸ್ವಾಮಿ ವಿಗ್ರಹವನ್ನು ಯಾವುದೇ ಸರ್ಕಾರಿ ಅನುಮತಿ ಪಡೆಯದೇ ನಾಪತ್ತೆ ಮಾಡಿ ಇದೇ ಜಾಗದಲ್ಲಿ ಕನ್ನಿಕಾಪರಮೇಶ್ವರಿ ವಿಗ್ರಹ ಪ್ರತಿಷ್ಟಾಪಿಸಿದ್ದಾರೆ. ಇದೇ ಜಾಗದಲ್ಲಿ ಐತಿಹಾಸಿಕ ಹಿನ್ನಲೆಯ ಗರ್ಭಗುಡಿ ಬಗೆದಿದ್ದು ಬೆಲೆಬಾಳುವ ನಿಧಿ ನಾಪತ್ತೆಯಾದ ಸಂಶಯ ವ್ಯಕ್ತವಾಗುತ್ತಿದೆ. ತಹಸೀಲ್ದಾರ್‌ ವರದರಾಜು ಸದರಿ ಜಾಗದ ಕನ್ನಿಕಾಪರಮೇಶ್ವರಿ ದೇಗುಲದಲ್ಲಿ ನಿತ್ಯ ಪೂಜೆ ನಡೆಯುತ್ತಿದೆ. ದೇಗುಲದ ಬಾಗಿಲು ಹಾಕಿಲ್ಲ ಎಂದು ಜಿಲ್ಲಾಧಿಕಾರಿಗಳಿಗೆ ಸುಳ್ಳು ವರದಿ ಸಲ್ಲಿಸಿದ್ದಾರೆ. - ಎನ್‌.ರಾಮಾಂಜಿನಪ್ಪ, ದಾವೆದಾರ

ಕೋಟ್‌ 2

ನೀಲಕಂಠೇಶ್ವರ ಸ್ವಾಮಿಗೆ ಸೇರಿದ್ದ ದೇಗುಲದ ಜಾಗ, ಕನ್ನಿಕಾಪರಮೇಶ್ವರಿ ದೇಗುಲದ ಹೆಸರಿನಲ್ಲಿ ನಾಲ್ಕು ಎಕರೆ ಆರ್ಯ ವೈಶ್ಯ ಸಂಘ ಕಬಳಿಕೆ ಮಾಡಿದ್ದು ಈ ಸಂಬಂಧ ದಾಖಲೆ ಇವೆ. ತನಿಖೆಗೆ ಆದೇಶಿಸುವಂತೆ ರಾಜ್ಯ ಭೂಕಬಳಿಕೆ ನ್ಯಾಯಾಲಯಕ್ಕೆ ದಾವೆ ವೂಡಲಾಗಿದೆ. ಸತ್ಯ ಹೊರಬರಬೇಕು. ಸದರಿ ಜಾಗದಲ್ಲಿ ನೀಲಕಂಠೇಶ್ವರಸ್ವಾಮಿ ವಿಗ್ರಹ ನಿರ್ಮಿಸಬೇಕು.ಎಲ್ಲ ಸಮುದಾಯದ ಪೂಜೆಗೆ ಅವಕಾಶ ಕಲ್ಪಿಸಬೇಕು. ಮುಜರಾಯಿ ಇಲಾಖೆಯ ಕಲ್ಯಾಣಿ ಜಾಗ ಹಾಗೂ ಹಣಗಳಿಸಲು ಲೇಔಟ್‌ ನಿರ್ಮಾಣಕ್ಕೆ ಭೂಗಳ್ಳರು ಹಲವು ಕಡೆ ಪಟ್ಟಣದಲ್ಲಿ ಸರ್ಕಾರಿ ಜಾಗ ಕಬಳಿಕೆ ಮಾಡಿದ್ದಾರೆ. - ವೀರ್ಲಗೊಂಧಿ ನರಸಿಂಹಯ್ಯ, ದಾವೆದಾರ.

ಕೋಟ್‌ 3

ಜಿಲ್ಲಾಧಿಕಾರಿಯ ಆದೇಶ ಮೇರೆಗೆ ಪಾವಗಡಕ್ಕೆ ಭೇಟಿ ನೀಡಿ ಇಲ್ಲಿನ ಕಂದಾಯ ಹಾಗೂ ಪುರಸಭೆ ಹಾಗೂ ಸರ್ವೆ ಇಲಾಖೆಯ ಅಧಿಕಾರಿಗಳ ವಿವಾಧಿತ ಸ್ಥಳ ಕುರಿತು ಪರಿಶೀಲನೆ ನಡೆಸಲಾಗಿದೆ. ದೇಗುಲದ ಬಾಗಿಲು ತೆಗೆಸಿ ಗರ್ಭಗುಡಿ ಪರಿಶೀಲಿಸಿದ್ದು ಇಲ್ಲಿನ ದೇವಸ್ಥಾನದಲ್ಲಿ ಯಾವುದೇ ಪೂಜೆ ಪುನಸ್ಕಾರ ನಡೆಯದಿರುವುದು ಬೆಳಕಿಗೆ ಬಂದಿದೆ. ಮುಂದಿನ ಕ್ರಮಕ್ಕಾಗಿ ಸ್ಥಳ ಪರಿಶೀಲನೆಯ ಸೂಕ್ತ ವರದಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುವುದು. - ಗುಟೂರು ಶಿವಪ್ಪ, ಉಪವಿಭಾಗಧಿಕಾರಿ, ಮಧುಗಿರಿ

Share this article