ಕೆಪಿಎಸ್‌ಸಿ ನೇಮಕಾತಿ ಅಕ್ರಮ ಆರೋಪ ಸಂಬಂಧ ಬಂಧನ ಭೀತಿ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನು ಕೋರಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಎಸ್.ಸಾಹುಕಾರ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.
ಬೆಂಗಳೂರು : ಕೆಪಿಎಸ್‌ಸಿ ನೇಮಕಾತಿ ಅಕ್ರಮ ಆರೋಪ ಸಂಬಂಧ ಬಂಧನ ಭೀತಿ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನು ಕೋರಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಎಸ್.ಸಾಹುಕಾರ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.
ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಶಿವಶಂಕರಪ್ಪ ಸಾಹುಕಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರ ಪೀಠ ಈ ಆದೇಶ ಮಾಡಿದೆ. ಜತೆಗೆ, ವಿಸ್ತೃತ ತೀರ್ಪಿನಲ್ಲಿ ಪ್ರತ್ಯೇಕವಾಗಿ ಕಾರಣಗಳನ್ನು ನೀಡಲಾಗುವುದು ಎಂದು ತಿಳಿಸಿತು.
ಇಂತಹ ಕೃತ್ಯಗಳಿಂದ ಇತ್ತೀಚೆಗೆ ದೇಶದಲ್ಲಿ ಭಾರೀ ಪ್ರತಿಭಟನೆ
ಇದಕ್ಕೂ ಮುನ್ನ ವಿಚಾರಣೆ ವೇಳೆ ಪ್ರತಿಕ್ರಿಯಿಸಿದ ಪೀಠ, ಇಂತಹ ಕೃತ್ಯಗಳಿಂದ ಇತ್ತೀಚೆಗೆ ದೇಶದಲ್ಲಿ ಭಾರೀ ಪ್ರತಿಭಟನೆ ನಡೆಯಿತು. ನೀಟ್ ಪರೀಕ್ಷೆಯಲ್ಲಿ ಅಕ್ರಮ ನಡೆದ ಪರಿಣಾಮ ಅನೇಕ ಅಭ್ಯರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಶುವೈದ್ಯಾಧಿಕಾರಿಗಳ ನೇಮಕ ಪ್ರಕರಣದಲ್ಲಿ 24 ಪ್ರತಿಭಾವಂತರಿಗೆ ಅನ್ಯಾಯವಾಗಿದೆ ಎಂದು ವರದಿ ಇದೆ. ಹೀಗಾದರೆ, ಹಗಲು-ರಾತ್ರಿ ಎನ್ನದೆ ಓದಿದವರ ಕಥೆ ಏನಾಗಬೇಕು? ಪ್ರತಿಭಾನ್ವಿತ ವಿದ್ಯಾರ್ಥಿಗಳ ಪಾಡೇನು? ಅವರ ಕುಟುಂಬದವರ ಸ್ಥಿತಿ ಏನಾಗಬೇಕು ಎಂದು ಪ್ರಶ್ನಿಸಿದ ಪೀಠ, ಆಯೋಗದ ಮೇಲಿನ ಜನರ ವಿಶ್ವಾಸ ನಾಶವಾಗಿದೆ. ಜನ ಅಸಹಾಯಕರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿತು.
ಬೇರೆಯವರಿಗೆ ಹೋಲಿಸಿದರೆ ಪ್ರಕರಣದಲ್ಲಿ ಅರ್ಜಿದಾರರ ಪಾತ್ರ ಗಂಭೀರವಾಗಿದೆ. ಸರ್ಕಾರ ಒದಗಿಸಿರುವ ದಾಖಲೆಗಳು ಅರ್ಜಿದಾರರ ಪಾತ್ರವನ್ನೂ ತೋರಿಸುತ್ತದೆ. ಇಂಥ ಚಟುವಟಿಕೆಗೆ ಕೊನೆ ಹಾಡಬೇಕು. ಅಲ್ಲಲ್ಲೇ ಬಂಧಿಸಬೇಕು. ಇದೊಂದು ವ್ಯವಸ್ಥಿತ ವಂಚನೆ. ಇಲ್ಲಿ ಸಾಹುಕಾರ್ ಕುಟುಂಬ, ಪರೀಕ್ಷಾ ನಿಯಂತ್ರಕರು, ಸದಸ್ಯರು ಎಲ್ಲರೂ ಭಾಗಿಯಾಗಿದ್ದಾರೆ ಎಂದು ಪೀಠ ಕಟುವಾಗಿ ಅಭಿಪ್ರಾಯಪಟ್ಟಿತು.
ಕೋರ್ಟ್ ತೀವ್ರ ಆಕ್ರೋಶ
ಈ ಪ್ರಕರಣದಲ್ಲಿ 24 ಪ್ರತಿಭಾವಂತರಿಗೆ ಅನ್ಯಾಯ ಆಗಿದೆ. ಹೀಗಾದರೆ ಹಗಲು- ರಾತ್ರಿ ಓದಿದವರ ಕಥೆ ಏನಾಗಬೇಕು?
ಬೇರೆಯವರಿಗೆ ಹೋಲಿಸಿದ್ರೆ ಪ್ರಕರಣದಲ್ಲಿ ಅರ್ಜಿದಾರರ ಪಾತ್ರ ಗಂಭೀರವಾಗಿದೆ. ಸರ್ಕಾರದ ದಾಖಲೆ ಇದನ್ನೇ ಹೇಳಿದೆ
ಇಂಥ ಚಟುವಟಿಕೆಗೆ ತಕ್ಷಣವೇ ಕೊನೆ ಹಾಡಲೇಬೇಕು. ಅಲ್ಲಲ್ಲೇ ಬಂಧಿಸಬೇಕು. ಇದೊಂದು ವ್ಯವಸ್ಥಿತ ವಂಚನೆ ಪ್ರಕರಣ
ಇಲ್ಲಿ ಸಾಹುಕಾರ್ ಕುಟುಂಬ, ಪರೀಕ್ಷಾ ನಿಯಂತ್ರಕರು, ಸದಸ್ಯರು ಎಲ್ಲರೂ ಭಾಗಿಯಾಗಿದ್ದಾರೆ: ಹೈಕೋರ್ಟ್ ಪೀಠ ಕಿಡಿ

