ಧಾರವಾಡ:
ಕಳೆದ ಮೂರು ದಶಕಗಳಿಂದ ತಮ್ಮ ಪ್ರಯತ್ನದಿಂದ ಗೋವಾದಲ್ಲಿ ತರುಣಿಯರನ್ನು ದೇವದಾಸಿ ಪದ್ಧತಿಯೊಳಗೆ ದೂಡುವ ಅನಿಷ್ಠ ಪದ್ಧತಿ ನಿಂತಿದೆ. ಆದರೆ, ವೇಶ್ಯಾವಾಟಿಕೆ ಬೇರೆ ಬೇರೆ ಸ್ವರೂಪಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಚಾಲನೆಯಲ್ಲಿದೆ ಎಂದು ಗೋವಾ ವಾಸ್ಕೋದ ಅರ್ಜ್ ಸಂಸ್ಥೆಯ ನಿರ್ದೇಶಕ ಅರುಣ ಪಾಂಡೆ ಹೇಳಿದರು.ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ‘ಅರ್ಜ್’ದೊಳಗಿನ ದಿನಗಳು ಕೃತಿ ಲೋಕಾರ್ಪಣೆಯಲ್ಲಿ ಅವರು ಮಾತನಾಡಿ, ಗೋವಾದಲ್ಲಿ ಪ್ರತಿನಿತ್ಯ ಕೋಟ್ಯಂತರ ರೂಪಾಯಿಗಳ ವ್ಯವಹಾರ ನಡೆಯುತ್ತಿದೆ. ಬಹುದೊಡ್ಡ ಜಾಲದಿಂದ ಇಂದಿಗೂ ಅವ್ಯಾಹತವಾಗಿ ಈ ವೃತ್ತಿಯು ನಡೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಅಥಣಿಯ ವಿಮೋಚನಾ ಸಂಸ್ಥೆಯ ಅಧ್ಯಕ್ಷ ಬಿ.ಎಲ್. ಪಾಟೀಲ ಮಾತನಾಡಿ, ಡಾ. ರೂಪೇಶ ಪಾಟ್ಕರ ಅವರು ಮರಾಠಿಯಲ್ಲಿ ಬರೆದಿರುವ ‘ಅರ್ಜ್ ಮಧಲೆ ದಿವಸ್’ ಈ ಕೃತಿಯನ್ನು ಡಾ. ಸಂಜೀವ ಕುಲಕರ್ಣಿ ಕನ್ನಡದಲ್ಲಿ ಸಮರ್ಥವಾಗಿ ಅನುವಾದಿಸಿದ್ದಾರೆ ಎಂದರು.ಮೂಲ ಕೃತಿಯ ಲೇಖಕ ಮನೋರೋಗ ತಜ್ಞ ಡಾ. ರೂಪೇಶ ಪಾಟ್ಕರ ಮಾತನಾಡಿ, ಅನೇಕರು ಸೂಳೆಗಾರಿಕೆ ಎಂಬುದು ಜಗತ್ತಿನ ಅತ್ಯಂತ ಹಳೆಯ ವೃತ್ತಿ ಎಂದು ವ್ಯಾಖ್ಯಾನಿಸುತ್ತಾರೆ. ಆದರೆ, ನಿಜವಾಗಿಯೂ ಇದು ಜಗತ್ತಿನ ಅತ್ಯಂತ ಹಳೆಯ ಶೋಷಣೆಯ ಪದ್ಧತಿ. ಯಾವ ಮಹಿಳೆಯೂ ಸ್ವ-ಇಚ್ಛೆಯಿಂದ ಸೂಳೆಗಾರಿಕೆಯನ್ನು ಸ್ವೀಕರಿಸುವುದಿಲ್ಲ. ಬಡತನ ಹಾಗೂ ಇತರ ದೌರ್ಬಲ್ಯಗಳ ಲಾಭ ಪಡೆದು ದಲಿತ ಮಹಿಳೆಯರನ್ನು ಈ ದಂಧೆಯಲ್ಲಿ ತೊಡಗಿಸಲಾಗುತ್ತದೆ ಎಂದು ಹೇಳಿದರು.
ಅನುವಾದಕರಾದ ಡಾ. ಸಂಜೀವ ಕುಲಕರ್ಣಿ, ದೇವದಾಸಿ ಪದ್ಧತಿಯು ಬಹುಮಟ್ಟಿಗೆ ಕರ್ನಾಟಕದಲ್ಲಿಯೇ ಜೀವಂತವಾಗಿದ್ದು, ಗೋವಾ, ಮುಂಬೈ ಮುಂತಾದ ಕಡೆಗಳಲ್ಲಿ ಹದಿಹರೆಯದ ತರುಣಿಯರನ್ನು ಮುತ್ತು ಕಟ್ಟಿ ವೇಶ್ಯಾವಾಟಿಕೆಯಲ್ಲಿ ಕರೆದೊಯ್ಯಲಾಗುತ್ತದೆ. ಈ ಕೃತಿಯಲ್ಲಿ ಇಂತಹ ತರುಣಿಯರ ಅನೇಕ ಹೃದಯ ವಿದ್ರಾವಕ ಬದುಕಿನ ವಿವರಗಳು ದಾಖಲಾಗಿದೆ. ಧರ್ಮವನ್ನು ಅತ್ಯಂತ ತಪ್ಪಾಗಿ ಅರ್ಥೈಸಿ, ಪುರುಷ ವರ್ಗವು ಮಹಿಳೆಯರನ್ನು ಹೀನಾಯವಾಗಿ ಶೋಷಿಸುತ್ತಿದೆ ಎಂದರು.ವಿಶ್ವೇಶ್ವರಿ ಹಿರೇಮಠ, ಶಂಕರ ಹಲಗತ್ತಿ, ಬಸವಪ್ರಭು ಹೊಸಕೇರಿ, ವೀರಣ್ಣ ಒಡ್ಡೀನ, ಡಾ. ಜಿನದತ್ತ ಹಡಗಲಿ, ಪ್ರೊ. ನಾಡಗೌಡ, ಶ್ರೀನಿವಾಸ ವಾಡಪ್ಪಿ ಮತ್ತಿತರರು ಇದ್ದರು.