ರಬಕವಿ-ಬನಹಟ್ಟಿ ತಾಲೂಕಿನ ಹಳಿಂಗಳಿ ಗ್ರಾಮದ ಭದ್ರಗಿರಿಯ ಆಚಾರ್ಯ ರತ್ನ ೧೦೮ ಕುಲರತ್ನಭೂಷಣ ಮುನಿ ಮಹಾರಾಜರು ಕಬ್ಬಿಗೆ ಸೂಕ್ತ ಬೆಲೆ ನಿಗದಿಗಾಗಿ ಅನ್ನದಾತರು ನಡೆಸುತ್ತಿರುವ ಹೋರಾಟಕ್ಕೆ ಯಶ ಸಿಗಲೆಂದು ೬ ದಿನಗಳಿಂದ ಅನ್ನ, ನೀರು ಸೇವಿಸದೇ ಹೋರಾಟಕ್ಕೆ ಬೆಂಬಲ ಸೂಚಿಸಿದ್ದು, ಸರ್ಕಾರ ಕೂಡಲೇ ಅನ್ನದಾತರ ಮನವಿಗೆ ಸ್ಪಂದಿಸಿ ಬೇಡಿಕೆ ಈಡೇರಿಸಲು ಮನವಿ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ತಾಲೂಕಿನ ಹಳಿಂಗಳಿ ಗ್ರಾಮದ ಭದ್ರಗಿರಿಯ ಆಚಾರ್ಯ ರತ್ನ ೧೦೮ ಕುಲರತ್ನಭೂಷಣ ಮುನಿ ಮಹಾರಾಜರು ಕಬ್ಬಿಗೆ ಸೂಕ್ತ ಬೆಲೆ ನಿಗದಿಗಾಗಿ ಅನ್ನದಾತರು ನಡೆಸುತ್ತಿರುವ ಹೋರಾಟಕ್ಕೆ ಯಶ ಸಿಗಲೆಂದು ೬ ದಿನಗಳಿಂದ ಅನ್ನ, ನೀರು ಸೇವಿಸದೇ ಹೋರಾಟಕ್ಕೆ ಬೆಂಬಲ ಸೂಚಿಸಿದ್ದು, ಸರ್ಕಾರ ಕೂಡಲೇ ಅನ್ನದಾತರ ಮನವಿಗೆ ಸ್ಪಂದಿಸಿ ಬೇಡಿಕೆ ಈಡೇರಿಸಲು ಮನವಿ ಮಾಡಿದ್ದಾರೆ.ಕಳೆದ ಹಲವು ದಿನಗಳಿಂದ ಅನ್ನದಾತರು ಕಬ್ಬಿನ ಬೆಳೆಗೆ ಎಂಎಸ್ಪಿ ದರ ನಿಗದಿಗಾಗಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಹಾಗೂ ಪಾದಯಾತ್ರೆ ಪ್ರಸ್ತಾಪಿಸಿ ಪತ್ರಿಕೆಯೊಂದಿಗೆ ಮಾತನಾಡಿದ ಶ್ರೀಗಳು, ಕೃಷಿ ನಮ್ಮ ಸನಾತನ ಸಂಸ್ಕೃತಿಯ ಪ್ರತೀಕ. ಕೃಷಿ ಉಳಿದರೆ ಮಾತ್ರ ಋಷಿ ಮುನಿಗಳು ನಡೆದಾಡಿದ ಪಾವನ ಭೂಮಿ ಭಾರತ ಉಳಿಯಲು ಸಾಧ್ಯ. ಕೃಷಿ ಪ್ರಧಾನ ನಮ್ಮ ರಾಷ್ಟ್ರದಲ್ಲಿ ಎಲ್ಲರಿಗೂ ಅನ್ನ ನೀಡುವ ಅನ್ನದಾತ ಬೆಲೆಗಾಗಿ ರಸ್ತೆಯಲ್ಲಿ ಭಿಕ್ಷೆ ಬೇಡುವುದು ನಮ್ಮ ಸಂಸ್ಕೃತಿಗೆ ಶೋಭಿತವಲ್ಲ, ಉಳುವವನು ಸಂಪನ್ನನಾಗಿದ್ದಲ್ಲಿ ಮಾತ್ರ ಉಣ್ಣುವವರು ಸುಖವಾಗಿರಲು ಸಾಧ್ಯ, ಗಗನಕ್ಕೇರಿದ ರಸಗೊಬ್ಬರ ಹಾಗೂ ಇಂಧನದ ಬೆಲೆಯಿಂದ ರೈತ ತನ್ನ ಉಳಿಮೆಯಲ್ಲಿ ಉಳಿಸುವುದಕ್ಕಿಂತ ಸಾಲವೇ ಅಧಿಕವಾಗಿದ್ದು, ಸಾಲದಿಂದ ಶೂಲಕ್ಕೆ ರೈತರನ್ನು ತಳ್ಳುವುದ ಬದಲಾಗಿ ರೈತರು ಅಪೇಕ್ಷಿತ ಬೆಂಬಲ ದರ ನೀಡಿ ರೈತರಲ್ಲಿ ಉಳಿಮೆ ಕುರಿತು ಆತ್ಮಸ್ಥೈರ್ಯ ಕಳೆಗುಂದದಂತೆ ಪ್ರೇರೇಪಿಸುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಿದೆ. ಕೂಡಲೇ ರೈತರ ಮನವಿಗೆ ಸ್ಪಂದಿಸಿ ಬೀದಿಯಲ್ಲಿ ಬಸವಳಿಯುತ್ತಿರುವ ಅನ್ನದಾತರ ಬದುಕಿಗೆ ಭದ್ರ ಬುನಾದಿ ಕಲ್ಪಿಸಬೇಕೆಂದು ಆಗ್ರಹಿಸಿದ ಅವರು ಅನ್ನದಾತರ ಉಳಿವಿಗಾಗಿ ಸಮಾಧಿ ಮರಣವನ್ನೂ ಕೂಡ ಲೆಕ್ಕಿಸದೇ ಉಪವಾಸ ಮುಂದುವರೆಸುವುದಾಗಿ ತಿಳಿಸಿದರು.
