ಕುಷ್ಟಗಿ ತಾಲೂಕಿನ ಕೇಸೂರು ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ನಡೆಯಿತು. ವಾಲ್ಮೀಕಿ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಲು ಗಣ್ಯರು ಕರೆ ನೀಡಿದರು.

ಕುಷ್ಟಗಿ: ಜಾತಿ-ಧರ್ಮದ ಭೇದ-ಭಾವ ಮರೆತು ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸಹೋದರತ್ವದಿಂದ ಬದುಕುವ ಮೂಲಕ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು ಎಂದು ಕಾಂಗ್ರೆಸ್ ಯುವ ಮುಖಂಡ ಲಾಡ್ಲೆಮಷಾಕ್ ದೋಟಿಹಾಳ ಹೇಳಿದರು.

ತಾಲೂಕಿನ ಕೇಸೂರು ಗ್ರಾಮದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜಕ್ಕೆ ದಾರಿದೀಪವಾದ ಮಹಾತ್ಮರನ್ನು ಯಾವುದೇ ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತಗೊಳಿಸದೆ, ಅವರು ಸಾರಿದ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಮಹರ್ಷಿ ವಾಲ್ಮೀಕಿ ರಾಮಾಯಣ ಮಹಾಕಾವ್ಯ ರಚಿಸುವ ಮೂಲಕ ಜಗತ್ತಿಗೆ ಸತ್ಯ, ಧರ್ಮ, ನ್ಯಾಯ ಹಾಗೂ ಮಾನವೀಯತೆಯ ಮಹತ್ವ ಸಾರಿದ್ದಾರೆ. ಅವರ ಜೀವನ ಮತ್ತು ಸಾಹಿತ್ಯವು ಸಮಾಜಕ್ಕೆ ಉತ್ತಮ ಮಾರ್ಗದರ್ಶನ ನೀಡುತ್ತವೆ. ಮಹಾತ್ಮರ ಜಯಂತಿಗಳನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ, ಅವರ ತತ್ವಾದರ್ಶಗಳನ್ನು ನಮ್ಮ ನಿತ್ಯಜೀವನದಲ್ಲಿ ಪಾಲಿಸಿದಾಗ ಮಾತ್ರ ಆಚರಣೆ ಸಾರ್ಥಕವಾಗುತ್ತದೆ ಎಂದರು.

ಬಸವಣ್ಣನವರು ಅನುಭವ ಮಂಟಪದ ಮೂಲಕ ಸಮಾನತೆ ಮತ್ತು ಕಾಯಕದ ಮಹತ್ವವನ್ನು ಸಾರಿದರೆ, ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಜಾತಿಭೇದದ ವಿರುದ್ಧ ಧ್ವನಿ ಎತ್ತಿದರು. ಪ್ರವಾದಿ ಮೊಹಮ್ಮದ್ ಪೈಗಂಬರ್ ಹಾಗೂ ಸಂತ ಸೇವಾಲಾಲ ಸೇರಿದಂತೆ ಅನೇಕ ಮಹನೀಯರು ಮಾನವೀಯತೆ, ಸಹೋದರತ್ವ ಮತ್ತು ಸೌಹಾರ್ದದ ಸಂದೇಶ ನೀಡಿದ್ದಾರೆ. ಮಹನೀಯರು ಬೇರೆ ಬೇರೆ ಕಾಲಘಟ್ಟಗಳಲ್ಲಿ ಬದುಕಿದ್ದರೂ, ಅವರ ಸಂದೇಶಗಳಲ್ಲಿ ಮಾನವೀಯ ಮೌಲ್ಯಗಳಿಗೆ ವಿಶೇಷ ಸ್ಥಾನವಿದೆ. ಹೀಗಾಗಿ ಅವರ ಆದರ್ಶಗಳನ್ನು ಗೌರವಿಸುವುದು ಮತ್ತು ಪಾಲಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ಎಪಿಎಂಸಿ ಮಾಜಿ ನಿರ್ದೇಶಕ ಹನಮಂತರಾವ್ ದೇಸಾಯಿ ಮಾತನಾಡಿ, ಮಹರ್ಷಿ ವಾಲ್ಮೀಕಿ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿವೆ. ಅವರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾನತೆ, ಮಾನವೀಯತೆ ಮತ್ತು ಪರಸ್ಪರ ಗೌರವದ ಮೌಲ್ಯಗಳನ್ನು ಬೆಳೆಸಬೇಕು ಎಂದರು.

ಉಮೇಶ್ ಮಡಿವಾಳರ, ಯಂಕಪ್ಪ ಚವ್ಹಾಣ, ಮಹೇಶ್ ಕಾಳಗಿ, ಶಾಮೀದಸಾಬ್ ಮುಜಾವರ, ಬಸವರಾಜ್ ಶೆಟ್ಟರ್, ಮುತ್ತಣ್ಣ ಗೊರ್ಜನಾಳ, ಶರಣಪ್ಪ ಗೊರ್ಜನಾಳ, ನಾಗರಾಜ್ ಅಡವಿಬಾವಿ, ಸಂಗಯ್ಯ ಮಳಿಮಠ, ಮುತ್ತಣ್ಣ ಗೋತಗಿ, ಬಸವರಾಜ ಜಲಕಮಲದಿನ್ನಿ, ವಿಷ್ಣು ಅಂಗಡಿ, ಶಶಿಧರ ದೋಟಿಹಾಳ, ಈರನಗೌಡ ಟೆಂಗುಂಟಿ ಉಪಸ್ಥಿತರಿದ್ದರು.