ಹನುಮಸಾಗರ: ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಅಡಿಯಲ್ಲಿ ₹15,000 ಮೌಲ್ಯದ ಕಟಿಂಗ್ (ಸಲೂನ್) ಕಿಟ್ ವಿತರಣೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಗ್ರಾಮದ ಕಟಿಂಗ್ ಸಲೂನ್ ಹಾಗೂ ಹಡಪದ ಸಮುದಾಯದ ಯುವಕರು ಸೋಮವಾರ ಪೋಸ್ಟ್ ಆಫೀಸ್ ಎದುರು ಪ್ರತಿಭಟನೆ ನಡೆಸಿದರು.
ಆದರೆ ಹನುಮಸಾಗರ ಪೋಸ್ಟ್ ಆಫೀಸ್‌ನಲ್ಲಿ ವಿತರಿಸಲಾದ ಬಹುತೇಕ ಕಿಟ್‌ಗಳಲ್ಲಿ ಪೂರ್ಣ ಪ್ರಮಾಣದ ಉಪಕರಣಗಳೇ ಇಲ್ಲ. ಒಂದು ಕಿಟ್‌ನಲ್ಲಿ ಇರಬೇಕಾದ ಕಟಿಂಗ್ ಮೆಷಿನ್, ಕತ್ತರಿ, ಟ್ರಿಮರ್, ಡ್ರೈಯರ್, ಕೋಂಬ್ ಸೆಟ್ ಸೇರಿದಂತೆ ಹಲವು ಅವಶ್ಯಕ ಉಪಕರಣಗಳ ಬದಲು ಕೇವಲ ₹1,000ರಿಂದ ₹1,500 ಮೌಲ್ಯದ ಕೆಲವೇ ಸಾಮಾನುಗಳು ಇದ್ದವು ಎಂದು ಪ್ರತಿಭಟನಾಕಾರರು ಆರೋಪಿಸಿದರು.
ನಿಯಮದ ಪ್ರಕಾರ ಕಿಟ್‌ಗಳನ್ನು ಲಾಭಾರ್ಥಿಗಳಿಗೆ ವಿತರಿಸುವ ವೇಳೆ ಟ್ರೈನರ್ ಅಥವಾ ಸಂಬಂಧಿಸಿದ ಅಧಿಕಾರಿಗಳ ಸಮ್ಮುಖದಲ್ಲೇ ಸೀಲ್ ತೆರೆಯಬೇಕು. ಆದರೆ ಹನುಮಸಾಗರ ಪೋಸ್ಟ್ ಆಫೀಸ್‌ನಲ್ಲಿ ನಾವು ಬರುವುದಕ್ಕೂ ಮುಂಚೆಯೇ ಕಿಟ್‌ಗಳನ್ನು ತೆರೆದು, ಅಪೂರ್ಣ ಸಾಮಾನುಗಳನ್ನು ನಮಗೆ ನೀಡಲಾಗುತ್ತಿದೆ. ಇದರಿಂದ ಕಿಟ್‌ನಲ್ಲಿ ಏನು ಕೊರತೆ ಇದೆ ಎಂಬುದನ್ನು ತಕ್ಷಣ ಸಾಬೀತುಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಬೇರೆ ಊರಿನಲ್ಲಿ ಕೆಲವು ಲಾಭಾರ್ಥಿಗಳಿಗೆ ಪೋಸ್ಟ್ ಮುಖಾಂತರ ಸಂಪೂರ್ಣ ಕಿಟ್ ದೊರೆತಿದೆ. ನಮಗೆ ಮಾತ್ರ ಬೆರಳೆಣಿಕೆಯಷ್ಟು ಸಾಮಾನುಗಳು ಬಂದಿವೆ. ಇದು ಉದ್ದೇಶಪೂರ್ವಕ ವ್ಯತ್ಯಾಸ ಅಥವಾ ನಿರ್ಲಕ್ಷ್ಯ ಎಂಬ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಪೋಸ್ಟ್ ಆಫೀಸ್ ಅಧಿಕಾರಿಗಳನ್ನು ಪ್ರಶ್ನಿಸಿದಾಗ, ನಮಗೆ ಹೇಗೆ ಬಂದಿದೆಯೋ ಹಾಗೆಯೇ ವಿತರಿಸಿದ್ದೇವೆ ಎಂದು ಹೇಳುತ್ತಾರೆ. ಯಾವುದೇ ಲಿಖಿತ ಸ್ಪಷ್ಟನೆ ಅಥವಾ ಸಮರ್ಪಕ ಮಾಹಿತಿ ನೀಡುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು. ಕಿಟ್‌ಗಳ ಮರುಪರಿಶೀಲನೆ ಮಾಡಿ ನ್ಯಾಯ ಒದಗಿಸಬೇಕು. ಸಮಸ್ಯೆಯನ್ನು ತಕ್ಷಣ ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದ ಹೋರಾಟ ಹಾಗೂ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ಸುರೇಶ ಹಡಪದ, ಭರತ ಹಡಪದ, ರುದ್ರಪ್ಪ ಹೊನ್ನಪ್ಪ ಹಡಪದ, ಮಂಜುನಾಥ ಶಂಕ್ರರಪ್ಪ ಹಡಪದ, ಮಲ್ಲಪ್ಪ ಹಡಪದ, ಶಾಣಪ್ಪ ಹಡಪದ, ವರುಣ ಹಡಪದ ಹಾಗೂ ಯಮನೂರಪ್ಪ ಹಡಪದ ಇದ್ದರು.
ಟೂಲ್ ಕಿಟ್‌ಗಳನ್ನು ಕಳೆದ ಒಂದು ವರ್ಷದಿಂದ ನಿರಂತರವಾಗಿ ವಿತರಣೆ ಮಾಡಲಾಗುತ್ತಿದೆ. ಇದುವರೆಗೆ ಯಾವುದೇ ರೀತಿಯ ತೊಂದರೆಗಳು ಎದುರಾಗಿರಲಿಲ್ಲ. ಇತ್ತೀಚೆಗೆ ಉಂಟಾಗಿರುವ ಸಮಸ್ಯೆಯ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಅವರೊಂದಿಗೆ ವಿಚಾರಿಸಿ ಶೀಘ್ರದಲ್ಲೇ ಸಮಸ್ಯೆ ಬಗೆಹರಿಸಲಾಗುವುದು ಎಂದು ಹನುಮಸಾಗರ ಪೋಸ್ಟ್ ಮಾಸ್ಟರ್ ಸುನೀಲ್ ಹೇಳಿದರು.