ಕನ್ನಡಪ್ರಭ ವಾರ್ತೆ ವಿಜಯಪುರ ಮಹರ್ಷಿ ವಾಲ್ಮೀಕಿ ಅವರು ಆದಿಕವಿಯಾಗಿ ರಾಮಾಯಣದಂತಹ ಮಹಾನ್ ಕಾವ್ಯ ರಚಿಸುವ ಮೂಲಕ ಭಾರತೀಯ ಸಾಹಿತ್ಯ, ಸಂಸ್ಕೃತಿ ಹಾಗೂ ಪರಂಪರೆಗೆ ಅಪಾರ ಕೊಡುಗೆ ನೀಡಿದ್ದಾರೆ. ರಾಮಾಯಣದಲ್ಲಿನ ಆದರ್ಶಗಳು, ಜೀವನ ಮೌಲ್ಯಗಳು ಹಾಗೂ ಮಾನವೀಯ ಸಂದೇಶಗಳು ಇಂದಿಗೂ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿವೆ ಎಂದು ನಾಗಠಾಣ ಶಾಸಕ ವಿಠ್ಠಲ ಕಟಕಧೊಂಡ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಮಹರ್ಷಿ ವಾಲ್ಮೀಕಿ ಅವರು ಆದಿಕವಿಯಾಗಿ ರಾಮಾಯಣದಂತಹ ಮಹಾನ್ ಕಾವ್ಯ ರಚಿಸುವ ಮೂಲಕ ಭಾರತೀಯ ಸಾಹಿತ್ಯ, ಸಂಸ್ಕೃತಿ ಹಾಗೂ ಪರಂಪರೆಗೆ ಅಪಾರ ಕೊಡುಗೆ ನೀಡಿದ್ದಾರೆ. ರಾಮಾಯಣದಲ್ಲಿನ ಆದರ್ಶಗಳು, ಜೀವನ ಮೌಲ್ಯಗಳು ಹಾಗೂ ಮಾನವೀಯ ಸಂದೇಶಗಳು ಇಂದಿಗೂ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿವೆ ಎಂದು ನಾಗಠಾಣ ಶಾಸಕ ವಿಠ್ಠಲ ಕಟಕಧೊಂಡ ಹೇಳಿದರು.ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಹಾಗೂ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ಆಯೋಜಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಹರ್ಷಿ ವಾಲ್ಮೀಕಿ ವಿರಚಿತ ರಾಮಾಯಣವು ಭಾರತೀಯ ಸಾಹಿತ್ಯ ಲೋಕದ ಅಮೂಲ್ಯ ಕೃತಿಯಾಗಿದೆ. ಇದು ಕೇವಲ ಮಹಾಕಾವ್ಯವಲ್ಲ. ಮಾನವೀಯ ಸಂಬಂಧಗಳು, ಕರ್ತವ್ಯನಿಷ್ಠೆ, ತ್ಯಾಗ, ಸತ್ಯ, ಧರ್ಮ, ಸಹೋದರತ್ವ ಹಾಗೂ ಆದರ್ಶ ಜೀವನದ ಮೌಲ್ಯಗಳನ್ನು ಪರಿಚಯಿಸುವ ಮಹಾನ್ ಗ್ರಂಥವಾಗಿದೆ ಎಂದು ಸ್ಮರಿಸಿದರು.
ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಗಂಗಾಧರ ಸಂಬಣ್ಣಿ ಮಾತನಾಡಿ, ಶ್ರದ್ಧೆ, ಆಸಕ್ತಿ ಮತ್ತು ಪರಿಶ್ರಮದ ಮೂಲಕ ಮಹಾನ್ ಸಾಧಕನಾಗಲು ಸಾಧ್ಯವಿದೆ. ಯುವಕರು ತಮ್ಮ ಗುರಿಯನ್ನು ಸ್ಪಷ್ಟವಾಗಿ ನಿರ್ಧರಿಸಿಕೊಂಡು ಅದನ್ನು ಸಾಧಿಸಲು ನಿರಂತರವಾಗಿ ಪ್ರಯತ್ನಿಸಬೇಕು ಎಂದರು.ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ, ವಿಜಯಪುರ ಉಪವಿಭಾಗಾಧಿಕಾರಿ ಜುಫಿಶಾನ್ ಹಕ್, ಪದ್ಮಾವತಿ ಸಿಂಗಾರಿ ಮಾತನಾಡಿದರು. ಏಕಲವ್ಯನ ಕಥೆಯನ್ನು ಆಧರಿಸಿದ ಸೂತ್ರದ ಗೊಂಬೆಗಳ ನಾಟಕ ಪ್ರದರ್ಶಿಸಲಾಯಿತು. ವಿವಿಧ ವೇಷಭೂಷಣಗಳನ್ನು ಧರಿಸಿದ ಮಕ್ಕಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮಹರ್ಷಿ ವಾಲ್ಮೀಕಿ ರಾಜ್ಯ ಪ್ರಶಸ್ತಿ ಪುರಸ್ಕೃತ ಸಾಧಕರನ್ನೂ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಸಂತ ಹೊನಮೊಡೆ, ಜಿಪಂ ಉಪಕಾರ್ಯದರ್ಶಿ ಪ್ರಕಾಶ ವಡ್ಡರ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೋತದಾರ, ಡಿವೈಎಸ್ಪಿ ನಾಗರಾಜ, ವಾಲ್ಮೀಕಿ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಎಸ್.ಎಂ.ಪಾಟೀಲ, ಮುಖಂಡರಾದ ಮಳಸಿದ್ದ ನಾಯ್ಕೊಡಿ, ಅಡಿವೆಪ್ಪ ಸಾಲಗಲ್, ರವಿ ಬಿಸನಾಳ, ಮಲ್ಲಿಕಾರ್ಜುನ ಬಟಗಿ , ಸುರೇಶ ಘೋಣಸಗಿ, ಸಿದ್ದು ರಾಯಣ್ಣವರ, ರವೀಂದ್ರ ಬಂಥನಾಳ, ವಿದ್ಯಾವತಿ ಅಂಕಲಗಿ, ಸೋಮು ರಣದೇವಿ ಸೇರಿದಂತೆ ಸಿಬ್ಬಂದಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.ವಾಲ್ಮೀಕಿ ಭಾವಚಿತ್ರ ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರದ ಮೆರವಣಿಗೆಗೆ ಲೋಕಸಭಾ ಸದಸ್ಯ ರಮೇಶ ಜಿಗಜಿಣಗಿ ಹಾಗೂ ವಿವಿಧ ಗಣ್ಯರು ಚಾಲನೆ ನೀಡಿದರು. ಮೆರವಣಿಗೆಯು ನಗರದ ಪ್ರಮುಖ ವೃತ್ತಗಳ ಮೂಲಕ ಸಾಗಿಬಂದು ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಸಮಾವೇಶಗೊಂಡಿತು