ಹಿಂದೂ ರುದ್ರಭೂಮಿಯಲ್ಲಿ ಮಲಮೂತ್ರದಿಂದ ಉಂಟಾಗಿರುವ ಅನೈರ್ಮಲ್ಯ ಹಾಗೂ ದುರ್ವಾಸನೆಯಿಂದ ಬೇಸತ್ತ ಹಿಂದೂ ಕಾರ್ಯಕರ್ತರು ಸ್ವಯಂಪ್ರೇರಿತರಾಗಿ ಸ್ವಚ್ಛತಾ ಕಾರ್ಯ ಕೈಗೊಂಡು ಸಾಮಾಜಿಕ ಕಳಕಳಿ ಮೆರೆದರು.
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಹಿಂದೂ ರುದ್ರಭೂಮಿಯಲ್ಲಿ ಮಲಮೂತ್ರದಿಂದ ಉಂಟಾಗಿರುವ ಅನೈರ್ಮಲ್ಯ ಹಾಗೂ ದುರ್ವಾಸನೆಯಿಂದ ಬೇಸತ್ತ ಹಿಂದೂ ಕಾರ್ಯಕರ್ತರು ಸ್ವಯಂಪ್ರೇರಿತರಾಗಿ ಸ್ವಚ್ಛತಾ ಕಾರ್ಯ ಕೈಗೊಂಡು ಸಾಮಾಜಿಕ ಕಳಕಳಿ ಮೆರೆದರು. ರುದ್ರಭೂಮಿಯ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಲಮೂತ್ರ ಹರಡಿ ಅಸಹನೀಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಮೂಗು ಮುಚ್ಚಿಕೊಂಡೇ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕಾದ ಸ್ಥಿತಿಯಲ್ಲಿಯೂ ಯುವಕರು ಹಿಂದೆ ಸರಿಯದೆ ಶ್ರಮದಾನ ನಡೆಸಿದರು. ಸರ್ಕಾರದ ವಿವಿಧ ಯೋಜನೆಗಳ ಮೂಲಕ ಮನೆಗಳಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಲು ಅವಕಾಶಗಳಿದ್ದರೂ ಕೆಲವರು ಬಯಲು ಶೌಚ ಮಾಡುವುದನ್ನು ಮುಂದುವರಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಧಾರ್ಮಿಕ ನಂಬಿಕೆಯೊಂದಿಗೆ ಬೆಸೆದುಕೊಂಡಿರುವ ರುದ್ರಭೂಮಿಯ ಪಾವಿತ್ರ್ಯ ಹಾಗೂ ಸ್ವಚ್ಛತೆಗೆ ಧಕ್ಕೆಯಾಗುತ್ತಿರುವುದಕ್ಕೆ ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿದ್ದಾರೆ. ಬಯಲು ಶೌಚ ತಡೆಯಲು ಜನಜಾಗೃತಿ ಮೂಡಿಸುವುದರ ಜತೆಗೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ರುದ್ರಭೂಮಿಯ ಸ್ವಚ್ಛತೆ ನಿರಂತರವಾಗಿ ಕಾಪಾಡಲು ವ್ಯವಸ್ಥೆ ರೂಪಿಸಬೇಕು ಎಂದು ಕಾರ್ಯಕರ್ತರು ಸಂಬಂಧಪಟ್ಟ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.ಚಿತಾಗಾರದ ಮೇಲ್ಚಾವಣಿಯೂ ಸಂಪೂರ್ಣ ಹದಗೆಟ್ಟಿದ್ದು, ಅಂತ್ಯಸಂಸ್ಕಾರಕ್ಕೆ ಬರುವ ಸಾರ್ವಜನಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ ದುರಸ್ತಿ ಮತ್ತು ಮರುನಿರ್ಮಾಣಕ್ಕೆ ಅಧಿಕಾರಿಗಳು ಗಮನಹರಿಸಬೇಕಿದೆ. ರುದ್ರಭೂಮಿಯ ಸ್ವಚ್ಛತೆಯ ಜೊತೆಗೆ ಮೂಲಸೌಕರ್ಯಗಳ ಸುಧಾರಣೆಗೂ ಆದ್ಯತೆ ನೀಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಸ್ವಚ್ಛತಾ ಕಾರ್ಯದಲ್ಲಿ ಹಿಂದೂ ಸಂಘಟನೆ ಮುಖಂಡ ರವಿ ಜವಳಗಿ, ರಾಜೇಂದ್ರ ಮಿರ್ಜಿ, ಪ್ರಕಾಶ ಮರೆಗುದ್ದಿ, ಆನಂದ ಶಿರಗುಪ್ಪಿ, ರಾಘವೇಂದ್ರ ಮಾಳಗಿ, ಅರ್ಜುನ ಪವಾರ ಮಹಾಲಿಂಗ ಜಮಖಂಡಿ, ಭರತ ಕದ್ದಿಮನಿ, ಗಣಪತಿ ದೊಡ್ಡಮನಿ, ರಾಘು ಪವಾರ, ರಾಘು ಕಪರಟ್ಟಿ, ದಾನೇಶ ಡೊಂಬರ, ಶ್ರೀನಿಧಿ ಕುಲಕರ್ಣಿ, ರಾಘವೇಂದ್ರ ಶಿರೋಳ, ಬಸವರಾಜ ಮುರಾರಿ, ಅನಿಲ ಖವಾಶಿ, ರಿತಿಕ್ ಗೊಲ್ಲರ, ಪ್ರಜ್ವಲ ಯಾದವಾಡ, ಮಹಾದೇವ ಗೌಂಡಿ, ಮಹಾಲಿಂಗ ಡೊಂಬಳ ಸೇರಿ ಅನೇಕ ಕಾರ್ಯಕರ್ತರಿದ್ದರು.