ಬಳ್ಳಾರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸುವ ಮೂಲಕ ವಾಲ್ಮೀಕಿ ಸಮಾಜವನ್ನು ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕ ಹಾಗೂ ರಾಜಕೀಯವಾಗಿ ಹತ್ತಿಕ್ಕುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿ ವಾಲ್ಮೀಕಿ ಸಮಾಜದಿಂದ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಇಲ್ಲಿನ ನಗರೂರು ನಾರಾಯಣರಾವ್ ಪಾರ್ಕ್‌ನಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು, ಗಡಗಿ ಚನ್ನಪ್ಪ ವೃತ್ತದಲ್ಲಿ ಸಮಾವೇಶಗೊಂಡರು. ಇದೇ ವೇಳೆ ಮಾತನಾಡಿದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ವಾಲ್ಮೀಕಿ ಸಮಾಜದ ಯುವ ಮುಖಂಡ ಜೋಳದರಾಶಿ ತಿಮ್ಮಪ್ಪ ಅವರು, ವಾಲ್ಮೀಕಿ ಸಮಾಜದ ಅಸ್ವಿತ್ವ ನಾಶ ಮಾಡುವ ಹುನ್ನಾರ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೋರಾಟದ ಮೂಲಕವೇ ಉತ್ತರ ನೀಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.
ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕಾಡುಕುರುಬರು ಹಾಗೂ ಜೇನು ಕುರುಬರಿದ್ದಾರೆ. ಈಗಾಗಲೇ ಅವರು ಎಸ್‌ಟಿಗೆ ಸೇರ್ಪಡೆಗೊಂಡಿದ್ದಾರೆ. ಅವರ ಸೇರ್ಪಡೆಗೆ ನಮ್ಮ ವಿರೋಧವಿಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಡೀ ಕುರುಬ ಸಮಾಜವನ್ನು ಎಸ್‌ಟಿಗೆ ಸೇರ್ಪಡೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.ಕುರುಬರನ್ನು ಎಸ್‌ಟಿಗೆ ಯಾಕೆ ಸೇರಿಸಬಾರದು ಎಂಬುದನ್ನು ಸಮರ್ಥಿಸಲು ಕೇಂದ್ರೀಯ ಕುಲಶಾಸ್ತ್ರ ಅಧ್ಯಯನ ಸಮಿತಿಗೆ ಪೂರಕ ದಾಖಲೆಗಳನ್ನು ನೀಡಲಾಗುವುದು. ವಾಲ್ಮೀಕಿ ಸಮಾಜವನ್ನು ಹತ್ತಿಕ್ಕಲು ಮುಂದಾಗಿರುವ ಸಿದ್ದರಾಮಯ್ಯ ನಡೆಯ ವಿರುದ್ಧ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವಿವಿಧ ಹಂತದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ವಾಲ್ಮೀಕಿ ಪೀಠದ ಶ್ರೀಗಳ ಸಲಹೆಯಂತೆಯೇ ಹೋರಾಟ ರೂಪಿಸಿಕೊಂಡಿದ್ದು, ಸಿದ್ದರಾಮಯ್ಯ ಅವರ ನಡೆ ವಿರೋಧಿಸುವ ಇತರ ಸಮುದಾಯಗಳು ನಮ್ಮ ಹೋರಾಟಕ್ಕೆ ಬೆಂಬಲ ನೀಡಬೇಕು. ಸಾಮಾಜಿಕ ನ್ಯಾಯಕ್ಕಾಗಿ ನಡೆಯುವ ಚಳವಳಿಯಲ್ಲಿ ಪಾಲ್ಗೊಂಡು ನಮ್ಮ ಶಕ್ತಿ ಹೆಚ್ಚಿಸಬೇಕು ಎಂದು ಮನವಿ ಮಾಡಿದರು. ಗಡಗಿ ಚನ್ನಪ್ಪ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಪ್ರತಿಭಟನಾಕಾರರು ಜಿಲ್ಲಾಡಳಿತ ಮೂಲಕ ರಾಜ್ಯಪಾಲರಿಗೆ ಮನವಿ ಕಳುಹಿಸಿದರು. ಜಿಲ್ಲಾಧಿಕಾರಿ ಕೆ. ನಾಗೇಂದ್ರ ಪ್ರಸಾದ್ ಮನವಿ ಸ್ವೀಕರಿಸಿದರು.
ವಾಲ್ಮೀಕಿ ಸಮಾಜದ ಜಿಲ್ಲಾ ಪ್ರಮುಖರಾದ ಮುದಿ ಮಲ್ಲಯ್ಯ ಮೋಕಾ, ಜನಾರ್ದನ ನಾಯಕ, ಎನ್. ಸತ್ಯನಾರಾಯಣ, ವಕೀಲ ಜಯರಾಮ್, ರುದ್ರಪ್ಪ, ರೂಪನಗುಡಿ ಗೋವಿಂದಪ್ಪ, ಕಾಯಿಪಲ್ಯೆ ಬಸವರಾಜ್, ಪುಷ್ಪಲತಾ, ದುರುಗಪ್ಪ ನಾಯಕ, ಜಾನಕಮ್ಮ, ಮೆಡಿಕಲ್ ಮಲ್ಲಿಕಾರ್ಜುನ, ಬಿ. ಮಲ್ಲಿಕಾರ್ಜುನ, ಜೋಳದರಾಶಿ ಚಂದ್ರಶೇಖರ, ಯರಗುಡಿ ರಮೇಶ್, ಯರಗುಡಿ ಚಂದ್ರಶೇಖರ, ರೂಪನಗುಡಿ ನಾಗರಾಜ್, ವೆಂಕಟೇಶ್, ನಾರಾಯಣಸ್ವಾಮಿ, ದೇಗಲಪಾಡು ಸುಂಕಣ್ಣ, ಪರಂಧಾಮ, ಮಾರೆಣ್ಣ, ಅದ್ದಿಗೇರಿ ರಾಮಣ್ಣ, ರಾಜ, ಹೇಮಣ್ಣ ಭಾಗವಹಿಸಿದ್ದರು.