ನಕಲಿ ಮತದಾನ ಆರೋಪ, ಕಾಂಗ್ರೆಸ್‌ ಕಚೇರಿ ಎದುರು ಬಿಜೆಪಿ ಪ್ರತಿಭಟನೆ

KannadaprabhaNewsNetwork |  
Published : Oct 27, 2026, 02:15 AM IST
26ಎಚ್‌ವಿಆರ್‌1, 1ಎ | Kannada Prabha

ಸಾರಾಂಶ

ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ಮತದಾನದ ವೇಳೆ ಸಚಿವ ರುದ್ರಪ್ಪ ಲಮಾಣಿ ಎದುರಲ್ಲೇ ಕಾಂಗ್ರೆಸ್‌ನಿಂದ ವೋಟ್‌ ಚೋರಿಯಾಗಿದ್ದು, ತಕ್ಷಣ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ ಕಚೇರಿಗೆ ಮುತ್ತಿಗೆ ಹಾಕಿ ಸೋಮವಾರ ಪ್ರತಿಭಟನೆ ನಡೆಸಿದರು.

ಹಾವೇರಿ:ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ಮತದಾನದ ವೇಳೆ ಸಚಿವ ರುದ್ರಪ್ಪ ಲಮಾಣಿ ಎದುರಲ್ಲೇ ಕಾಂಗ್ರೆಸ್‌ನಿಂದ ವೋಟ್‌ ಚೋರಿಯಾಗಿದ್ದು, ತಕ್ಷಣ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ ಕಚೇರಿಗೆ ಮುತ್ತಿಗೆ ಹಾಕಿ ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ಜೆ.ಎಚ್‌. ಪಟೇಲ್ ವೃತ್ತದಿಂದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸುತ್ತ ಸಾಗಿದರು. ಮುನ್ಸಿಪಲ್‌ ಹೈಸ್ಕೂಲ್‌ ಮೈದಾನದ ಮೂಲಕ ಸಾಗುತ್ತಿದ್ದ ಮೆರವಣಿಗೆ ಸಚಿವ ರುದ್ರಪ್ಪ ಲಮಾಣಿ ನಿವಾಸದತ್ತ ತೆರಳಲು ಮುಂದಾದರು. ತಹಸೀಲ್ದಾರ್‌ ನಿವಾಸದ ಎದುರು ಈ ವೇಳೆ ಹೈಡ್ರಾಮಾ ನಡೆಯಿತು. ಪೊಲೀಸರು ಇದನ್ನು ತಡೆಯಲು ಮುಂದಾದಾಗ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ತಳ್ಳಾಟ, ನೂಕಾಟ ನಡೆಯಿತು. ಬಳಿಕ ಕಾಂಗ್ರೆಸ್ ಜಿಲ್ಲಾ ಕಚೇರಿಯತ್ತ ಪಾದಯಾತ್ರೆ ನಡೆಸಿದ ಬಿಜೆಪಿ ಕಾರ್ಯಕರ್ತರು ಬ್ಯಾರಿಕೇಡ್‌ಗಳನ್ನು ತಳ್ಳಿ ಒಳನುಗ್ಗಲು ಯತ್ನಿಸಿದರು. ಈ ವೇಳೆ ಕಚೇರಿ ಎದುರು ಗದ್ದಲ ಉಂಟಾಯಿತು.

ಸಚಿವರು ರಾಜೀನಾಮೆ ನೀಡಲಿ: ಕಾಂಗ್ರೆಸ್‌ ಕಚೇರಿ ಎದುರು ಜಮಾಯಿಸಿದ ಕಾರ್ಯಕರ್ತರನ್ನು ಉದ್ದೇಶಿಸಿದ ಮಾತನಾಡಿದ ಮಾಜಿ ಶಾಸಕ ಅರುಣಕುಮಾರ ಪೂಜಾರ, ಮತದಾನ ಅಕ್ರಮದ ಆರೋಪದ ಕುರಿತು ಕಾಂಗ್ರೆಸ್ ನಾಯಕರು ನಾಚಿಕೆ ಪಡಬೇಕು. ಪ್ರಕರಣದಲ್ಲಿ ನ್ಯಾಯ ದೊರೆಯುವವರೆಗೆ ಹೋರಾಟ ಮುಂದುವರಿಸಲಾಗುವುದು. ಅಧಿಕಾರಿಗಳು ಮತ್ತು ಪೊಲೀಸರು ಯಾರದೋ ಕೈಗೊಂಬೆಗಳಂತೆ ವರ್ತಿಸುತ್ತಿದ್ದಾರೆ. ಮತಗಳ್ಳತನ ಕಾಂಗ್ರೆಸ್‌ನ ಕಾಯಂ ಕೆಲಸವಾಗಿದೆ. ಸಚಿವರೇ ಮಹಿಳೆಯನ್ನು ಕರೆದುಕೊಂಡು ಹೋಗಿ ಮತ ಹಾಕಿಸಿದ್ದಾರೆ ಎಂಬ ಆರೋಪವಿದೆ. ಮಹಿಳೆಯನ್ನು ಬಳಸಿಕೊಂಡು ಮತದಾನ ಅಕ್ರಮ ಎಸಗಿರುವುದು ನಾಚಿಕೆಗೇಡಿನ ಸಂಗತಿ. ಸಚಿವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಮತಗಟ್ಟೆ ಸಂಖ್ಯೆ 85ರಲ್ಲಿ ನಡೆದಿರುವುದಾಗಿ ಆರೋಪಿಸಲಾಗಿರುವ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಿ ಸತ್ಯಾಂಶವನ್ನು ಬಹಿರಂಗಪಡಿಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪ್ರಕರಣದಲ್ಲಿ ಸಂಬಂಧಪಟ್ಟವರ ಹೊಣೆಗಾರಿಕೆಯನ್ನು ನಿಗದಿಪಡಿಸಬೇಕು ಎಂದು ಬಿಜೆಪಿ ಮುಖಂಡರು ಒತ್ತಾಯಿಸಿದರು.

