ಧಾರವಾಡ:
ಪಾಲಿಕೆಯ 708 ಗುತ್ತಿಗೆ ಪೌರಕಾರ್ಮಿಕರಿಗೆ ನೇರವೇತನ ಪಾವತಿ ಹಾಗೂ ಪಾಲಿಕೆಯ 508 ನೇರವೇತನ ಪೌರಕಾರ್ಮಿಕರಿಗೆ ನೇರ ನೇಮಕಾತಿ ಮಾಡಲು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಠರಾವು ಪಾಸ್ ಮಾಡುವುದು ಹಾಗೂ ಸಂಘದ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಕ್ತ ಪತ್ರ ಚಳವಳಿ ನಡೆಯಿತು. ಇಲ್ಲಿಯ ಪಾಲಿಕೆ ಕಚೇರಿ ಆವರಣದಲ್ಲಿ ನಡೆಯುತ್ತಿರುವ 2ನೇ ದಿನದ ಅನಿರ್ದಿಷ್ಟ ಅಹೋರಾತ್ರಿ ಧರಣಿಯಲ್ಲಿ ಪತ್ರಗಳನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಲಾಯಿತು. ಈ ವೇಳೆ ಪ್ರತಿಭಟನೆ ನೇತೃತ್ವ ವಹಿಸಿದ್ದ ವಿಜಯ ಗುಂಟ್ರಾಳ ಮಾತನಾಡಿ, ನ್ಯಾಯಾಲಯ ಪೌರಕಾರ್ಮಿಕರಿಗೆ ನೇರ ವೇತನ ಪಾವತಿಸುವಂತೆ ಆದೇಶ ಹೊರಡಿಸಿದೆ. ಆದರೆ, ಈ ಆದೇಶವನ್ನು ಪಾಲಿಕೆ ಆಯುಕ್ತರು ಉಲ್ಲಂಘಿಸಿದ್ದಾರೆ. ಪಾಲಿಕೆಯಲ್ಲಿ ಕಳೆದ ಒಂಭತ್ತು ವರ್ಷಗಳಿಂದ ಸರ್ಕಾರದ ಆದೇಶವನ್ನು ಪಾಲಿಕೆ ಸಾಮಾನ್ಯ ಸಭೆಯ ಠರಾವು ಮತ್ತು ಪಾಲಿಕೆ ಆಯುಕ್ತರ ಆದೇಶವನ್ನು ಧಿಕ್ಕರಿಸಿ ಕಾನೂನು ಬಾಹಿರವಾಗಿ ಸ್ವಚ್ಛತಾ ಗುತ್ತಿಗೆಯನ್ನು ಈ ವರೆಗೂ ಮುಂದುವರಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.ಈ ಹಿನ್ನಲೆಯಲ್ಲಿ ಸೆ. 26ರಂದು ನಡೆಯಲಿರುವ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಗುತ್ತಿಗೆ ರದ್ದುಪಡಿಸಿ ನೇರವೇತನ ಪಾವತಿ ಮತ್ತು ನೇರನೇಮಕಾತಿ 1 ತಿಂಗಳಿನಲ್ಲಿ ಮಾಡಿಕೊಡುವಂತೆ ವಿಷಯಗಳ ಬಗ್ಗೆ ಠರಾವು ಪಾಸ್ ಮಾಡಬೇಕು ಮತ್ತು ಸಂಘದ ವಿವಿಧ ಬೇಡಿಕೆಗಳ ಕುರಿತು ಈ ಹಿಂದಿನ ಠರಾವು ಜಾರಿಗೊಳಿಸಬೇಕು. ಪಾಲಿಕೆ ಆಯುಕ್ತರು ನಡೆಸಿದ ಸಭೆಯ ತೀರ್ಮಾನಗಳನ್ನು ತಕ್ಷಣ ಈಡೇರಿಸಬೇಕು. ತಪ್ಪಿದಲ್ಲಿ ಅವಳಿನಗರದ ಸ್ವಚ್ಛತಾ ಕೆಲಸ ಸ್ಥಗಿತಗೊಳಿಸಿ ಉಗ್ರಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.
ಈ ವೇಳೆ ಗಂಗಮ್ಮ ಸಿದ್ರಾಮಪೂರ, ಕನಕಪ್ಪ ಕೊಟಬಾಗಿ, ನರಸಿಂಹ ಮಾದರ, ಬಾಬು ಸಗಬಾಲ, ಶರಣಪ್ಪ ಅಮರಾವತಿ, ಪರಶುರಾಮ ಕಡಕೋಳ, ಪುಲ್ಲಯ್ಯ ಚಿಂಚಗೋಳ ಸುನೀಲ ದೊಡ್ಡಮನಿ, ನಾಗೇಶ ಚುರುಮರಿ, ಶಂಕರ ಶಿಕ್ಕಲಗಾರ ಮತ್ತಿತರರು ಇದ್ದರು.