ಒಂದು ದಿನದ ಆಹಾರ ತ್ಯಜಿಸಿದ ಶ್ರಾವಕರು : ಮುನಿಗಳು೬ ದಿನಗಳಿಂದ ಆಹಾರ ತ್ಯಜಿಸಿದ್ದು ಮುನಿಗಳ ಸಂಕಲ್ಪ ಸಕಾರವಾಗಲಿ ಹಾಗೂ ಅನ್ನದಾತರ ಹೋರಾಟಕ್ಕೆ ಜಯವಾಗಲೆಂದು ಶ್ರಾವಕರು ಒಂದು ದಿನದ ಉಪವಾಸ ಕೈಗೊಳ್ಳುವುದರೊಂದಿಗೆ ಉಳುವವನು ಅಳದಿರಲೆಂದು ಪ್ರಾರ್ಥಿಸಿದ್ದಾರೆ.ಅನ್ನದಾತರು ನಡೆಸುತ್ತಿರುವ ಹೋರಾಟಕ್ಕೆ ಜಯವಾಗಲಿ ಕೃಷಿ ಪ್ರಧಾನ ನಮ್ಮ ದೇಶದಲ್ಲಿ ಉಳುವ ಯೋಗಿ ಅಳದಿರುವಂತಾಗಲಿ, ಕೋಟಿ ವಿದ್ಯೆಗಿಂತ ಮೇಟಿವಿದ್ಯೆ ಮೇಲೆಂದು ಸರ್ವಕಾಲಿಕ ಸತ್ಯ ಸಕಾರಾವಾಗಲಿ. ಹೋರಾಟಕ್ಕೆ ಯಶ ಸಿಗಲೆಂದು ಶ್ರಾವಕಿಯರು ಸೇರಿದಂತೆ ಸಕಲ ಸದ್ಭಕ್ತರು ಪ್ರಾರ್ಥಿಸುವುದರೊಂದಿಗೆ ಅನ್ನದಾತರದೊಂದಿಗೆ ಸದಾ ಬೆಂಬಲವಾಗಿರುವುದಾಗಿ ವಾಗ್ದಾನ ಮಾಡಿದರು.
ಕೃಷಿಕರು ಜಗತ್ತಿನ ನಡೆದಾಡುವ ಕಾಯಕ ಸಂತರಾಗಿದ್ದು, ಜಗತ್ತಿನ ಹಸಿವನ್ನು ನೀಗಿಸುವ ರೈತ ಬೆಲೆಗಾಗಿ ರಸ್ತೆಯಲ್ಲಿ ಭಿಕ್ಷೆ ಬೇಡುತ್ತಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವ ಸಂಗತಿ, ಚಿನ್ನಕ್ಕೆ ನೀಡುವ ಬೆಲೆಯನ್ನು ಅನ್ನಕ್ಕೆ ನೀಡದಿರುವುದು ದೌರ್ಭಾಗ್ಯ. ಕೂಡಲೇ ಸರ್ಕಾರ ರೈತರ ಮನವಿಗೆ ಸ್ಪಂದಿಸಿ ಸೂಕ್ತ ಬೆಂಬಲ ಬೆಲೆ ನೀಡಬೇಕು.- ಆಚಾರ್ಯ ಕುಲರತ್ನಭೂಷಣ ಮಹಾರಾಜರು, ಭದ್ರಗಿರಿ ಬೆಟ್ಟ ಹಳಿಂಗಳಿ