ಸಚಿವರ ಎದುರೇ ಮತಗಳ್ಳತನ: ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಶೋಭಾ ನಿಸ್ಸೀಮಗೌಡ ಮಾತನಾಡಿ, ಸಚಿವರ ಎದುರೇ ಮತದಾನ ಅಕ್ರಮ ನಡೆದಿದೆ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ವಿರುದ್ಧ ಹೋರಾಟ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಬಗ್ಗೆ ಉತ್ತರಿಸಬೇಕು. ಇಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಪತ್ನಿಯ ಹೆಸರಿನಲ್ಲಿಯೇ ಮತದಾನ ಅಕ್ರಮ ನಡೆದಿದೆ. ಪ್ರಕರಣದಲ್ಲಿ ಸಂಬಂಧಪಟ್ಟ ಅಧಿಕಾರಿಯನ್ನು ಬಲಿಪಶು ಮಾಡಲಾಗಿದೆ. ಕಾಂಗ್ರೆಸ್‌ ಸರ್ಕಾರದಲ್ಲಿ ಅಧಿಕಾರಿಗಳಿಗೂ ರಕ್ಷಣೆ ಇಲ್ಲವಾಗಿದೆ. ಇವರು ಮಾಡಿದ ತಪ್ಪಿಗೆ ಅಧಿಕಾರಿಯನ್ನು ಅಮಾನತು ಮಾಡಿದ್ದಾರೆ. ಮಹಿಳೆಯನ್ನು ಬಳಸಿಕೊಂಡು ಮತಗಳ್ಳತನ ಮಾಡಿಸಿರುವ ಆರೋಪದ ಕುರಿತು ತನಿಖೆಯಾಗಬೇಕು. ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮತ ಕಳ್ಳತನದ ಮೂಲಕ ಅಧಿಕಾರ ಹಿಡಿಯುತ್ತ ಬಂದಿರುವ ಇತಿಹಾಸವೇ ಇದೆ. ಈ ರೀತಿ ಕಳ್ಳ ಮತದಾನ ಮಾಡಲೆಂದೇ ಇವರು ಬ್ಯಾಲೆಟ್‌ ಮತದಾನ ಬೇಕು ಎನ್ನುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಿವಿಧ ಕಡೆ ಅಧಿಕಾರ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಎಸ್‌ಐಆರ್‌ ವಿರುದ್ಧ ಹೋರಾಟ ನಡೆಸಲಾಗುತ್ತಿದೆ ಎಂದು ಟೀಕಿಸಿದರು.

“ಪರಿಶಿಷ್ಟ ಪಂಗಡದ ಮಹಿಳೆಯನ್ನು ಬಳಸಿಕೊಂಡು ಮತದಾನ ಅಕ್ರಮ ಎಸಗಿರುವ ಆರೋಪ ಗಂಭೀರವಾಗಿದೆ. ಅಧಿಕಾರ ದುರುಪಯೋಗ ಮಾಡಿಕೊಂಡು ನಕಲಿ ಮತದಾನ ಮಾಡಿಸುವ ಪ್ರಯತ್ನ ನಡೆದಿದೆ. ಇಂತಹ ಹುನ್ನಾರಗಳು ನಡೆಯಲು ಬಿಡುವುದಿಲ್ಲ. ಪ್ರಕರಣದಲ್ಲಿ ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಸುತ್ತೇವೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಪ್ರಮುಖರಾದ ಗವಿಸಿದ್ದ ದ್ಯಾಮಣ್ಣನವರ, ನಂಜುಂಡೇಶ ಕಳ್ಳೇರ, ಕಿರಣ ಕೊಳ್ಳಿ, ರಾಮು ಮಾಳಗಿ, ಸಂತೋಷ ಆಲದಕಟ್ಟಿ, ನಿರಂಜನ ಹೇರೂರ, ಚೆನ್ನಮ್ಮ ಬ್ಯಾಡಗಿ, ರೋಹಿಣಿ ಪಾಟೀಲ, ವಿಜಯಕುಮಾರ ಚಿನ್ನಿಕಟ್ಟಿ, ಕಿರಣ ಕೋಣನವರ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಾತಿ-ಧರ್ಮ ಮೀರಿದ ಮಾನವೀಯತೆ ಬೆಳೆಸೋಣ: ಲಾಡ್ಲೆಮಷಾಕ್ ದೋಟಿಹಾಳ
ರಾಮಾಯಣ ಮೂಲಕ ಅಮೂಲ್ಯ ಸಂದೇಶ ನೀಡಿದ ವಾಲ್ಮೀಕಿ: ಪರಣ್ಣ ಮುನವಳ್ಳಿ