ಎಸ್ಸಿ, ಎಸ್ಟಿ ಕುಟುಂಬಗಳಿಗೆ ಪರಿಹಾರ ದೊರಕಿಸದ ಆರೋಪ

KannadaprabhaNewsNetwork |  
Published : Jul 06, 2026, 02:30 AM IST
ಪೊಟೋ ಪೈಲ್ ಳ 5ಬಿಕೆಲ್3 | Kannada Prabha

ಸಾರಾಂಶ

ಇದೇ ವೇಳೆ, ಕುಮಟಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಜನಾ ಜೋಗಳೇಕರ ವಿರುದ್ಧ ನಡೆದಿರುವುದಾಗಿ ಹೇಳಲಾದ ದಲಿತ ದೌರ್ಜನ್ಯ ಪ್ರಕರಣದಲ್ಲಿ ಕರ್ತವ್ಯಲೋಪ ಎಸಗಿರುವ ಆರೋಪದಡಿ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಭಟ್ಕಳ ಡಿವೈಎಸ್ಪಿಗೆ ಪ್ರತ್ಯೇಕ ಮನವಿ ಸಲ್ಲಿಸಲಾಯಿತು.

ದಲಿತ ರಕ್ಷಣಾ ಸಮಿತಿಯಿಂದ ಭಟ್ಕಳ ನಗರ ಠಾಣೆಯಲ್ಲಿ ದೂರು

ಕನ್ನಡಪ್ರಭ ವಾರ್ತೆ ಭಟ್ಕಳ

ರಾಷ್ಟ್ರೀಯ ಹೆದ್ದಾರಿ ೬೬ರ ಅಗಲೀಕರಣದಿಂದ ಮನೆ ಕಳೆದುಕೊಳ್ಳುತ್ತಿರುವ ಸೂಸಗಡಿಯ ಕೋಟೇಶ್ವರ ನಗರದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟು ಸಮುದಾಯದ ಕುಟುಂಬಗಳಿಗೆ ಕಾನೂನುಬದ್ಧವಾಗಿ ದೊರೆಯಬೇಕಾದ ಪುನರ್ವಸತಿ ಹಾಗೂ ಪರಿಹಾರ ಸೌಲಭ್ಯ ಒದಗಿಸದೆ ಕರ್ತವ್ಯಲೋಪ ಎಸಗಿರುವ ಆರೋಪದಡಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ. ಲಕ್ಷ್ಮೀ ಪ್ರಿಯಾ ಹಾಗೂ ಭಟ್ಕಳ ನಗರಸಭೆ ಆಯುಕ್ತ ಬಾಬಾಸಾಹೇಬ್ ಮಾನೆ ವಿರುದ್ಧ ಭಟ್ಕಳ ಶಹರ ಪೊಲೀಸ್ ಠಾಣೆಗೆ ಸಾಮಾಜಿಕ ಕಾರ್ಯಕರ್ತ ಕಿರಣ ನಾರಾಯಣ ಶಿರೂರ ದೂರು ಸಲ್ಲಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕಾಗಿ ಸ್ವಾಧೀನಗೊಂಡಿರುವ ಮನೆಗಳಿಗೆ ಸಂಬಂಧಿಸಿದ ಪರಿಹಾರದ ಮೊತ್ತ ನಗರಸಭೆ ಖಾತೆಗೆ ಜಮಾ ಆಗಿದ್ದರೂ, ಭೂಸ್ವಾಧೀನ, ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆ ಕಾಯ್ದೆ-೨೦೧೩ರಡಿ ಫಲಾನುಭವಿಗಳಾಗಿರುವ ಏಳು ಕುಟುಂಬಗಳಿಗೆ ಕಾನೂನುಬದ್ಧ ಪುನರ್ವಸತಿ ಹಾಗೂ ಪರಿಹಾರ ಸೌಲಭ್ಯ ಒದಗಿಸಿಲ್ಲ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟು (ದೌರ್ಜನ್ಯ ಪ್ರತಿಬಂಧ) ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಆಗ್ರಹಿಸಲಾಗಿದೆ.

ಇದೇ ವೇಳೆ, ಕುಮಟಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಜನಾ ಜೋಗಳೇಕರ ವಿರುದ್ಧ ನಡೆದಿರುವುದಾಗಿ ಹೇಳಲಾದ ದಲಿತ ದೌರ್ಜನ್ಯ ಪ್ರಕರಣದಲ್ಲಿ ಕರ್ತವ್ಯಲೋಪ ಎಸಗಿರುವ ಆರೋಪದಡಿ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಭಟ್ಕಳ ಡಿವೈಎಸ್ಪಿಗೆ ಪ್ರತ್ಯೇಕ ಮನವಿ ಸಲ್ಲಿಸಲಾಯಿತು.

ಮನವಿಯಲ್ಲಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲು ವಿಳಂಬ ಮಾಡಿರುವುದಲ್ಲದೆ, ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯೊಬ್ಬರನ್ನು ಸಂಜೆ ೭ರಿಂದ ಮರುದಿನ ಬೆಳಗ್ಗೆ ೩ರವರೆಗೆ ಪೊಲೀಸ್ ಠಾಣೆಯಲ್ಲೇ ಇರಿಸಿ ಕರ್ತವ್ಯಲೋಪ ಹಾಗೂ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಲಾಗಿದೆ. ಈ ಕುರಿತು ಈಗಾಗಲೇ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೂ ದೂರು ಸಲ್ಲಿಸಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಶಿಸ್ತು ಕ್ರಮ ಜರುಗಿಸಿ ಸಂತ್ರಸ್ತೆಗೆ ನ್ಯಾಯ ಒದಗಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ಸಂದರ್ಭ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ತುಳಸಿದಾಸ್ ಪಾವಸ್ಕರ್, ಜಿಲ್ಲಾ ಸಂಘಟನಾ ಸಂಚಾಲಕ ರವೀಂದ್ರ ಸುಬ್ಬ ಮಂಗಳ ಸೇರಿದಂತೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಪರಾಧ ಮುಕ್ತ ನಾಳೆಗೆ ಮುನ್ನುಡಿ ಬರೆದ ಕೈದಿಗಳ ಸೃಜನಶೀಲತೆ
ಕೈಗಾರಿಕಾ ಸಂಘಗಳು ನೋಂದಣಿ ಮಾಡಿಕೊಳ್ಳಲಿ: ಸಾಜಿದ್ ಮುಲ್ಲಾ