ಹಾವೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿಯವರು 50 ಕಾಂಗ್ರೆಸ್ ಶಾಸಕರನ್ನು ಖರೀದಿ ಮಾಡುತ್ತಿದ್ದಾರೆ ಎಂದು ಆಧಾರರಹಿತ ಮಾತುಗಳನ್ನಾಡಿ ತಮ್ಮ ಮೇಲಿನ ಆಪಾದನೆ ಮತ್ತು ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಕಿಡಿಕಾರಿದರು.ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಒಬ್ಬ ರಾಜಕಾರಣಿ ತನ್ನ ಅಸ್ತಿತ್ವಕ್ಕೆ ಧಕ್ಕೆ ಬಂದಾಗ, ಆಧಾರರಹಿತ ಆರೋಪ ಮಾಡುತ್ತಿದ್ದಾರೆ. ಸಿಎಂ ಬಹಳ ಗೊಂದಲದಲ್ಲಿದ್ದು, ಹತಾಶರಾಗಿದ್ದಾರೆ. ಸಿದ್ದರಾಮಯ್ಯ ಅವರು ಮೂರೂವರೆ ವರ್ಷ ನಾನೇ ಸಿಎಂ ಅಂತಾರೆ, ಮತ್ತೊಂದು ಕಡೆ ನನಗೆ ಶಕ್ತಿ ಕೊಡಿ ಐದು ವರ್ಷ ಅಧಿಕಾರ ಪೂರ್ಣ ಮಾಡಬೇಕು ಎನ್ನುತ್ತಾರೆ. ಹೀಗಾಗಿ ಸಿದ್ದರಾಮಯ್ಯ ಗೊಂದಲದಲ್ಲಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ ಎಂದರು. ಸಿಎಂ ಜನಪರ ಆಡಳಿತ ನೀಡದೇ ಜನವಿರೋಧಿ ಆಡಳಿತ ಮಾಡಿ ಜನರನ್ನು ಸಂಕಷ್ಟಕ್ಕೆ ಒಡ್ಡಿದ್ದಾರೆ. ಮಳೆ, ಪ್ರವಾಹ ಬಂದು ರೈತರ ಬೆಳೆ ನಾಶವಾಗಿದೆ. ಯಾವುದೇ ಸರಿಯಾದ, ವೈಜ್ಞಾನಿಕ ಸಮೀಕ್ಷೆ ಕೂಡ ಆಗಿಲ್ಲ. ಬೇಕಾಬಿಟ್ಟಿ ಸಮೀಕ್ಷೆ ನಡೆದಿದೆ. ಈ ಸರ್ಕಾರದಲ್ಲಿ ಹೇಳೋರು, ಕೇಳೋರು ಇಲ್ಲವಾಗಿದೆ. ಇಡೀ ಸರ್ಕಾರ ಒಂದು ರೀತಿಯಲ್ಲಿ ಗೊಂದಲದಲ್ಲಿದೆ. ಇದೊಂದು ಯೂಟರ್ನ್ ಸರ್ಕಾರ ಎಂದು ಹರಿಹಾಯ್ದರು.ಮುಸಲ್ಮಾನರಿಗೆ ಶೇ.4ರಷ್ಟು ಗುತ್ತಿಗೆಯಲ್ಲಿ ಮೀಸಲಾತಿ ನೀಡುವ ಕುರಿತು ಫೈಲ್ ರೆಡಿ ಆಗಿ ಸಹಿ ಆಗಿದೆ. ಆದರೆ, ಮಾಧ್ಯಮಗಳಲ್ಲಿ ಈ ಕುರಿತು ವರದಿ ಆಗುತ್ತಿದ್ದಂತೆಯೇ ಅದಕ್ಕೆ ಸಹಿ ಆಗಿಲ್ಲ ಎನ್ನುತ್ತಿದ್ದಾರೆ. ಮುಡಾ ಪ್ರಕರಣದಲ್ಲಿ ಸೈಟ್ ವಾಪಸ್, ವಾಲ್ಮೀಕಿ ನಿಗಮದ ಪ್ರಕರಣದಲ್ಲಿ ದುಡ್ಡು ವಾಪಸ್ ಹಾಕ್ತೀವಿ ಅಂತಾರೆ. ವಕ್ಫ್ ಕಾಯ್ದೆಯಲ್ಲಿ ನೋಟಿಸ್ ಕೊಟ್ಟು ವಾಪಸ್ ಪಡೆದರು. ಆಡಳಿತಕ್ಕೆ ನಾಯಕತ್ವ, ದಿಕ್ಕು-ದೆಸೆ, ದಿಕ್ಸೂಚಿ ಇಲ್ಲ. ಅಧಿಕಾರಿಗಳೂ ಈ ಸರ್ಕಾರದ ವೈಖರಿಯಿಂದ ಬೇಸತ್ತಿದ್ದಾರೆ. ಅಧಿಕಾರಿಗಳ ಹಲವು ಆತ್ಮಹತ್ಯೆ ಪ್ರಕರಣಗಳು ನಡೆದಿವೆ, ಆಡಳಿತ ವ್ಯವಸ್ಥೆ ಕುಸಿದಿದೆ. ಅಧಿಕಾರಿಗಳ ಮೇಲೆ ದೊಡ್ಡ ಪ್ರಮಾಣದ ರಾಜಕೀಯ ಒತ್ತಡ ಹಾಕಲಾಗುತ್ತಿದೆ. ಕಾನೂನು ಬಾಹಿರ ಕ್ರಮಗಳು ಆಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ರಾಜ್ಯದ ಜನ ಈ ಸರ್ಕಾರವನ್ನು ಕಿತ್ತೊಗೆಯಲು ತೀರ್ಮಾನ ಮಾಡಿದ್ದಾರೆ. ಈ ಸರ್ಕಾರ ತುಷ್ಟೀಕರಣದ ಪರಾಕಾಷ್ಟೆ ಮುಟ್ಟಿದೆ. ಪೊಲೀಸ್ ಠಾಣೆ ಮೇಲೆ ಮುತ್ತಿಗೆ ಹಾಕಿದ್ದನ್ನು ವಾಪಸ್ ಪಡೆದಿದ್ದಾರೆ. ಪೊಲೀಸ್ ಇಲಾಖೆಯ ನೈತಿಕತೆ ಸಂಪೂರ್ಣ ಕುಸಿದು ಹೋಗಿದೆ. ಪ್ರಕರಣ ವಾಪಸ್ ಪಡೆಯಲು ಅಧಿಕಾರಿಗಳು ಹೇಗೆ ಅನುಮೋದನೆ ಕೊಡ್ತಾರೆ, ಅದಕ್ಕೆ ಈ ಸರ್ಕಾರ ಅನುಮೋದನೆ ನೀಡುತ್ತದೆ ಎಂದು ಪ್ರಶ್ನಿಸಿದರು.ಇನ್ನು ವಕ್ಫ್ ಎಂಬುದು ಚುನಾವಣೆ ಗಿಮಿಕ್ ಮಾತ್ರವೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರತಿ ಜಿಲ್ಲೆ, ಹಳ್ಳಿಯಲ್ಲಿ ಅಕ್ರಮವಾಗಿ ನೋಟಿಸ್ ಕೊಟ್ಟಿದ್ದಾರೆ. ಅಲ್ಲಿ ಪ್ರತಿ ಗ್ರಾಮದಲ್ಲಿ ಹೋರಾಟ ನಡೆಯಲಿದೆ. ಪ್ರತಿ ಜಿಲ್ಲೆಯಲ್ಲಿ ಹೋರಾಟ ನಡೆಯಲಿದೆ. ಈ ಕುರಿತು ನಾವು ಕಾನೂನು ಹೋರಾಟ ನಡೆಸಲಿದ್ದೇವೆ. ಶಿಗ್ಗಾವಿ-ಸವಣೂರಿನಲ್ಲಿ ಯಾವ ಆಸ್ತಿಗಳಿಗೆ ಹೀಗೆ ಹೆಸರು ಹಚ್ಚಿದ್ದಾರೋ ಅದನ್ನು ದಾಖಲೆ ಸಮೇತ ನನಗೆ ಕೊಡಿ, ನಾನು ಕಾನೂನು ಹೋರಾಟ ನಡೆಸುತ್ತೇನೆ. ಇನ್ನು ಜಿಲ್ಲೆಯಲ್ಲಿ ಎಲ್ಲೆಲ್ಲಿ ರೈತರ ಜಮೀನು, ಆಸ್ಪತ್ರೆ, ಶಾಲೆ, ಕೆರೆ ಎಲ್ಲವನ್ನೂ ದಾಖಲೆ ಕೊಟ್ಟರೆ ಇದರ ವಿರುದ್ಧವೂ ಜನರನ್ನು ಸೇರಿಸಿ ಹಾಗೂ ಕಾನೂನು ಹೋರಾಟ ಮಾಡಲಿದ್ದೇವೆ ಎಂದರು.