ಕೊಪ್ಪಳ: ಇಂದಿನ ಯುವ ಜನಾಂಗದಲ್ಲಿ ಧೈರ್ಯ, ಆತ್ಮವಿಶ್ವಾಸ ಕ್ಷೀಣಿಸುತ್ತಿದೆ. ವಿವೇಕಾನಂದರ ಆದರ್ಶಗಳನ್ನು ಪಾಲಿಸಿದಲ್ಲಿ ಯಾವುದೇ ಸಮಸ್ಯೆ, ಸವಾಲುಗಳನ್ನು ಮೆಟ್ಟಿನಿಲ್ಲಲು ಸಾಧ್ಯ ಎಂದು ರಾಮಕೃಷ್ಣ ಆಶ್ರಮದ ಶ್ರೀ ಚೈತನ್ಯಾನಂದ ಸ್ವಾಮೀಜಿ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ವಿಶ್ವವಿದ್ಯಾಲಯದ ನೂತನ ಕುಲಪತಿ ಪ್ರೊ. ಎಸ್.ವಿ. ಡಾಣಿ ಮಾತನಾಡಿ, ಸ್ವಾಮಿ ವಿವೇಕಾನಂದರ ಚಿಂತನೆಗಳು ಸೇರಿದಂತೆ ಅನೇಕ ಮಹನೀಯರ ಅನುಭಾವ ನುಡಿಗಳು, ವಿಚಾರಗಳ ಪಾಲನೆಯಾಗಬೇಕಾಗಿದೆ. ಬುದ್ಧ, ಬಸವ, ಅಂಬೇಡ್ಕರ್, ಲೋಹಿಯಾ ಸೇರಿದಂತೆ ಹಲವು ಮಹಾತ್ಮರು ಶೋಷಿತರ ಧ್ವನಿಯಾಗಿ ಸೇವೆಗೈದಿದ್ದಾರೆ. ಅಂಥವರ ಅನುಭವ ನುಡಿಗಳ ಪಾಲನೆ, ಆಚರಣೆ ಸದ್ಯದ ಅಗತ್ಯತೆಯಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಇಲಾಖೆಯ ಸಹಾಯಕ ನಿರ್ದೇಶಕ ವಿಠ್ಠಲ ಬಿ. ಜಾಬಗೌಡರ, ಯಾರಲ್ಲಿ ಅದಮ್ಯ ಶಕ್ತಿ, ವಿವೇಚನೆ ಹಾಗೂ ಛಲ ಇರುತ್ತದೆಯೋ ಅವರೆ ನಿಜವಾದ ಯುವಕರು. ಯುವಕರು ಸದೃಢರಾದರೆ, ದೇಶ ಸದೃಢವಾಗುತ್ತದೆ ಎಂದರು.ವಿವಿ ನೂತನ ಕುಲಸಚಿವ ಡಾ. ವೈ.ಬಿ. ಅಂಗಡಿ, ಆಡಳಿತಾಧಿಕಾರಿ ಪ್ರೊ. ತಿಮ್ಮಾರೆಡ್ಡಿ ಮೇಟಿ ಮಾತನಾಡಿ, ಯುವಕರು ಸ್ವಾವಲಂಬನೆ ಬದುಕು ಸಾಗಿಸುವ ಮೂಲಕ ಸಾಧನೆ ಮೆರೆಯಲು, ಈ ಮೂಲಕ ದೇಶಕ್ಕೆ ಉತ್ತಮ ಕೊಡುಗೆ ನೀಡಲು ತಿಳಿಸಿದರು. ನೂತನ ಕುಲಪತಿ ಪ್ರೊ. ಎಸ್.ವಿ. ಡಾಣಿ, ಕುಲಸಚಿವ ಡಾ. ವೈ.ಬಿ. ಅಂಗಡಿ, ಶ್ರೀ ಚೈತನ್ಯಾನಂದ ಸ್ವಾಮೀಜಿ, ವಿಠ್ಠಲ ಜಾನಗೌಡ, ಪ್ರೊ. ತಿಮ್ಮಾರೆಡ್ಡಿ ಮೇಟಿ ಅವರನ್ನು ಸನ್ಮಾನಿಸಲಾಯಿತು. ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ, ಪ್ರಾರ್ಥನೆ, ಪುಷ್ಪಾರ್ಪಣೆ ಮಾಡಲಾಯಿತು.
ವಿದ್ಯಾರ್ಥಿನಿ ಉಷಾ ಪ್ರಾರ್ಥಿಸಿದರು. ಪ್ರಾಧ್ಯಾಪಕರಾದ ಡಾ. ಗೀತಾ ಪಾಟೀಲ ಸ್ವಾಗತಿಸಿದರು. ಡಾ. ಬಸವರಾಜ ಗಡಾದ ಕಾರ್ಯಕ್ರಮ ನಿರೂಪಿಸಿದರು. ಡಾ. ವೀರೇಶ ಉತ್ತಂಗಿ ವಂದಿಸಿದರು.