
ಗದಗ: ಗ್ರಾಮೀಣ ಜನರ ಜೀವನೋಪಾಯಕ್ಕೆ ಭದ್ರತೆ ನೀಡಲು ಮತ್ತು ಸುಸ್ಥಿರ ಆಸ್ತಿ ಸೃಷ್ಟಿಸಲು ಕೇಂದ್ರ ಸರ್ಕಾರವು ಹಳೆಯ ನರೇಗಾ ಯೋಜನೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಿ ಅತ್ಯಂತ ಪರಿಣಾಮಕಾರಿ ವಿಬಿ- ರಾಮ್ ಜಿ ಕಾಯ್ದೆ 2025(ವಿಕಸಿತ್ ಭಾರತ್ ರೋಜಗಾರ್ ಮತ್ತು ಆಜೀವಿಕಾ ಮಿಷನ್) ಅನ್ನು ಜಾರಿಗೆ ತಂದಿದೆ ಎಂದು ನರಗುಂದ ಶಾಸಕ ಸಿ.ಸಿ. ಪಾಟೀಲ ತಿಳಿಸಿದರು.
ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಹಿಂದಿನ ನರೇಗಾ ಯೋಜನೆಯಲ್ಲಿ ಪಾರದರ್ಶಕತೆಯ ಕೊರತೆ, ನಕಲಿ ಜಾಬ್ ಕಾರ್ಡ್‌ಗಳು, ಹಣಕಾಸಿನ ಸೋರಿಕೆ ಮತ್ತು ಕಳಪೆ ಗುಣಮಟ್ಟದ ಕಾಮಗಾರಿಗಳು ದೊಡ್ಡ ಸವಾಲಾಗಿದ್ದವು. ವಿಶೇಷವಾಗಿ ಪಶ್ಚಿಮ ಬಂಗಾಳ, ಪಂಜಾಬ್‌ನಂತಹ ರಾಜ್ಯಗಳಲ್ಲಿ ಸಾವಿರಾರು ಕೋಟಿ ಹಣ ದುರುಪಯೋಗವಾಗಿತ್ತು. ಈ ಹಿನ್ನೆಲೆ ಮೋದಿ ಸರ್ಕಾರವು ಸಂಪೂರ್ಣ ರಚನಾತ್ಮಕ ಬದಲಾವಣೆ ತಂದಿದೆ ಎಂದರು.
ಪ್ರತಿ ಗ್ರಾಮೀಣ ಕುಟುಂಬಕ್ಕೆ ವರ್ಷಕ್ಕೆ ನೀಡಲಾಗುತ್ತಿದ್ದ 100 ದಿನಗಳ ಉದ್ಯೋಗವನ್ನು 125 ದಿನಗಳಿಗೆ ಏರಿಸಲಾಗಿದೆ. ಕೃಷಿ ಚಟುವಟಿಕೆಗಳ ಸಮಯದಲ್ಲಿ (ಬಿತ್ತನೆ ಮತ್ತು ಕೊಯ್ಲು) ಕಾರ್ಮಿಕರ ಕೊರತೆ ನೀಗಿಸಲು 60 ದಿನಗಳ ಕಾಲ ಕೃಷಿ ವಿರಾಮ ಘೋಷಿಸಲು ರಾಜ್ಯಗಳಿಗೆ ಅಧಿಕಾರ ನೀಡಲಾಗಿದೆ. ನಕಲಿ ಬಿಲ್ ಮತ್ತು ಹಗರಣಗಳನ್ನು ತಡೆಯಲು ಬಯೋಮೆಟ್ರಿಕ್ ಹಾಜರಾತಿ, ಉಪಗ್ರಹ ಚಿತ್ರಣ ಮತ್ತು ಕೃತಕ ಬುದ್ಧಿಮತ್ತೆ ಆಧರಿತ ಮೇಲ್ವಿಚಾರಣೆಯನ್ನು ಕಡ್ಡಾಯಗೊಳಿಸಲಾಗಿದೆ. ಕೇವಲ ಮಣ್ಣಿನ ರಸ್ತೆಗಳ ಬದಲಿಗೆ ಶಾಲೆಗಳು, ಅಂಗನವಾಡಿ ಕೇಂದ್ರಗಳು ಮತ್ತು ಜಲ ಸಂರಕ್ಷಣೆಯಂತಹ ಬಾಳಿಕೆ ಬರುವ ಆಸ್ತಿಗಳನ್ನು ನಿರ್ಮಿಸಲು ಆದ್ಯತೆ ನೀಡಲಾಗಿದೆ ಎಂದರು.ವಿಳಂಬ ಪಾವತಿಗೆ ಸ್ವಯಂಚಾಲಿತ ಪರಿಹಾರದ ವ್ಯವಸ್ಥೆ ಮಾಡಲಾಗಿದ್ದು, ಕಾರ್ಮಿಕರ ಖಾತೆಗೆ ನೇರವಾಗಿ ಹಣ ತಲುಪಲಿದೆ ಎಂದು ಯೋಜನೆಯ ಹೊಸ ಸ್ವರೂಪದ ಬಗ್ಗೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರುಡಗಿ, ಮಾಜಿ ಅಧ್ಯಕ್ಷ ಎಂ.ಎಸ್. ಕರಿಗೌಡ್ರ, ರವಿ ದಂಡೀನ, ನಗರಸಭೆ ಮಾಜಿ ಅಧ್ಯಕ್ಷೆ ಉಷಾ ದಾಸರ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ, ಶಿವರಾಜಗೌಡ ಹಿರೇಮನಿಪಾಟೀಲ, ಅನಿಲ ಅಬ್ಬಿಗೇರಿ, ಮಹೇಶ ದಾಸರ, ಸ್ವಾತಿ ಅಕ್ಕಿ, ಶ್ರೀಪತಿ ಉಡುಪಿ ಸೇರಿದಂತೆ ಹಲವು ಮುಖಂಡರು ಇದ್ದರು.ರಾಜ್ಯದ ಕಾಂಗ್ರೆಸ್ ಸರ್ಕಾರವು ತನ್ನ ಖಜಾನೆ ಖಾಲಿಯಾದ ಹಿನ್ನೆಲೆ ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ. ಕೇಂದ್ರ ಸರ್ಕಾರವು ಅನುದಾನದ ಹಂಚಿಕೆಯಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ. ಈ ಹೊಸ ಕಾಯ್ದೆಯಿಂದ ರಾಜ್ಯಗಳಿಗೆ ಹೆಚ್ಚುವರಿ ಲಾಭ ಸಿಗಲಿದೆ. ಸಿದ್ದರಾಮಯ್ಯ ತಮ್ಮ ಸರ್ಕಾರದ ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಈ ಕಾಯ್ದೆ ತಿದ್ದುಪಡಿ ಮುಂದಿಟ್ಟುಕೊಂಡು ಹೋರಾಟ ಮಾಡುತ್ತೇವೆ ಎನ್ನುತ್ತಿದ್ದಾರೆ. ಇದು ಜನರ ಬೇರೆಡೆ ಸೆಳೆಯುವ ತಂತ್ರವಾಗಿದೆ ಎಂದು ನರಗುಂದ ಶಾಸಕ ಸಿ.ಸಿ. ಪಾಟೀಲ ತಿಳಿಸಿದರು.