ಕನ್ನಡಪ್ರಭ ವಾರ್ತೆ ನಾಗಮಂಗಲ
ಪಟ್ಟಣದ ಹೊರವಲಯ ಎ.ಶ್ರೀರಾಮನಹಳ್ಳಿ ಗ್ರಾಮದ ಬಳಿಯ ಹೆಂಚಿನ ಕಾರ್ಖಾನೆ ಮತ್ತು ಸ್ಟಾರ್ ಗ್ರೂಪ್‌ಗೆ ಸೇರಿದ ಕೋಳಿ ಫಾರಂ ಸೇರಿದಂತೆ ತಾಲೂಕಿನ ಕರಡಹಳ್ಳಿ ಗ್ರಾಪಂ ವ್ಯಾಪ್ತಿಯ ಹೊಸಕೊಪ್ಪಲು, ತಟ್ಟಹಳ್ಳಿ, ಚಿಕ್ಕಯಗಟಿ ಸಮೀಪವಿರುವ ಕೋಳಿ ಫಾರಂಗಳು, ಕೋಳಿ ಫೀಡ್ಸ್ ಫ್ಯಾಕ್ಟರಿ, ಹ್ಯಾಚರೀಸ್, ಎಚ್.ಎನ್.ಕಾವಲ್ ಸಮೀಪದ ಮೂಳೆ ಫ್ಯಾಕ್ಟರಿ ಮತ್ತು ಕೋಳಿ ಫಾರಂಗಳಿಗೆ ಗುರುವಾರ ಭೇಟಿ ಕೊಟ್ಟ ತಹಸೀಲ್ದಾರ್ ಅಶೋಕ್, ಡಿವೈಎಸ್‌ಪಿ ಬಿ.ಚಲುವರಾಜು ನೇತೃತ್ವದ ಅಧಿಕಾರಿಗಳ ತಂಡ ವಲಸಿಗ ಕೂಲಿ ಕಾರ್ಮಿಕರ ಆಧಾರ್ ಕಾರ್ಡ್, ಪಾನ್ ಕಾರ್ಡ್ ಮತದಾರರ ಗುರುತಿನ ಚೀಟಿ ಸಹಿತ ಕುಟುಂಬದಲ್ಲಿ ಎಷ್ಟು ಮಂದಿ ಇದ್ದಾರೆ. ಯಾವ ರಾಜ್ಯಗಳಿಂದ ಇಲ್ಲಿಗೆ ಬಂದು ಎಷ್ಟು ವರ್ಷಗಳಿಂದ ಕೂಲಿ ಕೆಲಸ ಮಾಡುತ್ತಿದ್ದಾರೆಂಬುದರ ಬಗ್ಗೆ ತನಿಖೆ ನಡೆಸಿದರು.
ವಲಸಿಗ ಕೂಲಿಕಾರ್ಮಿಕರ ದಾಖಲಾತಿ ಪರಿಶೀಲನೆ ವೇಳೆ ಶೇ.70 ರಿಂದ80ರಷ್ಟು ಮಂದಿ ಬಿಹಾರ ರಾಜ್ಯದವರು. ಇನ್ನುಳಿದಂತೆ ಉತ್ತರ ಪ್ರದೇಶ, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಸಾ ಮತ್ತು ಅಸ್ಸಾಂ ರಾಜ್ಯದವರೆಂದು ತಿಳಿದುಬಂದಿದೆ. ವಲಸಿಗ ಕೂಲಿಕಾರ್ಮಿಕರ ಪೈಕಿ ಬಹುತೇಕ ಮಂದಿ ಅನಕ್ಷರಸ್ಥರಾಗಿರುವುದರಿಂದ ಅವರ ಶಾಲಾ ದಾಖಲಾತಿಗಳು ಲಭ್ಯವಾಗಿಲ್ಲ ಎಂದು ತಿಳಿದುಬಂದಿದೆ.ತನಿಖಾ ತಂಡದಲ್ಲಿ ಮತದಾರರ ನೋಂದಣಾಧಿಕಾರಿ ಹಾಗೂ ಜಿಪಂ ಡಿಎಸ್-1 ಶಿವಲಿಂಗಯ್ಯ, ತಹಸೀಲ್ದಾರ್ ಅಶೋಕ್, ತಾಪಂ ಇಒ ಬಿ.ಎಸ್.ಸತೀಶ್, ಡಿವೈಎಸ್‌ಪಿ ಬಿ.ಚಲುವರಾಜು, ಪುರಸಭೆ ಮುಖ್ಯಾಧಿಕಾರಿ ವೀಣಾ, ಬೆಳ್ಳೂರು ಪ.ಪಂ. ಮುಖ್ಯಾಧಿಕಾರಿ ಲಕ್ಷ್ಮಣ, ನಾಗಮಂಗಲ ಪಟ್ಟಣ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಶಿವಕುಮಾರ್, ಅಪರಾಧ ವಿಭಾಗದ ಪಿಎಸ್‌ಐ ಲಕ್ಷ್ಮಣ್ ಕಾಮಣ್ಣವರ್ ಇದ್ದರು.